ಗುರುವಾಯನಕೆರೆ: ಸತತ ಮೂವತ್ತು ವರ್ಷಗಳ ಕಾಲ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಿ, 2016 ಜುಲೈನಲ್ಲಿ ಸೇನಾ ವಿಮಾನದಲ್ಲಿ ಕಾಣೆಯಾಗಿರುವ ವೀರ ಸೇನಾನಿ ಏಕನಾಥ್ ಶೆಟ್ಟಿಯವರ ಶಿಲಾ ಪ್ರತಿಮೆಯನ್ನು ಅವರ ಗುರುವಾಯನಕೆರೆಯ ಮನೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಂಟ್ ಯಶವಂತ ಗೋಪಾಲ ಶೆಟ್ಟಿ ಮತ್ತು ಭಾರತೀಯ ಭೂಸೇನೆಯ ನಿವೃತ್ತ ಮೇಜರ್ ಜನರಲ್ ಎಂ ವಿ ಭಟ್ ಮುಂಡಾಜೆ ಪ್ರತಿಮೆ ಅನಾವರಣಗೊಳಿಸಿದರು.
ಪತ್ನಿ,ಮಗಳು,ಮಗನ ಕನಸಿನಂತೆ ಪ್ರತಿಮೆ ನಿರ್ಮಾಣ
ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ರಿಂದ ಕೆತ್ತನೆ
ಯೋಧ ಏಕನಾಥ್ ಶೆಟ್ಟಿಯವರು ಭಾವನಾತ್ಮಕವಾಗಿ ಸದಾ ನಮ್ಮೊಂದಿಗೆ ಇದ್ದಾರೆಂದುಕೊಂಡು ಪ್ರತಿಕ್ಷಣ ಜೀವಿಸುತ್ತಿರುವವರು ಅವರ ಪತ್ನಿ ಜಯಂತಿ,ಮಗಳು ಆಶಿತಾ,ಮಗ ಅಕ್ಷಯ್ ಮನೆಯ ಆವರಣದಲ್ಲಿ ಪ್ರತಿಮೆ ಸ್ಥಾಪಿಸುವ ತೀರ್ಮಾನಕ್ಕೆ ಬಂದರು. ಇವರು ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ರಿಂದ ಕೃಷ್ಣ ಶಿಲೆಯ ಪ್ರತಿಮೆಯನ್ನು ಕೆತ್ತಿಸಿ ಗಣರಾಜ್ಯೋತ್ಸವದ ದಿನದ ಅನಾವರಣಗೊಳಿಸಿದರು.
ಸದಾ ನಗು ನಗುತ್ತಾ ಇರಬೇಕೆಂದು ಎಂ ವಿ ಭಟ್ ಸೂಚನೆ
ಏಕನಾಥ್ ಶೆಟ್ಟಿಯವರು ಸದಾ ನಮಗೆ ಪ್ರೇರಕ ಶಕ್ತಿಯಾಗಿದ್ದಾರೆ. ಅವರ ಪ್ರತಿಮೆಯ ಮುಂದೆ ಮಗ ಮಗಳು ಅಳಬಾರದು.ಸದಾ ನಗು ನಗುತ್ತಾ ಇರಬೇಕು. ಇದುವೇ ಏಕನಾಥ್ ಶೆಟ್ಟಿಯವರಿಗೆ ನಾವು ಕೊಡುವ ಗೌರವ ಎಂದು ಭೂ ಸೇನೆಯ ನಿವೃತ್ತ ಮೇಜರ್ ಜನರಲ್ ಎಂ ವಿ ಭಟ್ ಹೇಳಿದರು.
ಏಕನಾಥ್ ಶೆಟ್ಟಿಯವರು ನಮಗೆಲ್ಲರಿಗೂ ಪ್ರೇರಕ ಶಕ್ತಿ:ಯಶವಂತ ಗೋಪಾಲ ಶೆಟ್ಟಿ
ಏಕನಾಥ ಶೆಟ್ಟಿಯವರು ಇಂದು ನಮ್ಮೊಂದಿಗಿಲ್ಲ ಅನ್ನುವುದು ಕೊರಗಲ್ಲ,ಬದಲಾಗಿ ಅವರ 30 ವರ್ಷಗಳ ಸೈನ್ಯದ ಸೇವೆ ನಮಗೆಲ್ಲರಿಗೂ ಪ್ರೇರಕ ಶಕ್ತಿಯಾಗಬೇಕು ಎಂದು ವಾಯುಸೇನೆಯ ನಿವೃತ್ತ ಸಾರ್ಜೆಂಟ್ ಯಶವಂತ ಗೋಪಾಲ ಶೆಟ್ಟಿ ತಿಳಿಸಿದರು.
ಅತಿಥಿಗಳಿಗೆ, ಮಾಜಿ ಸೈನಿಕರಿಗೆ ಗೌರವ:
ಕಾರ್ಯಕ್ರಮದಲ್ಲಿ ಭಾಗಿಯಾದ ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಂಟ್ ಯಶವಂತ ಗೋಪಾಲ ಶೆಟ್ಟಿಯವರು ಹಾಗೂ ಭಾರತೀಯ ಭೂ ಸೇನೆಯ ನಿವೃತ್ತ ಮೇಜರ್ ಜನರಲ್ ಎಂ ವಿ ಭಟ್ ಮುಂಡಾಜೆಯವರಿಗೆ ಏಕನಾಥ್ ಶೆಟ್ಟಿಯವರ ಸಹೋದರ ಬಾಬು ಶೆಟ್ಟಿ ಕುತ್ತಾರ್ ಪದವು ಸನ್ಮಾನಿಸಿದರು.
ಏಕನಾಥ್ ಶೆಟ್ಟಿಯವರು ಕಣ್ಮರೆಯಾದ ದಿನದಿಂದ ಅವರ ಕುಟುಂಬಕ್ಕೆ ನಿರಂತರ ಸಹಕಾರ ನೀಡುತ್ತಾ ಬಂದಿರುವ ಮಾಜಿ ಸೈನಿಕ ಗೋಪಾಲ ಕೃಷ್ಣ ಕಾಂಚೋಡು ಸೇರಿದಂತೆ ಮಾಜಿ ಸೈನಿಕರಾದ ಹರೀಶ್ ರೈ, ವಾಲ್ಟರ್ ಸಿಕ್ವೇರಾ, ರಾಮ್ ಭಟ್, ತಿಮ್ಮಪ್ಪ, ಹರೀಶ್, ಸುಬ್ರಮಣಿ, ಜಗನ್ನಾಥ ಶೆಟ್ಟಿ,ದಿನೇಶ್ ,ತಂಗಚ್ಚನ್,ರನ್ನು ಏಕನಾಥ ಶೆಟ್ಟಿಯವರ ಮಗ ಅಕ್ಷಯ್ ಮತ್ತು ಮಗಳು ಆಶಿತಾ ಸನ್ಮಾನಿಸಿದರು. ಈಗ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಕ್ರಮ್, ವಾಯುಸೇನೆಯಲ್ಲಿರುವ ಪ್ರಮೋದ್ ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸತೀಶ್ ಶೆಟ್ಟಿ ಪೆರ್ನೆ ಸ್ವಾಗತಿಸಿ, ಶ್ಯಾಮಲಾ ಶೆಟ್ಟಿ ಧನ್ಯವಾದವಿತ್ತರು. ಸುದ್ದಿ ಮಾಧ್ಯಮ ಮುಖ್ಯಸ್ಥ ದಾಮೋದರ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು.