ಬೆಳ್ತಂಗಡಿ: ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ಅಗಲೀಕರಣ ಕಾಮಗಾರಿಯ ಸರ್ವೆ ಕಾರ್ಯಗಳ ಬಗ್ಗೆ ಸುದ್ದಿ ಸಂಪೂರ್ಣ ಮಾಹಿತಿ ಒದಗಿಸುತ್ತಾ ಸಾಗಿದೆ. ಈಗ ಮುಖ್ಯ ರಸ್ತೆಯ ಸುತ್ತ ಮುತ್ತ ಮತ್ತೆ ಸರ್ವೆ ಕಾರ್ಯ ನಡೆಯುತ್ತಿದ್ದು, ಇದೆಂತ ಸರ್ವೆ, ಈಗ ಮತ್ತೆ ಸರ್ವೆ ಯಾಕೆ ಅಂತ ಜನರು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಈ ವರದಿ.
ಭೂ ಸ್ವಾಧೀನಕ್ಕಾಗಿ ನಡೆಯುತ್ತಿರುವ ಸರ್ವೆ: ಈಗ ದೆಹಲಿ ಮೂಲದ ಡಿ ಪಿ ಜೈನ್ ಕನ್ಸಸ್ಟ್ರಕ್ಷನ್ ಕಂಪೆನಿ ಸರ್ವೆ ಕಾರ್ಯವನ್ನು ನಡೆಸುತ್ತಾ ಇದ್ದು, ಈ ಸರ್ವೆಯಲ್ಲಿ ರಸ್ತೆಗಾಗಿ ಬೇಕಾದ ಭೂಮಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಸರ್ಕಾರಿ ಜಾಗ ಯಾವುದಿದೆ, ಖಾಸಗಿಯವರ ಜಾಗ ಯಾವುದು, ಅವರಿಂದ ಭೂ ಸ್ವಾಧೀನ ಪಡಿಸಿಕೊಳ್ಳುವ ಮುನ್ನ ನಡೆಯುತ್ತಿರುವ ಪ್ರಕ್ರಿಯೆಯಾಗಿ ಈ ಸರ್ವೆಕಾರ್ಯ ನಡೆಯುತ್ತಿದೆ.
ಈ ಸರ್ವೆಯ ನಂತರ ಭೂಮಿಯ ಮೌಲ್ಯ ನಿರ್ಧಾರ: ಈಗ ನಡೆಯುತ್ತಿರುವ ಸರ್ವೆಯ ನಂತರ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಸ್ತೆಗೆ ಅಗತ್ಯವಿರುವ ಖಾಸಗಿ,ಸರ್ಕಾರಿ ಸ್ಥಳಗಳು ಯಾವುದು ಮತ್ತು ಅದರ ಮೌಲ್ಯ ವೆಷ್ಟು ಅಂತ ನಿರ್ಧಾರವಾಗಲಿದೆ. ಇದರ ಪ್ರಕಾರ ಪೇಟೆಯ ಸುತ್ತಮುತ್ತ ಇರುವ ಮೌಲ್ಯದ ಅನುಸಾರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಭೂ ಮೌಲ್ಯದ ಅನುಸಾರ ಮೊತ್ತ ನಿರ್ಧಾರವಾಗಲಿದೆ.
ಭೂಮಿಯ ಮೌಲ್ಯ ನಿರ್ಧಾರವಾದ ನಂತರ ಪರಿಹಾರ ನೀಡುವಿಕೆ: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಸ್ತೆ ಅಗಲೀಕರಣದಲ್ಲಿ ಪಡೆಯುವ ಜಮೀನುಗಳಿಗೆ ಭೂ ಮೌಲ್ಯ ನಿರ್ಧಾರದ ನಂತರ ಪರಿಹಾರ ನೀಡಲಾಗುತ್ತದೆ. ಈ ಕುರಿತು ಈಗಾಗಲೆ ಮೊದಲ ಹಂತವಾಗಿ ಭೂ ಸ್ವಾಧೀನಕ್ಕಾಗಿ ಸರ್ವೆ ಕಾರ್ಯ ನಡೆಯುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಭೂ ಮೌಲ್ಯ ನಿರ್ಧಾರವಾಗಿ, ಪರಿಹಾರ ಒದಗಿಸುವ ಕಾರ್ಯಗಳು ನಡೆಯಲಿವೆ. ಗುರುವಾಯನಕೆರೆಯಿಂದ ಉಜಿರೆಯವರಿಗೆ ತಲಾ 15 ಮೀಟರ್: ಪುಂಜಾಲಕಟ್ಟೆಯಿಂದ ಗುರುವಾಯಕನಕೆರೆ-ಉಜಿರೆಯಿಂದ ಚಾರ್ಮಾಡಿವರೆಗೆ ತಲಾ 10 ಮೀಟರ್ ಗುರುವಾಯನಕೆರೆಯಿಂದ ಉಜಿರೆವರೆಗೆ ಪೇಟೆಯಲ್ಲಿ ರಸ್ತೆ ಸಾಗುವುದು ಮತ್ತು ಪೂರ್ವ ನಿಗದಿಯಂತೆ ಎರಡೂ ಬದಿಗಳಲ್ಲಿ ತಲಾ 15 ಮೀಟರ್ ರಸ್ತೆ ನಿರ್ಮಾಣವಾಗಲಿದ್ದು, ಪುಂಜಾಲಕಟ್ಟೆಯಿಂದ ಗುರುವಾಯನಕೆರೆ ಹಾಗೂ ಉಜಿರೆಯಿಂದ ಚಾರ್ಮಾಡಿವರೆಗೆ ತಲಾ 10 ಮೀಟರ್ ರಸ್ತೆ ಕಾಮಗಾರಿ ನಡೆಯಲಿದೆ.