ಮುಂಡೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಸನ್ಮಾನ

0

ಮುಂಡೂರು: ಶಿಕ್ಷಣ ಕ್ಷೇತ್ರದಲ್ಲಿ ಕೆ.ಎ.ಎಸ್., ಯು.ಪಿ.ಎಸ್. ಸಿ. ಪರೀಕ್ಷೆಯನ್ನು ಬರೆಯುವ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮುಂಡೂರು ಗ್ರಾಮದ ಎಲ್ಲಾ ಜನತೆ ಆರ್ಥಿಕ ಸಹಕಾರ ಮಾರ್ಗದರ್ಶನ ನೀಡಲಿದೆ ಎಂದು ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಂತ ವೈದ್ಯ ಡಾ| ಎಮ್.ಎಮ್. ದಯಾಕರ್ ಭಟ್ ಅವರು ತಿಳಿಸಿದರು.

ಅವರು ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಭಜನಾ ಮಂಗಳೋತ್ಸವ ಹಾಗೂ ನವರಾತ್ರಿ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ದೇವಸ್ಥಾನದ ಭಕ್ತರ ಸಹಕಾರದಿಂದ ಹೆಚ್ಚಿನ ಅಭಿವೃದ್ಧಿ ಹೊಂದಿದ್ದು ನವರಾತ್ರಿ ಸಂದರ್ಭ ಶಿಕ್ಷಣದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಪಡೆದ ವಿದ್ಯಾರ್ಥಿಗಳನ್ನು ಅನೇಕ ವರ್ಷಗಳಿಂದ ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷ ಶ್ರೀಧರ ಅಂಚನ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮಾನಂದ ಸಾಲಿಯಾನ್ ಮಾತನಾಡಿ ದೇವಸ್ಥಾನದಲ್ಲಿ ಕಳೆದ 10 ದಿನಗಳಿಂದ ನಡೆದ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಗ್ರಾಮದ ಹಾಗೂ ನೆರೆ ಗ್ರಾಮದ ಭಗವದ್ಭಕ್ತರ ಹೆಚ್ಚಿನ ಭಾಗವಹಿಸುವಿಕೆ ಹಾಗೂ ಧನ ಸಹಾಯ ನೀಡಿದ ಭಕ್ತರಿಗೆ ಅಭಿನಂದನೆ ಸಲ್ಲಿಸಿದರು. ಹಾಗೂ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವಂತೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಪಡೆದ ಎಸ್.ಎಸ್. ಎಲ್.ಸಿ., ದ್ವಿತೀಯ ಪಿ.ಯು.ಸಿ., ಉನ್ನತ ಶಿಕ್ಷಣ ಪಡೆಯುವ 13 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಬರೆಯುವ ಕನಸ್ಸನ್ನು ಹೊತ್ತ ದೀಕ್ಷಾ ಅವರು ಮಾತನಾಡಿ ದೇವರ ಕ್ಷೇತ್ರದಲ್ಲಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

ನವರಾತ್ರಿಯ ಕೊನೆಯ ದಿನ ಭಾಗವಹಿಸಿದ 350ಕ್ಕಿಂತಲೂ ಹೆಚ್ಚು ಭಕ್ತರಿಗೆ ದೇವಸ್ಥಾನದ ಪ್ರಧಾನ ಅರ್ಚಕರ ಕುಟುಂಬದ ಮೂಲಕ ವಸ್ತ್ರದಾನವನ್ನು ಅರವಿಂದ ಭಟ್, ರಾಘವೇಂದ್ರ ಭಟ್ ಹಾಗೂ ಮನೆಯವರು
ಸಭೆಯಲ್ಲಿ ವಿತರಿಸಿದರು. ನವರಾತ್ರಿ ಉತ್ಸವದ ಭಜನಾ ಕಾರ್ಯಕ್ರಮದಲ್ಲಿ ಭಜನಾ ತಂಡದ ಸದಸ್ಯರಿಗೆ ನಾನಿಲ್ತ್ಯಾರು ಚಾರಿಟೇಬಲ್ ಟ್ರಸ್ಟ್ ಮೂಲಕ ನೀಡುವ ಪಂಚೆಗಳನ್ನು ವಸಂತ ಪೂಜಾರಿಯವರು ವಿತರಿಸಿದರು.

ನವರಾತ್ರಿ ಉತ್ಸವದಲ್ಲಿ ಅತೀ ಹೆಚ್ಚು ದಿನ ಭಾಗವಹಿಸಿದ ಮಹಿಳಾ ಭಕ್ತರಿಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು ಒದಗಿಸಿದ ಸೀರೆಗಳನ್ನು ಅತಿಥಿಗಳು ವಿತರಿಸಿದರು.
ಅಮೂಲ್ಯ ಜನಸೇವಾ ಟ್ರಸ್ಟ್ ಕಕ್ಕುಡೆ ಇವರ ಮುಖಾಂತರ ೩ ಜನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೇಶವ ಕುಲಾಲ್ ರವರು ವಿತರಿಸಿದರು.

ಸಭಾ ವೇದಿಕೆಯಲ್ಲಿ ಭಜನಾ ಮಂಡಳಿಯ ಕೋಶಾಧಿಕಾರಿ ಆನಂದ ಆಚಾರ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಹರಿಶ್ಚಂದ್ರ ಹೆಗ್ಡೆ, ರುಕ್ಮಯ್ಯ ನಾಯ್ಕ, ಪುರಂದರ ಆಚಾರ್ಯ, ಪುಷ್ಪಾಶೆಟ್ಟಿ,
ರಮೇಶ್ ದೇವಾಡಿಗ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಅಂಚನ್ ಸ್ವಾಗತಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೀವ ಸಾಲಿಯಾನ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಸುಧಾಮಣಿ ರಮಾನಂದ, ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ಕೇಶವ ಕುಲಾಲ್ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here