ಗುರುವಾಯನಕೆರೆ: ವಿದ್ಯಾರ್ಥಿಗಳ ಗುರಿ ಖಚಿತವಾಗಿದ್ದು, ಯೋಗ್ಯ ಗುರುವಿನ ಮಾರ್ಗದರ್ಶನವಿದ್ದರೆ ಯಶಸ್ಸು ಸಾಧಿಸಲು ಸಾಧ್ಯ.ಗುರಿ ನಿಖರವಾಗಿದ್ದಾಗ ಸೋಲುಗಳಿಗೆ ಅಧೀರರಾಗುವುದಿಲ್ಲ. ಬದಲು ಅನುಭವ ಎಂದುಕೊಂಡು ಮುಂದೆ ಸಾಗುತ್ತಾರೆ ‘ಎಂದು ನ್ಯೂಸ್ ಫಸ್ಟ್ ರಾಷ್ಟೀಯ ವಾಹಿನಿಯ ಎಂ.ಡಿ ಮತ್ತು ಸಿಇಒ ಎಸ್ ರವಿ ಕುಮಾರ್ ಹೇಳಿದರು.ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಎಕ್ಸೆಲ್ ಪರ್ಬ 2023 ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳಿಗೆ ಗುರಿಯಷ್ಟೇ, ಮಾರ್ಗದರ್ಶನ ಮಾಡುವ ಯೋಗ್ಯ ಗುರುವು ಕೂಡಾ ಮುಖ್ಯ’ ಎಂದು ಹೇಳಿದರು.
ಮಂಗಳೂರಿನ ಸಿ.ಎ ಸುಬ್ರಹ್ಮಣ್ಯ ಕಾಮತ್ ಮಾತನಾಡಿ, ‘ಕಲಿಕೆಯ ಜೊತೆಗೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಬೇಕಾಗುವ ಎಲ್ಲಾ ರೀತಿಯ ವಾತಾವರಣ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣದಲ್ಲಿದೆ’ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಬೆಂಗಳೂರಿನ ಡಿ.ವೈ.ಎಸ್.ಪಿ ಧರಣಿ ಕುಮಾರ್ ಮಾತನಾಡಿ ‘ಎಕ್ಸೆಲ್ ನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ನೋಡುವಾಗ ಸರಸ್ವತಿ ದೇವಿ ಇಲ್ಲಿಯೇ ಎಲ್ಲೋ ನೆಲೆ ನಿಂತ ಹಾಗೆ ಭಾಸವಾಗುತ್ತಿದೆ’ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಕ್ಯಾಲೆಂಡರ್ ಹಾಗೂ ಡೈರಿಯನ್ನು ಅನಾವರಣ ಮಾಡಲಾಯಿತು.
ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಅಭಿರಾಮ್, ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಶೈಕ್ಷಣಿಕ ಸಾಧಕರ ಪಟ್ಟಿಯನ್ನು ಅಂಜನಿ ರಾವ್ ವಾಚಿಸಿದರು.ಉಪನ್ಯಾಸಕಿ ನಿಶಾ ಪೂಜಾರಿ ಸ್ವಾಗತಿಸಿದರು.ಅಪೂರ್ವ ರಾವ್ ವಂದಿಸಿದರು.ವಿಕಾಸ್ ಹೆಬ್ಬಾರ್ ನಿರೂಪಿಸಿದರು.