ಶಿರ್ಲಾಲು: ಮನೆಯಲ್ಲೊಂದು ದೇವರ ಕೋಣೆ ಇರುವಂತೆ ಜಗತ್ತಿಗೆ ಈ ನಮ್ಮ ಭಾರತ ದೇವರ ಕೋಣೆಯಾಗಿದೆ.ಇಲ್ಲಿ ಆಧ್ಯಾತ್ಮಿಕ ಭದ್ರ ತಳಹದಿ ಇರುವ ಕಾರಣ ಜಗತ್ತೇ ನಮ್ಮ ಕಡೆ ನೋಡುತ್ತಿದೆ’ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಮಹಾ ಸಂಸ್ಥಾನಮ್ ನ ಸಾದ್ವಿ ಶ್ರೀ ಮಾತಾನಂದಮಯಿ ಹೇಳಿದರು.
ಅವರು ಡಿ.27ರಂದು ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ನಾಲ್ಕನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
‘ದೇವರು ಸರ್ವಾಂತರಯಾಮಿಯಾದ ಚೈತನ್ಯ ಶಕ್ತಿಯಾಗಿದ್ದಾನೆ.ದೇವಾಲಯ ನಿರ್ಮಾಣದ ಮೂಲಕ ದೇವರ ಅನುಭವ ಸಿಗುತ್ತದೆ.ದೇವಾಲಯದಂತಹ ಶ್ರದ್ಧಾ ಕೇಂದ್ರಗಳಿಗೆ ನಿರಂತರ ಸಂಪರ್ಕ ಬೆಳೆಸಿಕೊಂಡಾಗ ಜೀವನದಲ್ಲಿ ಜೀವನ ಸಂಸ್ಕಾರ, ಆತ್ಮ ಸಂಸ್ಕಾರ ಸಿಗಲು ಸಾಧ್ಯವಾಗುತ್ತದೆ.ಸದಾಚಾರ, ಸತ್ಕಾರ್ಯ, ಸಕಾರಾತ್ಮಕವಾದ ನಮ್ಮೊಳಗೆ ಇದ್ದಾಗ ಜೀವನ ಸಾರ್ಥಕವಾಗುವುದು’ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ, ‘ಬೇರೆ ಬೇರೆ ಜಾತಿ ಜನಾಂಗ ನಮ್ಮೊಳಗೆ ಇದ್ದರೂ ದೇವಸ್ಥಾನದಲ್ಲಿ ನಾವು ಒಂದಾಗಿದ್ದೇವೆ.ಅಲ್ಲಿ ನಮ್ಮ ಸ್ವಾರ್ಥ ಬಿಟ್ಟು ನಿಸ್ವಾರ್ಥ ಮನಸ್ಸಿನ ಸೇವೆಯನ್ನು ನೀಡುತ್ತೇವೆ.ಧಾರ್ಮಿಕ ಶ್ರದ್ಧಾ ಕೇಂದ್ರಗಳು ಧರ್ಮ ವಿಚಾರ ಸಾರುವ ಜತೆಗೆ ಸಾಮಾಜಿಕ ಕೆಲಸ ಕಾರ್ಯಗಳ ಕೇಂದ್ರವಾಗಬೇಕು.ಕಷ್ಟಕ್ಕೆ ಒಳಗಾದವರ ಕಣ್ಣೀರು ಒರೆಸುವ ಕೆಲಸಗಳಾದರೆ ಅದು ಪರಮ ಪವಿತ್ರವಾದ ಕ್ಷೇತ್ರವಾಗಿ ಮೂಡಿಬರುವುದು’ ಎಂದರು.
ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಮಾತನಾಡಿ, ‘ಶ್ರದ್ಧಾ ಕೇಂದ್ರಗಳು ಶಕ್ತಿ ಕೇಂದ್ರಗಳು ಹಾಗೂ ಚೈತನ್ಯ ಕೇಂದ್ರಗಳಾದ ಕಾರಣ ಅದು ಕಾಲ ಕಾಲಕ್ಕೆ ಜೀರ್ಣೋದ್ದಾರವಾಗುತ್ತಿವೆ.ಹಿಂದೂ ಎಂದರೆ ಕೇವಲ ಧರ್ಮ ಮಾತ್ರವಲ್ಲ.ಅದೊಂದು ಬದುಕು.ಧರ್ಮ ಕಾರ್ಯವೆಂದರೆ ಸಮಾಜದ ಕಾರ್ಯವಾಗಿದ್ದು, ಉತ್ತಮ ಬಾಂಧವ್ಯದ ಮೂಲಕ ಅದನ್ನು ಗಟ್ಟಿಗೊಳಿಸಬೇಕು. ಬ್ರಹ್ಮಕಲಶ ಸಂದರ್ಭ ನಗರ ಶೃಂಗಾರಗೊಂಡಂತೆ ಕಾಲ ಕಾಲಕ್ಕೆ ನಾವು ನಮ್ಮ ಹೃದಯವನ್ನು ಸಿಂಗರಿಸಿಕೊಳ್ಳಬೇಕು’ ಎಂದರು.
ಶಿರ್ಲಾಲು ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಪಿ.ಹೆಚ್.ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿನಯಚಂದ್ರ ಪುದ್ದರಬೈಲು, ಶಿರ್ಲಾಲು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಜಗನ್ನಾಥ ಆಂತ್ರಂಗೆ, ಬದ್ಯಾರು ಲೋಕನಾಥೇಶ್ವರ ದೇವಸ್ಥಾನದ ಅರ್ಚಕ ಸೂರ್ಯ ನಾರಾಯಣ ರಾವ್, ಪ್ರಗತಿಪರ ಕೃಷಿಕ ರವಿಚಂದ್ರ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ಸೇವಾ ಸಮಿತಿ ಅಧ್ಯಕ್ಷ ಆನಂದ ಸಾಲಿಯಾನ್ ಒಡಿಮಾರ್ ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವಿರಾಜ್ ಕೆ ಕುಲ್ಯರೊಟ್ಟು ಸ್ವಾಗತಿಸಿದರು. ಗುರುವಾಯನಕೆರೆ ಸಿ.ಅರ್.ಪಿ ರಾಜೇಶ್ ನಿರೂಪಿಸಿದರು.ಸಭಾ ಮತ್ತು ಸಾಂಸ್ಕೃತಿಕ ಸಮಿತಿಯ ಪ್ರಸಾದ್ ವಂದಿಸಿದರು.