ಅರುವ ಕೊರಗಪ್ಪ ಶೆಟ್ಟಿ ಅವರಿಗೆ ‘ಜಾನಪದ ಶ್ರೀ’ ಪ್ರಶಸ್ತಿ

0

ಬೆಳ್ತಂಗಡಿ: ಸರಕಾರವು 2022-23ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರೂ ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಅರುವ ಕೊರಗಪ್ಪ ಶೆಟ್ಟಿ (83) ಅವರನ್ನು ಆಯ್ಕೆ ಮಾಡಿದೆ.

“ಅರುವದವರು” ಎಂದೇ ಪ್ರಸಿದ್ದಿ ಅಳದಂಗಡಿಯ ಸುಬ್ಬಯ್ಯ ಶೆಟ್ಟಿ- ಕಾಂತಕ್ಕೆ ದಂಪತಿಯ ಹಿರಿಯ ಮಗನಾಗಿ 28 ನವೆಂಬರ್ 1940ರಲ್ಲಿ ಜನಿಸಿದ “ಅರುವದವರು’ ತಮ್ಮ 15ನೇ ವರ್ಷದಲ್ಲಿ ಕಟೀಲು ಮೇಳವನ್ನು ಸೇರಿಕೊಂಡು 6 ದಶಕಗಳಿಂದ ವಿವಿಧ ಮೇಳಗಳಲ್ಲಿ ಕಲಾಸೇವೆ ಮಾಡುತ್ತಿದ್ದಾರೆ.

“ಗದಾಯುದ್ಧ’ದ ಕೌರವ, “ಕೋಟಿ ಚೆನ್ನಯ’ದ ಕೋಟಿ ಮುಂತಾದ ಪಾತ್ರಗಳ ನಿರ್ವಹಣೆಯಲ್ಲೂ ಪ್ರಸಿದ್ದಿ ಪಡೆದಿದ್ದಾರೆ. 3 ವರ್ಷ ಕಾಲ ಕಟೀಲು ಮೇಳ, ಕೂಡ್ಲು ಮೇಳದಲ್ಲಿ 2 ವರ್ಷ, ಕುಂಡಾವು ಮೇಳದಲ್ಲಿ 7 ವರ್ಷ, ಕದ್ರಿ, ಮಂಗಳಾ ದೇವಿ, ಎಡನೀರು ಮೇಳ ಗಳಲ್ಲಿ ಸೇವೆ ಸಲ್ಲಿಸಿ, 3 ದಶಕಳ ಕಾಲ ಕರ್ನಾಟಕ ಮೇಳದಲ್ಲಿ ತಾರಾ ಕಲಾವಿದರಾಗಿ ರಂಗಸ್ಥಳವನ್ನಾಳಿ ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳಾದೇವಿ ಮೇಳದಲ್ಲಿ 12 ವರ್ಷ ಹಾಗೂ ಕರ್ನಾಟಕ ಯಕ್ಷಗಾನ ನಾಟಕ ಸಭಾದಲ್ಲಿ ಕನ್ನಡ ಯಕ್ಷಗಾನ ಪ್ರಸಂಗಗಳಲ್ಲಷ್ಟೇ ಅಲ್ಲದೇ ಹಲವಾರು ತುಳು ಪ್ರಸಂಗಗಳಲ್ಲೂ ಮುಖ್ಯ ಪಾತ್ರಗಳನ್ನು ನಿರ್ವಹಿಸಿ ಜನಮನ ಗೆದ್ದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎಡನೀರು ಪ್ರಶಸ್ತಿ, ಶ್ರೀ ಪೇಜಾವರ ಮಠದ ರಾಮವಿಠಲ ಪ್ರಶಸ್ತಿ, ಮಾಣಿಲ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ ಅರಸಿ ಬಂದಿವೆ. ಶ್ರೀ ಅರುವ ಕೊರಗಪ್ಪಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಕಲಾವಿದರಿಗೆ ನೆರವು, ಹೆಣ್ಣು ಮಕ್ಕಳ ಮದುವೆಗೆ ನೆರವು, ವಿದ್ಯಾರ್ಥಿ ವೇತನ ವಿತರಿಸುತ್ತ ಬಂದಿದ್ದಾರೆ.

LEAVE A REPLY

Please enter your comment!
Please enter your name here