ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ನ.2 ರಂದು ಅರಸಿನಮಕ್ಕಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ: 50ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬೆಂಬಲ ನೀಡಿದೆ ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಸಮಿತಿಯಿಂದ ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ತಾಲೂಕಿನ ಶಿಶಿಲದಿಂದ ಮೂಡಿಗೆರೆ ತಾಲೂಕಿನ ಬೈರಾಪುರ ಸಂಪರ್ಕಿಸುವ ಪ್ರಸ್ತಾವಿತ ರಸ್ತೆ ಯೋಜನೆಯು ಶಿಶಿಲದ ಪೇರಿಕೆಯಿಂದ ನಾಯಿಹಳ್ಳ- ಉಳಿಯಮಲೆ ಖಾಸಗಿ ಎಸ್ಟೇಟ್ ಮೂಲಕ ಬೈರಾಪುರ ತಲುಪುತ್ತದೆ. ಇಲ್ಲಿ ಪ್ರಾಚೀನ ಕಾಲದಿಂದಲೂ- ಬೈರಾಪುರ ಹಾಗೂ ಶಿಶಿಲದ ಮೂಲಕ ನೆರೆಯ ಉಪ್ಪಿನಂಗಡಿಗೆ ವ್ಯಾಪಾರ ಸಂಪರ್ಕ ಇತ್ತು ಘಟ್ಟದ ಮೇಲಿನಿಂದ ಎತ್ತಿನ ಗಾಡಿಗಳ ಮೂಲಕ ಅಕ್ಕಿ ಬೇಳೆಕಾಳುಗಳು ಕರಾವಳಿಗೂ ಹಾಗೂ ಕರಾವಳಿಯಿಂದ ಉಪ್ಪು ಹಾಗೂ ಇನ್ನಿತರ ಸಾಮಾಗ್ರಿಗಳು ಘಟ್ಟ ಪ್ರದೇಶಕ್ಕೆ ಸಾಗಟ ಮಾಡಲು ಪ್ರಮುಖ ಹೆದ್ದಾರಿಯಾಗಿತ್ತು. ಇದಕ್ಕೆ ‘ಪೇರಾಟದ ದಾರಿ’ ಎಂದು ಹಿಂದಿನವರು ಕರೆಯುತ್ತಿದ್ದರು ಎಂದು ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಸಮಿತಿಯ ಸದಸ್ಯ ನರಸಿಂಹ ಗೌಡ ಹೇಳಿದರು.

ಅವರು ಸೆ.27 ರಂದು ಮಂಜುನಾಥ ಪಿನಾಕಿ ಕಲಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೂ – ಬೈರಾಪುರದ ನಾಣ್ಯದ ಬೈರಾವೇಶ್ವರ ದೇವಸ್ಥಾನಕ್ಕೂ ಸಂಪರ್ಕವಿದ್ದು ಶಿಶಿಲೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಎತ್ತಿನ ಭುಜದ ಗುಡ್ಡದ ಮೇಲೆ ಮೇಲೆ ಕಲ್ಲಿನ ಹಣತೆಯ ಮೇಲೆ ದೀಪ ಉರಿಸುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ನಾಣ್ಯದ ಬೈರವೇಶ್ವರ ದೇವಸ್ಥಾನದ ಸಮೀಪವೇ ಎತ್ತಿನಭುಜಕ್ಕೆ ಹೋಗುವ ರಸ್ತೆಯ ಪಕ್ಕ ‘ಶಿಶಿಲ ಕೊಡಿ’ ಎಂಬ ನಾಮಫಲಕ ಈಗಲೂ ಇದೆ. ಕಾಲ ಕ್ರಮೇಣ ಎತ್ತಿನ ಗಾಡಿಗಳ ಬಳಕೆ ನಿಂತು ಹೋದ ನಂತರ 1970ರ ಸುಮಾರಿಗೆ ಶಿಶಿಲದಿಂದ ಪೇರಿಕೆ ನಾಯಹಳ್ಳ ಮೂಲಕ ಉಳಿಯಮಲೆ ಖಾಸಗಿ ಎಸ್ಟೇಟ್ ನವರು ಸರಕಾರದ ಅನುಮತಿ ಪಡೆದು ಇದೇ ಗಾಡಿ ರಸ್ತೆಯಲೇ ತಮ್ಮ ಜೀಪು ಮತ್ತು ಲಾರಿ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಿರುತ್ತಾರೆ. ಮತ್ತು ಬೈರಾಪುರ ಕಡೆಯಿಂದಲೂ ತಮ್ಮ ಎಸ್ಟೇಟ್ ಗೆ ರಸ್ತೆ ನಿರ್ಮಿಸಿ ತಮ್ಮ ಎಸ್ಟೇಟ್ ನಿಂದ ಟಿಂಬರ್ ಗಳನ್ನು ಮಂಗಳೂರಿಗೆ ಸಾಗಿಸುತ್ತಿದ್ದರು. ಸುಮಾರು 1986ರ ತನಕ ಈ ರಸ್ತೆಯ ಮೂಲಕ ದಿನಂ ಪ್ರತಿ ಏಳೆಂಟು ಲಾರಿಗಳು ಸಂಚಾರ ನಡೆಸಿದ ಈ ರಸ್ತೆ ಇಂದು ಕೂಡ ಅಸ್ತಿತ್ವದಲ್ಲಿದೆ. ಇಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯುವ ಅವಶ್ಯಕತೆ ಇರುವುದಿಲ್ಲ ಅಲ್ಲದೆ ಹೆಚ್ಚು ಕಡಿದಾದ ತಿರುವುಗಳಿಲ್ಲದ ರಸ್ತೆಯಾಗಿರುತ್ತದೆ. ಇದು ರಾಷ್ಟ್ರೀಯ ಉದ್ಯಾನವನ, ಹುಲಿ ಸಂರಕ್ಷಿತ ಪ್ರದೇಶ ಈ ವಾಪ್ತಿಗೆ ಒಳಪಟ್ಟಿರುವುದಿಲ್ಲ. ರಸ್ತೆಯ ಹೆಚ್ಚಿನ ಭಾಗವು ಸರಕಾರಿ ಜಮೀನು, ಡೀಮ್ಸ್ ಫಾರೆಸ್ಟ್ ಹಾಗೂ ಖಾಸಗಿ ಜಮೀನಿನ ಮೂಲಕ ಸಾಗುತ್ತದೆ. ಇದೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಅನೇಕ ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಈ ಯೋಜನೆ ಇನ್ನೂ ಕಾರ್ಯ ರೂಪಕ್ಕೆ ಬಂದಿರುವುದಿಲ್ಲ. ಆದ್ದುದರಿಂದ ಈ ರಸ್ತೆ ಅಭಿವೃದ್ಧಿ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಆಧ್ಯತೆಯ ನೆಲೆಯಲ್ಲಿ ಅಗತ್ಯ ಅನುಮತಿಗಳನ್ನು ನೀಡಿ ಶಿಶಿಲ ಹಾಗೂ ಸುತ್ತ ಮುತ್ತಲಿನ ಶಿವಾಜಿ, ಅರಸಿನಮಕ್ಕಿ, ಹತ್ಯಡ್ಕ, ಕಳೆಂಜ, ರೆಖ್ಯ, ಕೌಕ್ರಾಡಿ, ಕೊಕ್ಕಡ ಹಾಗೂ ಬೈರಾಪುರ ಸುತ್ತ ಮುತ್ತಲಿನ ಊರುಬಗೆ, ಸತ್ತಿಗನ ಹಳ್ಳಿ, ದಾರದ ಹಳ್ಳಿ, ಗೌಡಳ್ಳಿ, ಕುಂಬಾರಡಿ, ದೊಡ್ಡಾರ, ಬೈದುವಳ್ಳಿ, ಹಳೇಕೆರೆ, ಹೆಚ್ಚುವಲ್ಲಿ, ಬಿಲ್ಲೂರು, ಹ್ಯಾರೆಗುಡ್ಡ, ಕಿತ್ತಳೆಗುಂಡಿ, ಮಗ್ಗಲನಮಕ್ಕಿ, ಮುಂತಾದ ಕುಗ್ರಾಮಗಳ ಸುಮಾರು 50000ಕ್ಕಿಂತಲೂ ಹೆಚ್ಚು ಜನರ ಶಿಕ್ಷಣ, ಆರೋಗ್ಯ, ವ್ಯಾಪಾರ ಸಂಪರ್ಕ, ಕೃಷಿ ಉತ್ಪನ್ನ ಮಾರಾಟ, ನಾಣ್ಯದ ಬೈರಾವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಶಿಶಿಲೇಶ್ವರ ದೇವಸ್ಥಾನಗಳ ಪ್ರವಾಸೋಧ್ಯಮ ಅಭಿವೃದ್ಧಿಗೂ ಇದು ಸಹಕಾರಿಯಾಗಲಿರುವುದರಿಂದ ಸರಕಾರ ಈ ಬಗ್ಗೆ ಕ್ರಮ ವಹಿಸುವಂತೆ, ಸರಕಾರದ ಗಮನ ಸೆಳೆಯಲು ನ.2 ರಂದು ಪೂರ್ವಾಹ್ನ 10:00 ಗಂಟೆಗೆ ಸರಿಯಾಗಿ ಆರಸಿನಮಕ್ಕಿ ಆಟದ ಮೈದಾನದಲ್ಲಿ ಒಟ್ಟು ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಬಂದು ಪೇಟೆಯಲ್ಲಿ ಬೃಹತ್ ಸಮಾವೇಶವನ್ನು ನಡೆಸಲಾಗುವುದು. ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷದವರು, ಧಾರ್ಮಿಕ ಮುಖಂಡರು ಹಾಗೂ ಶಿಶಿಲ ಶಿವಾಜಿ, ಅರಸಿನಮಕ್ಕಿ, ಹತ್ಯಡ್ಕ, ರೆಖ್ಯ, ಕಳೆಂಜ, ಕೊಕ್ಕಡ ಹಾಗೂ ಬೈರಾಪುರ, ಊರುಬಗೆ, ಸತ್ತಿಗನಹಳ್ಳಿ ಮುಂತಾದ ಗ್ರಾಮಗಳಿಂದ ಸಾವಿರಾರು ಜನ ಭಾಗವಹಿಸಲಿದ್ದಾರೆ. ಹಾಗೂ ಹಲವಾರು ಸಂಘಟನೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಹಕ್ಕೊತ್ತಾಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಿಶಿಲ – ಬೈರಾಪುರ ರಸ್ತೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಿಶಿಲ – ಶಿಶಿಲ -ಬೈರಾಪುರ ರಸ್ತೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಧರ್ಮರಾಜ್ ಗೌಡ ಅಡ್ಕಾಡಿ, ಸದಸ್ಯರಾದ ಸುಂದರ ಕೆ, ಗೌರೀಶ, ಪದ್ಮನಾಭ, ಪದ್ಮಪ್ಪ, ರಾಧಾಕೃಷ್ಣ, ಕರುಣಾಕರ ಶಿಶಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here