






ಉಜಿರೆ: ದಾವಣಗೆರೆಯ ಎಸ್.ಎಸ್. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಚರ್ಮರೋಗ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಡಿ.) ಪೂರ್ಣಗೊಳಿಸಿರುವ ಉಜಿರೆಯ ಡಾ. ಮನಿಷಾ ಎಂ. ಅವರು ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಉಜಿರೆ ನಿವಾಸಿಗಳಾದ ಮೋಹನ್ ಕೆ. ಸಾಲಿಯಾನ್ ಮತ್ತು ಸ್ವಪ್ನಾ ದಂಪತಿಯ ಪುತ್ರಿಯಾದ ಮನಿಷಾ ಅವರು ಬಾಲ್ಯದಿಂದಲೇ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರು. ಉಜಿರೆಯ ಎಸ್ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಅವರು, 2016ರಲ್ಲಿ ಎಂಬಿಬಿಎಸ್ ವೈದ್ಯಕೀಯ ಪದವಿ ಅಧ್ಯಯನ ಆರಂಭಿಸಿದರು. 2022ರಲ್ಲಿ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.


ವೈದ್ಯಕೀಯ ಪದವಿಯ ಬಳಿಕ ಕೊಕ್ಕಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮೀಣ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿಯೇ ನೀಟ್ ಪಿಜಿ (NEET PG) ಪರೀಕ್ಷೆ ಬರೆದು 6609ನೇ ರ್ಯಾಂಕ್ ಗಳಿಸಿದರು.2023ರಲ್ಲಿ ದಾವಣಗೆರೆಯ ಎಸ್.ಎಸ್. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಚರ್ಮರೋಗ ವಿಜ್ಞಾನ ವಿಭಾಗದ ಎಂ.ಡಿ. ಸ್ನಾತಕೋತ್ತರ ಪದವಿ ಅಧ್ಯಯನ ಆರಂಭಿಸಿದ ಅವರು, ಶೈಕ್ಷಣಿಕ ಚಟುವಟಿಕೆಗಳ ಜತೆಗೆ ವೃತ್ತಿಪರ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು.
ಐಎಡಿವಿಎಲ್ (IADVL) ಕರ್ನಾಟಕ ಶಾಖೆಯ ‘ಯುವಡರ್ಮಾ’ ನಿಯತಕಾಲಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.2025ರಲ್ಲಿ ಮಂಗಳೂರಿನ ರೇವತಿ ಮತ್ತು ವಿವೇಕ್ ದಂಪತಿಯ ಪುತ್ರ, ಐಐಎಂ ಬೆಂಗಳೂರಿನ ಪದವೀಧರರಾದ ವಿಖ್ಯಾತ್ ಸುವರ್ಣ (ಎಂ.ಇ., ಎಂ.ಬಿ.ಎ.) ಅವರನ್ನು ವಿವಾಹವಾದರು. ಪ್ರಸ್ತುತ ಹೈದರಾಬಾದ್ನಲ್ಲಿ ನೆಲೆಸಿರುವ ಡಾ. ಮನಿಷಾ ಅವರ ಈ ಶೈಕ್ಷಣಿಕ ಸಾಧನೆ ಉಜಿರೆ ಪರಿಸರಕ್ಕೆ ಹೆಮ್ಮೆ ತಂದಿದೆ.









