






ಬೆಳ್ತಂಗಡಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 17 ರಂದು ನಡೆದ 17 ವರ್ಷದೊಳಗಿನವರ ರಾಜ್ಯಮಟ್ಟದ ಬಾಲಕ ಮತ್ತು ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಅತ್ಯಾರಕಂಡ ನಿವಾಸಿಗಳಾದ ಒಂದೇ ಮನೆಯ ಸಹೋದರ ಮಾ| ಪ್ರಣೀಶ್ ಎ. ಹಾಗೂ ಸಹೋದರಿ ಕು| ಚೈತನ್ಯ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಅತ್ಯಾರಕಂಡ ನಿವಾಸಿಗಳಾದ ಶ್ರೀಮತಿ ಪ್ರಮೀಳಾ (ಯಾನೆ ರೇವತಿ) ಹಾಗೂ ಶ್ರೀ ಕುಶಾಲಪ್ಪ ಗೌಡ ದಂಪತಿಯ ಮಕ್ಕಳಾದ ಪ್ರಣೀಶ್ ಮತ್ತು ಚೈತನ್ಯ, ಬಾಲ್ಯದಿಂದಲೇ ವಾಲಿಬಾಲ್ ಪಂದ್ಯಾಟದಲ್ಲಿ ಆಸಕ್ತಿ ತಳೆದು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪ್ರತಿನಿಧಿಸಲಿರುವ ಕ್ರೀಡಾಪಟುಗಳು:ಮಾ| ಪ್ರಣೀಶ್ ಎ.: ಬಂದಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿ, ಪ್ರಸ್ತುತ ಬಂಟ್ವಾಳ ತಾಲೂಕಿನ ಕೈರಂಗಳ ಶಾರದಾ ವಿದ್ಯಾಗಣಪತಿ ಪುಣ್ಯಕೋಟಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಣೀಶ್ ಪ್ರತಿನಿಧಿಸಿದ ತಂಡವು ರಾಜ್ಯಮಟ್ಟದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮುಂಬರುವ ನವೆಂಬರ್ನಲ್ಲಿ ಗುಜರಾತ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
ಕು| ಚೈತನ್ಯ: ಬಂದಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿ, ಪ್ರಸ್ತುತ ಮುಂಡಾಜೆ ಪ್ರೌಢಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಚೈತನ್ಯ ಸ್ಪರ್ಧಿಸಿದ ತಂಡವು ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಮುಂಬರುವ ಡಿಸೆಂಬರ್ನಲ್ಲಿ ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಶಾಸಕರಿಂದ ಅಭಿನಂದನೆ:ಒಂದೇ ಮನೆಯ ಇಬ್ಬರು ಸಾಧಕರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರ ಹಾಗೂ ತಾಲೂಕಿನ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಬಂದಾರು ಮತ್ತು ಮೊಗ್ರು ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳು ಸಾಧಕ ಸಹೋದರ-ಸಹೋದರಿಗೆ ಶುಭ ಹಾರೈಸಿದ್ದಾರೆ.









