






ಬೆಳ್ತಂಗಡಿ: ೨೦೧೨ರ ಅಕ್ಟೋಬರ್ ೧೦ರಂದು ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿರುವ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ
ಸೌಜನ್ಯಾ ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ರಚನೆ ಮಾಡಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ತನಿಖಾ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ವಿಶೇಷ ತನಿಖಾ ತಂಡದ ಮುಖ್ಯಸ್ಥ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ಪ್ರಥಮ ಸಭೆ ನಡೆಸಿ ತನಿಖಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಲೋಕೇಶ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಈ ಹಿಂದಿನ ತನಿಖೆಯ ವಿವರ ಮತ್ತು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ದಾಖಲೆಗಳನ್ನು ನೀಡುವಂತೆ ಸಿಐಡಿ ಮತ್ತು ಸಿಬಿಐಗೆ ಎಸ್ಐಟಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಮೊದಲ ಸಭೆ: ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರ ಕೋರಿಕೆ ಮೇರೆಗೆ ಮರು ತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲಿಯೇ ರಾಜ್ಯ ಸರಕಾರ ರಚನೆ ಮಾಡಿರುವ ವಿಶೇಷ ತನಿಖಾ ತಂಡದಲ್ಲಿರುವ ರಾಜ್ಯ ಗುಪ್ತಚರ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಹಾಗೂ ಸಿಐಡಿಯ ಎಸ್ಪಿ ಲೋಕೇಶ್ ಜಗಲಸಾರ್ ಅವರು ಅ.೧ರಂದು ಬೆಳಿಗ್ಗೆ ಮಂಗಳೂರು ನಗರಕ್ಕೆ ಆಗಮಿಸಿದ್ದರು. ಎಸ್ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರೀಕ್ಷಕ ಎನ್.ಶಶಿಕುಮಾರ್ ಮಧ್ಯಾಹ್ನ ಮಂಗಳೂರಿಗೆ ಭೇಟಿ ನೀಡಿದ್ದರು. ಮಂಗಳೂರು ನಗರದಲ್ಲಿರುವ ದ.ಕ. ಜಿಲ್ಲಾಧಿಕಾರಿಯವರ ಹಳೆಯ ಕಚೇರಿಯ ೨ನೇ ಮಹಡಿಯಲ್ಲಿ ಆರಂಭಿಸಲಾಗಿರುವ ವಿಶೇಷ ತನಿಖಾ ತಂಡದ ಕಚೇರಿಗೆ ಬೆಳಗ್ಗೆ ಆಗಮಿಸಿದ ನಿಶಾ ಜೇಮ್ಸ್ ಹಾಗೂ ಲೋಕೇಶ್ ಜಗಲಸಾರ್ ಅವರು ಕಚೇರಿ ಪರಿಶೀಲನೆ ನಡೆಸಿದ್ದರು. ಬಳಿಕ ಈ ಇಬ್ಬರು ಅಧಿಕಾರಿಗಳು ತಂಡದ ಇನ್ನೋರ್ವ ಸದಸ್ಯರಾದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಕಚೇರಿಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ಬಳಿಕ ಬೆಳ್ತಂಗಡಿಗೆ ಆಗಮಿಸಿದ ನಿಶಾ ಜೇಮ್ಸ್ ಮತ್ತು ಲೋಕೇಶ್ ಜಗಲಸಾರ್ ಅವರು
ಬೆಳ್ತಂಗಡಿ ಪೊಲೀಸ್ ಠಾಣೆ ಸಮೀಪದ ಈ ಹಿಂದಿನ ಎಸ್ಐಟಿ ಕಚೇರಿಯ ಪರಿಶೀಲನೆ ನಡೆಸಿದ್ದಾರೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಶೀಘ್ರದಲ್ಲಿಯೇ ಬೆಳ್ತಂಗಡಿ ಪೊಲೀಸ್ ಠಾಣೆಯ ಬಳಿ ಎಸ್ಐಟಿ ಕಚೇರಿ ಆರಂಭವಾಗುವ ನಿರೀಕ್ಷೆ ಇದೆ.
ಮಹತ್ವದ ಸಭೆ-ತನಿಖೆಗೆ ರೂಪುರೇಷೆ: ಅ.೧ರಂದು ಮಧ್ಯಾಹ್ನ ೩.೪೫ರ ಸುಮಾರಿಗೆ ಎಸ್ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ಅವರು ಎಸ್ಐಟಿ ಕಚೇರಿಗೆ ಆಗಮಿಸಿ ತಂಡಕ್ಕೆ ನಿಯೋಜನೆಗೊಂಡಿರುವ ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್ ಮತ್ತು ಸುಧೀರ್ ಕುಮಾರ್ ರೆಡ್ಡಿ ಹಾಗೂ ೧೬ ಸಹಾಯಕ ಅಧಿಕಾರಿಗಳೊಂದಿಗೆ ಪ್ರಥಮ ಸಭೆ ನಡೆಸಿದ್ದಾರೆ. ಎಸ್ಐಟಿಯ ಈ ಮಹತ್ವದ ಸಭೆಯಲ್ಲಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಳೆಯ ಕಡತಗಳ ಪರಿಶೀಲನೆ ಜತೆಗೆ ಮುಂದಿನ ತನಿಖೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಅಧಿಕಾರಿಗಳಿಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುವ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಎಸ್ಐಟಿಗೆ ಸದಸ್ಯರಾಗಿ ನಿಯೋಜನೆಗೊಂಡಿದ್ದ ಬೆಂಗಳೂರು ಗ್ರಾಮಾಂತರದ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಸಭೆಗೆ ಗೈರು ಹಾಜರಾಗಿದ್ದರು. ಈಗಾಗಲೇ ಅವರು ಎಸ್ಐಟಿಯಿಂದ ತನ್ನನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ದಾಖಲೆ ನೀಡಲು ಸಿಬಿಐ, ಸಿಐಡಿಗೆ ಪತ್ರ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಹಿಂದಿನ ತನಿಖೆಗಳಿಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಒದಗಿಸುವಂತೆ ಕೇಂದ್ರ ತನಿಖಾ ದಳ ಮತ್ತು ಅಪರಾಧ ತನಿಖಾ ದಳಕ್ಕೆ ಪತ್ರ ಬರೆದಿದೆ. ಪ್ರಕರಣದ ಆರಂಭಿಕ ತನಿಖೆ, ವಂತರ ನಡೆದ ತನಿಖೆಗಳು ಹಾಗೂ ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದ ಎಲ್ಲ ಪ್ರಮುಖ ದಾಖಲೆಗಳನ್ನು ಪರಿಶೀಲಿಸುವ ಉzಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.


ಸೌಜನ್ಯ ಕೇಸ್ನ ತನಿಖಾಧಿಕಾರಿಯಾಗಿ ಹೈಪ್ರೊಫೈಲ್ ಕೇಸ್ಗಳನ್ನು
ನಿಭಾಯಿಸಿದ್ದ ಐಪಿಎಸ್ ಅಧಿಕಾರಿ ಲೋಕೇಶ್ ನೇಮಕ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯಾ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿ ಸಿಐಡಿಯ ಎಸ್ಪಿ ಲೋಕೇಶ್ ಭರಮಪ್ಪ ಜಗಲಸಾರ್ ನೇಮಕಗೊಂಡಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕನಗ ಗ್ರಾಮದವರಾಗಿದ್ದು ಮಂಗಳೂರು ಸುರತ್ಕಲ್ನ ಎನ್ಐಟಿಕೆ ಸಂಸ್ಥೆಯಲ್ಲಿ ಬಿಟೆಕ್ ವಿದ್ಯಾಭ್ಯಾಸ ಮಾಡಿರುವ ಲೋಕೇಶ್ ಜಗಲಸಾರ್ ಅವರಿಗೆ ಎಸ್ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ೨೦೧೫ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಲೋಕೇಶ್ ಅವರು ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಳಿಕ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೨೦೨೬ರಲ್ಲಿ ಸಿಐಡಿಗೆ ಎಸ್ಪಿಯಾಗಿ ವರ್ಗಾವಣೆಯಾಗಿರುವ ಅವರು ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಲವು ಗಂಭೀರ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ನಡೆಸಿದ್ದರು. ಕೇಂದ್ರ ಸರ್ಕಾರದ ಐಪಿಎಸ್ ಸಿವಿಲ್ ಪಟ್ಟಿಯಲ್ಲೂ ಅವರ ಸೇವಾ ವಿವರಗಳು ದಾಖಲಾಗಿವೆ.
ದರೋಡೆ ಪ್ರಕರಣ: ಲೋಕೇಶ್ ಅವರು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದಾಗ ನಡೆದ ಅತ್ಯಂತ ಗಮನ ಸೆಳೆದ ಪ್ರಕರಣಗಳಲ್ಲಿ ೮೭.೧೧ ಕೋಟಿ ಮೌಲ್ಯದ ಕ್ಯಾಶ್ ವ್ಯಾನ್ ದರೋಡೆ ಪ್ರಕರಣವೂ ಒಂದಾಗಿದೆ. ೨೦೨೫ರ ನವೆಂಬರ್ ೧೯ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ನಗದು ಸಾಗಣೆ ವಾಹನ ತಡೆದು ೮೭.೧೧ ಕೋಟಿ ದೋಚಿದ್ದರು. ಪ್ರಕರಣದ ತನಿಖೆಯಲ್ಲಿ ಐದು ರಾಜ್ಯಗಳಲ್ಲಿ ಸುಳಿವುಗಳನ್ನು ಬೆನ್ನಟ್ಟಲಾಗಿತ್ತು. ಕೆಲವೇ ಗಂಟೆಗಳ ಅವಧಿಯಲ್ಲಿ ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳ ಬಗ್ಗೆ ಸುಳಿವು ಸಿಕ್ಕಿದ್ದು ಸುಮಾರು ೫೧ ಗಂಟೆಗಳಲ್ಲಿ ಪ್ರಮುಖ ಆರೋಪಿಗಳನ್ನು ಗುರುತಿಸಿ ವಶಕ್ಕೆ ಪಡೆಯಲಾಗಿತ್ತು. ೮೫.೭೬ ಕೋಟಿ ಹಣವನ್ನು ೬೦ ಗಂಟೆಗಳೊಳಗೆ ವಶಪಡಿಸಿಕೊಳ್ಳಲಾಗಿತ್ತು. ನಂತರ ಪ್ರಕರಣದಲ್ಲಿ ಒಂಬತ್ತು ಆರೋಪಿಗಳ ವಿರುದ್ಧ ೧,೩೨೮ ಪುಟಗಳ ಚಾರ್ಜ್ಶೀಟ್ ನಲ್ಲಿಸಲಾಗಿತ್ತು. ಪ್ರತ್ಯಕ್ಷದರ್ಶಿಗಳ ಹೇಳಿಕೆ, ಸಿಸಿಟಿವಿ, ತಾಂತ್ರಿಕ ಸಾಕ್ಷ್ಯ, ಬೆರಳಚ್ಚು ಸೇರಿದಂತೆ ೧೨೯ ಸಾಕ್ಷ್ಯಗಳನ್ನು ಪ್ರಕರಣದಲ್ಲಿ ಸಂಗ್ರಹಿಸಲಾಗಿತ್ತು. ಈ ತನಿಖೆಯಲ್ಲಿ ಲೋಕೇಶ್ ಜಗಲಸಾರ್ ಮಹತ್ವದ ಪಾತ್ರ ವಹಿಸಿದ್ದರು.
ಸಿ.ಜೆ. ರಾವ್ ಕೇಸ್: ಬೆಂಗಳೂರು ನಗರದ ಮತ್ತೊಂದು ಹೈಪ್ರೊಫೈಲ್ ಪ್ರಕರಣವಾದ ಕಾನ್ಪಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಅವರ ನಾವು ಪ್ರಕರಣದಲ್ಲೂ ಲೋಕೇಶ್ ಅವರಿಗೆ ಪ್ರಮುಖ ತನಿಖಾ ಹೊಣೆಗಾರಿಕೆ ನೀಡಲಾಗಿತ್ತು. ೨೦೨೬ರ ಜನವರಿಯಲ್ಲಿ ಬೆಂಗಳೂರಿನ ಕಚೇರಿಯಲ್ಲಿ ಸಿಜೆ ರಾಯ್ ಗುಂಡೇಟಿನಿಂದ ಮೃತಪಟ್ಟ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆಗ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಲೋಕೇಶ್ ಅವರನ್ನು ತನಿಖಾಧಿಕಾರಿ ಆಗಿ ನೇಮಿಸಲಾಗಿತ್ತು. ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯ ಶೋಧ ಕಾರ್ಯಾಚರಣೆ ಸೇರಿದಂತೆ ವಿವಿಧ ಅಂಶಗಳನ್ನು ತನಿಖೆ ನಡೆಸಬೇಕಾಗಿತ್ತು. ೨೦೨೫ರ ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಸಿಬ್ಬಂದಿ ದರ್ಶನ್ ಸಾವಿನ ಪ್ರಕರಣವೂ ಗಮನ ಸೆಳೆದಿತ್ತು. ಆರಂಭದಲ್ಲಿ ಇದು ರಸ್ತೆ ಅಪಘಾತದಂತೆ ಕಂಡು ಬಂದಿದ್ದರೂ ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ಬಳಿಕ ಪೊಲೀಸರು ಇದು ಉzಶಪೂರ್ವಕವಾಗಿ ನಡೆದ ಕೃತ್ಯ ಎಂದು ಪತ್ತೆ ಹಚ್ಚಿದ್ದರು. ಮಾರ್ಷಲ್ ಆರ್ಟ್ಸ್ ತರಬೇತುದಾರ ಹಾಗೂ ಅವರ ಪತ್ನಿಯನ್ನು ಪ್ರಕರಣದಲ್ಲಿ ಬಂಧಿಸಲಾಗಿತ್ತು. ಪ್ರಕರಣದ ತನಿಖೆಯ ಕುರಿತು ಮಾಹಿತಿ ನೀಡಿದ್ದ ಲೋಕೇಶ್ ಅವರು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಘಟನೆಗಳ ಸರಮಾಲೆಯನ್ನು ಪೊಲೀಸರು ಪರಿಶೀಲಿಸಿದ್ದಾಗಿ ತಿಳಿಸಿದ್ದರು.
ಕಸದ ಲಾರಿಯಲ್ಲಿ ಪತ್ತೆಯಾದ ಮಹಿಳೆಯ ಮೃತದೇಹ: ೨೦೨೫ರ ಜೂನ್ನಲ್ಲಿ ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಕಸದ ಲಾರಿಯೊಳಗೆ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣವೂ ಲೋಕೇಶ್ ಅವರ ವ್ಯಾಪ್ತಿಯಲ್ಲಿ ನಡೆದ ಪ್ರಮುಖ ಪ್ರಕರಣವಾಗಿತ್ತು. ಮಹಿಳೆಯ ಲಿವ್ಇನ್ ಸಂಗಾತಿಯೇ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿತ್ತು. ಮೃತದೇಹ ಪತ್ತೆಯಾದ ಸುಮಾರು ೨೦ ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಲೋಕೇಶ್ ಪ್ರಮುಖವಾಗಿ ಕಾಣಿಸಿಕೊಂಡಿದ್ದರು.
೮೪.೧೨ ಕೋಟಿ ಮೌಲ್ಯದ ಚಿನ್ನದ ಆಭರಣ ಕಳವು: ೨೦೨೬ರ ಫೆಬ್ರವರಿಯಲ್ಲಿ ಬೆಂಗಳೂರಿನ ಗಿರಿನಗರದಲ್ಲಿನ ಬ್ಯಾಂಕ್ ಶಾಖೆಯೊಂದರಲ್ಲಿ ೮೧.೧೨ ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕನೊಬ್ಬ ೨೪ ಚಿನ್ನದ ಸಾಲ ಖಾತೆಗಳಿಗೆ ಸೇರಿದ ಸುಮಾರು ೨.೭೮ ಕೆ.ಜಿ. ಚಿನ್ನವನ್ನು ಕಳವು ಮಾಡಿದ್ದ. ಈ ಪ್ರಕರಣದ ಬಗ್ಗೆ ನೀಡಿದ್ದ ಡಿಸಿಪಿ ಲೋಕೇಶ್ ತನಿಖೆ ನಡೆಸಿದ್ದರು. ಆಭರಣಗಳನ್ನು ವಿವಿಧ ಗೋಲ್ಡ್ ಲೋನ್ ನಂಸ್ಥೆಗಳಲ್ಲಿ ಅಡಮಾನ ಇಟ್ಟಿರುವ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿತ್ತು. ಲೋಕೇಶ್ ಅವರು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅವಧಿಯಲ್ಲೂ ಹಲವು ಸೂಕ್ಷ್ಮ ಪ್ರಕರಣಗಳು ಸುದ್ದಿಯಾಗಿದ್ದವು. ಬಿಜೆಪಿ ವಿಧಾನಪರಿಷತ್ ಸದಸ್ಯರಿಗೆ ಬೆದರಿಕೆ ಹಾಕಲು ನಕಲಿ ಸಾಮಾಜಿಕ ಜಾಲತಾಣ ಖಾತೆ ಸೃಷ್ಟಿಸಿದ್ದ ಪ್ರಕರಣದಲ್ಲಿ ಬಾಗಲಕೋಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ತನಿಖೆಯಲ್ಲಿ ನಕಲಿ ಖಾತೆ ಬಳಸುತ್ತಿದ್ದ ವ್ಯಕ್ತಿಯನ್ನು ಗುರುತಿಸಲಾಗಿತ್ತು. ಈ ಪ್ರಕರಣದ ತನಿಖೆಯಲ್ಲಿಯೂ ಎಸ್ಪಿ ಲೋಕೇಶ್ ಹೆಚ್ಚಿನ ಮುತುವರ್ಜಿ ವಹಿಸಿದ್ದರು.









