ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ

0

ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಹಾಗೂ ಪೋಷಣ್ ಅಭಿಯಾನ ಯೋಜನೆಯಡಿ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಅ.9 ರಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಪೋಷಣ್ ಅಭಿಯಾನ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯತ್ ಇಒ ಭವಾನಿಶಂಕರ್ ಎನ್. ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಜಂಟಿ ನಿರ್ದೇಶಕ ಸುಂದರ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “1983 ರಲ್ಲಿ ಈ ಯೋಜನೆ ಬೆಳ್ತಂಗಡಿಯಲ್ಲಿ ಪ್ರಾರಂಭಗೊಂಡಿದೆ. ಇಂದು ನಾವು ತಿನ್ನುತ್ತಿರುವ ಆಹಾರ ಸುರಕ್ಷಿತವೇ ಎಂದು ಆಲೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಪೌಷ್ಟಿಕ ಆಹಾರವನ್ನು ಹುಡುಕುವ ಸ್ಥಿತಿಗೆ ನಾವು ತಲುಪಿದ್ದೇವೆ. ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಿ ಸೇವಿಸುವುದು ಒಳಿತು” ಎಂದು ಹೇಳಿದರು.

ಸಿಡಿಪಿಒ ಪ್ರಿಯಾ ಆಗ್ನೇಸ್ ಚಾಕೋ ಪ್ರಾಸ್ತಾವಿಕವಾಗಿ ಮಾತನಾಡಿ, “ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪೋಷಣ್ ಅಭಿಯಾನದ ಅಡಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲರ ಆರೋಗ್ಯ ಕಾಪಾಡುವುದು ಇದರ ಮುಖ್ಯ ಉದ್ದೇಶ. ‘ನಮ್ಮ ಅಂಗನವಾಡಿ ನಮ್ಮ ಜವಾಬ್ದಾರಿ’ ಎಂಬ ಘೋಷವಾಕ್ಯದೊಂದಿಗೆ ಪೋಷಣ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜತ್, ಸಮಾಜ ಕಲ್ಯಾಣ ಇಲಾಖೆಯ ಧೀರಜ್, ಅಂಗನವಾಡಿ ಕಾರ್ಯಕರ್ತೆಯರು, ಇಲಾಖಾ ಅಧಿಕಾರಿಗಳು, ಪೋಷಕರು ಉಪಸ್ಥಿತರಿದ್ದರು.ಸಿಡಿಪಿಒ ಪ್ರಿಯಾ ಆಗ್ನೇಸ್ ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆ ದಮಯಂತಿ ಬಳಗ ಪ್ರಾರ್ಥಿಸಿದರು, ವಲಯ ಹಿರಿಯ ಮೇಲ್ವಿಚಾರಕಿ ವಾಣಿಶ್ರೀ ವಂದಿಸಿದರು, ಕಾತ್ಯಾಯಿನಿ ಕಾರ್ಯಕ್ರಮ ನಿರೂಪಿಸಿದರು.

ಅಭಿಯಾನದಲ್ಲಿ 59 ವಿವಿಧ ಬಗೆಯ ಪೌಷ್ಟಿಕ ಆಹಾರಗಳ ಪ್ರದರ್ಶನವಿತ್ತು. ಸಣ್ಣ ಮಕ್ಕಳಿಗೆ ಅನ್ನಪ್ರಾಶನ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here