ದೌರ್ಜನ್ಯ ಪ್ರಕರಣಗಳಲ್ಲಿ ರಾಜಿ ಪಂಚಾಯಿತಿ ನಡೆಸಲು ಒತ್ತಡಬೆಳ್ತಂಗಡಿ ಉಪವಿಭಾಗದ ಪ.ಜಾತಿ, ಪಂಗಡಗಳ ಸಭೆಯಲ್ಲಿ ಆರೋಪ:ತನಿಖೆ ನಡೆಸಲಾಗುವುದು- ಪೊಲೀಸ್ ಠಾಣೆಗಳಲ್ಲಿ ಎಲ್ಲಾ ರೀತಿಯ ಪ್ರಕರಣಗಳನ್ನು ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು: ಡಿವೈಎಸ್‌ಪಿ

0

ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರಕರಣಗಳಲ್ಲಿ ರಾಜಿ ಪಂಚಾಯಿತಿ ನಡೆಸಲು ಪೊಲೀಸ್ ಠಾಣೆಗಳಲ್ಲಿ ಒತ್ತಡ ಹೇರಲಾಗುತ್ತಿದೆ. ಇದರಿಂದ ದೌರ್ಜನ್ಯಕ್ಕೊಳಗಾದವರು ಮಾನಸಿಕವಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ದಲಿತ ಮುಖಂಡ ಕೇಶವ ಆರೋಪಿಸಿದ್ದಾರೆ. ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೆ.೨೭ರಂದು ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಭೆಯಲ್ಲಿ ಅವರು ಮಾತನಾಡಿದರು. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ಮನೆಗೆ ನುಗ್ಗಿ ಆಸ್ತಿಪಾಸ್ತಿ ಧ್ವಂಸ ಮಾಡಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರು ರಾಜಿ ಪಂಚಾಯತಿಕೆಗೆ ಪ್ರಯತ್ನಿಸಿದ್ದರು. ಬಳಿಕ ಘಟನೆಯ ವಿಡಿಯೋ ಪರಿಶೀಲಿಸಿದ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕರಣ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇಶವ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಡಿವೈಎಸ್ಪಿ ಸಿ.ಕೆ. ರೋಹಿಣಿ ಅವರು ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು. ಪೊಲೀಸ್ ಠಾಣೆಗಳಲ್ಲಿ ಎಲ್ಲಾ ರೀತಿಯ ಪ್ರಕರಣಗಳನ್ನು ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮನೆಗೆ ಹಾನಿ ಯಾಗುವ ಕಾಮಗಾರಿ: ಲಾಯಿಲ ಗ್ರಾಮದ ಮಮತಾ ಮಾತನಾಡಿ ಹಲವು ವರ್ಷಗಳಿಂದ ವಾಸಿಸುತ್ತಿರುವ ನಮ್ಮ ಮನೆಗೆ ಹಾನಿಯಾಗುವ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈ ಕುರಿತು ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು. ಪ್ರತಿಕ್ರಿಯಿಸಿದ ಡಿವೈಎಸ್ಪಿ ತಡೆಗೋಡೆ ಕಾಮಗಾರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಂಸ್ಥೆಯ ಆಡಳಿತ ಮಂಡಳಿಗೆ ಸೂಚಿಸುವಂತೆ ಬೆಳ್ತಂಗಡಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆನಂದ್ ಅವರಿಗೆ ನಿರ್ದೇಶನ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಶಿಬಿರಕ್ಕೆ ಸಲಹೆ: ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಮಾತನಾಡಿ ಗ್ರಾಮ ಪಂಚಾಯತ್‌ಗಳ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಕ್ಕುಗಳು ಹಾಗೂ ಕಾನೂನುಗಳ ಕುರಿತು ಮಾಹಿತಿ ಶಿಬಿರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್‌ಗಳ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ಡಿವೈಎಸ್ಪಿ ರೋಹಿಣಿ ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ, ವಾರ್ಡನ್ ಬಸವರಾಜ್, ಉಪ್ಪಿನಂಗಡಿ ಠಾಣಾ ಇನ್ಸ್‌ಪೆಕ್ಟರ್ ನಾಗರಾಜ್ ಎಚ್.ಇ., ಬೆಳ್ತಂಗಡಿ ಸಬ್‌ಇನ್ಸ್‌ಪೆಕ್ಟರ್ ಆನಂದ್ ಎಂ., ವೇಣೂರು ಸಬ್‌ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ, ಧರ್ಮಸ್ಥಳ ಸಬ್‌ಇನ್ಸ್‌ಪೆಕ್ಟರ್ ಸಮರ್ಥ ಆರ್. ಗಾಣಿಗೇರ, ಬೆಳ್ತಂಗಡಿ ಸಂಚಾರಿ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ಪಿ ಮತ್ತು ನಿಂಗಪ್ಪ ಡಿ. ಜಕ್ಕಣ್ಣನವರ್, ಡಿವೈಎಸ್ಪಿ ಕಚೇರಿ ಸಿಬ್ಬಂದಿ ಮನೋಹರ್, ಪ್ರವೀಣ್ ಎಂ, ಧರೇಶ್ ಹಾಗೂ ಅಭಿಜಿತ್ ನಾಯ್ಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here