






ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಡಿಜಿಟಲ್ ಬಿಲ್ ಬದಲು ದಂಡ ಪಾವತಿ ರಸೀದಿ ನೀಡಿ, ಹಲ್ಲೆ ಮತ್ತು 50,500 ರೂ. ನಗದು ಕಿತ್ತುಕೊಂಡ ಆರೋಪದ ಮೇಲೆ ಎಫ್ಐಆರ್ ದಾಖಲಿಸಿರುವ ಪ್ರಕರಣದಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣ ಸಂಬಂಧ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರಿನ ಎಸ್. ಪ್ರತಾಪ್ ಸೇರಿ ಐವರು ಯುವಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠವು, ಪ್ರಕರಣದ ವಿವರಣೆ ನೀಡಲು ನವೆಂಬರ್ 6 ರಂದು ವಿಚಾರಣೆಗೆ ಮಂಗಳೂರು ವಲಯ ಅರಣ್ಯಾಧಿಕಾರಿ ಖುದ್ದು ಹಾಜರಾಗುವಂತೆ ಸೂಚಿಸಿದೆ. ಅಲ್ಲದೆ ಘಟನೆ ಕುರಿತು ಸ್ವತಂತ್ರ ಸಾಕ್ಷಿ ಇಲ್ಲವೆನ್ನುತ್ತಾ, ಅರ್ಜಿದಾರರನ್ನು ಮಂಪರು (ನಾರ್ಕೊ) ಪರೀಕ್ಷೆಗೆ ಸೂಚಿಸಿದ್ದ ಬೆಳ್ತಂಗಡಿ ಠಾಣೆಯ ತನಿಖಾಧಿಕಾರಿಯೂ ಖುದ್ದು ಹಾಜರಾಗಬೇಕು ಎಂದು ಆದೇಶಿಸಿ, ಅರ್ಜಿದಾರರ ವಿರುದ್ಧದ ಎಫ್ಐಆರ್ಗೆ ತಡೆಯಾಜ್ಞೆ ನೀಡಿದೆ. ಪ್ರವೇಶ ಶುಲ್ಕಕ್ಕೆ ಡಿಜಿಟಲ್ ಬಿಲ್ ಕೇಳಿದರೆ “ಬಿಲ್ಲಿಂಗ್ ಮೆಷಿನ್ ಹಾಳಾಗಿದೆ”, ಕೈಬರಹದ ಬಿಲ್ ಕೇಳಿದರೆ “ದಂಡ ಪಾವತಿ ರಸೀದಿ” ನೀಡಿರುವುದಕ್ಕೆ ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸರ್ಕಾರಿ ವಕೀಲರನ್ನು ಉದ್ದೇಶಿಸಿ, “ಡಿಜಿಟಲ್ ಬಿಲ್ ಕೇಳಿದರೆ ಮೆಷಿನ್ ಕೆಟ್ಟಿದೆ ಅಂತೀರಾ. ಮ್ಯಾನ್ಯುವಲ್ ಬಿಲ್ ಕೇಳಿದರೆ ದಂಡದ ರಸೀದಿ ಕೊಡ್ತೀರಾ? ಶುಲ್ಕದ ರಸೀದಿ ಇಲ್ಲದಿದ್ದರೆ ಪ್ರವಾಸಿಗರು ಪಾವತಿಸಿದ ದುಡ್ಡು ಎಲ್ಲಿಗೆ ಹೋಗುತ್ತಿದೆ? ಪ್ರೇಕ್ಷಣೀಯ ಸ್ಥಳಕ್ಕೆ ಬಂದರೆ ದಂಡ ವಿಧಿಸುತ್ತೀರಾ? ಬಿಲ್ಲಿಂಗ್ ಕೌಂಟರ್ನಲ್ಲಿ ಅರಣ್ಯ ವಾಚರ್ ಕೆಲಸ ಮಾಡುತ್ತಾರಾ? ಏನ್ರಿ ಇದೆಲ್ಲಾ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.”ದಿನಕ್ಕೆ ನೂರಾರು ಪ್ರವಾಸಿಗರು ಬರುತ್ತಾರೆ. ಸಂಗ್ರಹಿಸಿದ ಶುಲ್ಕಕ್ಕೆ ಎಲ್ಲಿದೆ ಲೆಕ್ಕ? ದುಡ್ಡು ಸರ್ಕಾರಕ್ಕೆ ಹೋಗುತ್ತಿದೆಯೇ ಎನ್ನುವುದೇ ಅನುಮಾನ. ಡಿಜಿಟಲ್ ಬಿಲ್ ಕೇಳಿದ್ದಕ್ಕೆ ಅರ್ಜಿದಾರರ ಮೇಲೆಯೇ ದೂರು ದಾಖಲಿಸುವುದೇ? ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಬ್ರಿಟಿಷ್ ಪಳೆಯುಳಿಕೆಯಾಗಿದ್ದಾರೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿದಾರರು ಮತ್ತು 15 ಮಂದಿ ಸ್ನೇಹಿತರು 2026ರ ಜುಲೈ 19ರಂದು ಮಲವಂತಿಗೆ-ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದರು. ತಲಾ 200 ರೂ.ನಂತೆ ಒಟ್ಟು 3,000 ರೂ. ಪ್ರವೇಶ ಶುಲ್ಕ ಪಾವತಿಸಿದ್ದರು. ಬಿಲ್ ಕೇಳಿದಾಗ ಕರ್ತವ್ಯನಿರತ ಸಿಬ್ಬಂದಿ ಭರತೇಶ್ ಡಿಜಿಟಲ್ ಬಿಲ್ ನೀಡದೆ ದಂಡದ ರಸೀದಿ ನೀಡಿದ್ದು ವಾಗ್ವಾದಕ್ಕೆ ಕಾರಣವಾಗಿತ್ತು.
ನಂತರ ಅರಣ್ಯ ವಾಚರ್ ಗೋಪಾಲ್ ಅವರು, ಅರ್ಜಿದಾರರು ಭರತೇಶ್ ಮೇಲೆ ಹಲ್ಲೆ ನಡೆಸಿ 50,500 ರೂ. ಇದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎಫ್ಐಆರ್ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.









