






ಶಿಶಿಲ: ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಶಿಶಿಲ-ಬೈರಾಪುರ ರಸ್ತೆ ಹೋರಾಟ ಸಮಿತಿಯ ಸಭೆ ಸೆ.24ರಂದು ಶಿಶಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಹೋರಾಟ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.


ಶಿಶಿಲ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಗ್ರಾಮಸ್ಥರನ್ನು ಒಗ್ಗೂಡಿಸಿ, ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕಾಗಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.ಬೃಹತ್ ಹಕ್ಕೊತ್ತಾಯ ಸಭೆಯ ರೂಪುರೇಷೆ ಹಾಗೂ ಮುಂದಿನ ಹೋರಾಟದ ಕಾರ್ಯಯೋಜನೆ ಸಿದ್ಧಪಡಿಸುವ ಸಲುವಾಗಿ ಅ.4ರಂದು ಬೆಳಿಗ್ಗೆ 11 ಗಂಟೆಗೆ ಶಿಶಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಪ್ರಮುಖರ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಯಿತು.
ಶಿಶಿಲ-ಬೈರಾಪುರ ರಸ್ತೆ ನಿರ್ಮಾಣದ ಬೇಡಿಕೆಗಾಗಿ ನಡೆಯುತ್ತಿರುವ ಹೋರಾಟವು ಸಂಪೂರ್ಣವಾಗಿ ರಾಜಕೀಯ ರಹಿತ ಹಾಗೂ ಪಕ್ಷಾತೀತ ಹೋರಾಟವಾಗಿದ್ದು, ರಸ್ತೆ ನಿರ್ಮಾಣಕ್ಕಾಗಿ ಎಲ್ಲರೂ ಪಕ್ಷಭೇದ ಮರೆತು ಒಗ್ಗೂಡಬೇಕು ಎಂದು ಹೋರಾಟ ಸಮಿತಿ ಮನವಿ ಮಾಡಿದೆ.









