






ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ೧೪ ವರ್ಷಗಳ ಬಳಿಕ ಮತ್ತೆ ಮಹತ್ವದ ತಿರುವು ಸಿಕ್ಕಿದೆ.
ಪ್ರಕರಣದ ಹಿಂದಿನ ತನಿಖೆಯಲ್ಲಿ ಹಲವು ಲೋಪಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಲು ಆದೇಶಿಸಿದೆ.
ರಾಜ್ಯ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಮರುತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ಚ್ದೇವ್ ಈ ಆದೇಶ ಹೊರಡಿಸಿದ್ದಾರೆ. ಕುಸುಮಾವತಿ ಪರ ಹಿರಿಯ ವಕೀಲರಾದ ಶೋಭಾ ಗುಪ್ತ, ಸಂಜಯ್ ಎಮ್. ನೂಲಿ ಮತ್ತು ಶೇಖರ ಜಿ. ದೇವಸ ವಾದಿಸಿದ್ದರು.
೨೦೧೨ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಹಲವು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದ್ದರೂ ಆರೋಪಿಯಾಗಿದ್ದ ಕಾರ್ಕಳದ ಸಂತೋಷ್ ರಾವ್ ಖುಲಾಸೆಯಾಗಿದ್ದರು. ಇದಾದ ಬಳಿಕ ಸೌಜನ್ಯಾ ಕುಟುಂಬವು ಪ್ರಕರಣದ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಲು ಮರುತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿತ್ತು. ಇದೀಗ ಸುಪ್ರೀಂಕೋರ್ಟ್ನ ಆದೇಶದಿಂದ ಪ್ರಕರಣದ ತನಿಖೆ ಮತ್ತೆ ಆರಂಭವಾಗುವಂತಾಗಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ೧೭ ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ತನಿಖೆ ನಡೆದ ರೀತಿಯ ಬಗ್ಗೆ ತೀವ್ರ ಕಳವಳ ದಾಖಲಿಸಿದೆ. ಹಿಂದಿನ ತನಿಖೆಯ ಲೋಪಗಳಿಂದ ಸತ್ಯಾಂಶ ಪತ್ತೆಯಾಗದೆ ಉಳಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೊಸ ತನಿಖೆ ಅಗತ್ಯವೆಂದು ನ್ಯಾಯಾಲಯ ನಿರ್ಧರಿಸಿದೆ.
೨೦೧೨ರ ಅಕ್ಟೋಬರ್ನಲ್ಲಿ ನಡೆದ ಘಟನೆ: ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ೧೭ ವರ್ಷದ ಸೌಜನ್ಯಾ ಅವರು ೨೦೧೨ರ ಅಕ್ಟೋಬರ್ ೯ರಂದು ಕಾಲೇಜಿನಿಂದ ಮನೆಗೆ ತೆರಳಿದ್ದರು. ಮಣ್ಣಸಂಕ ಬಸ್ ನಿಲ್ದಾಣದ ಬಳಿ ಇಳಿದು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ಆರಂಭಿಸಿದ್ದರು. ಮರುದಿನ ಮಣ್ಣಸಂಕದ ಪೊದೆಗಳ ನಡುವೆ ಸೌಜನ್ಯಾ ಅವರ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ನಂತರ ತನಿಖೆ ಸಿಐಡಿಗೆ ಮತ್ತು ಬಳಿಕ ಸಿಬಿಐಗೆ ವರ್ಗಾವಣೆಯಾಯಿತು. ಕಾರ್ಕಳದ ಸಂತೋಷ್ ರಾವ್ ಅವರನ್ನು ಆರೋಪಿಯಾಗಿ ಗುರುತಿಸಿ ಬಂಧಿಸಲಾಗಿತ್ತು. ಆದರೆ ೨೦೨೩ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತು.
ಹಿಂದಿನ ತನಿಖೆಯಲ್ಲಿನ ಲೋಪಗಳೇನು?: ಪ್ರಕರಣದ ಮರುತನಿಖೆಗೆ ಪ್ರಮುಖ ಕಾರಣಗಳಲ್ಲಿ ಹಿಂದಿನ ತನಿಖೆಯಲ್ಲಿನ ಹಲವು ಲೋಪಗಳೂ ಸೇರಿವೆ. ಮೃತದೇಹ ಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಪರಿಸ್ಥಿತಿ, ಸಿಸಿಟಿವಿ ದೃಶ್ಯಗಳು, ಕೆಲವು ಸಾಕ್ಷಿದಾರರ ಹೇಳಿಕೆಗಳು ಸೇರಿದಂತೆ ಹಲವು ಅಂಶಗಳನ್ನು ಸಮರ್ಪಕವಾಗಿ ಪರಿಶೀಲಿಸಲಾಗಿಲ್ಲ ಎಂಬ ವಿಚಾರ ನ್ಯಾಯಾಲಯದ ಗಮನಕ್ಕೆ ಬಂದಿದೆ. ಅತ್ಯಂತ ಪ್ರಮುಖ ಅಂಶವೆಂದರೆ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ವೈಜ್ಞಾನಿಕ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂರಕ್ಷಿಸಿ ಪರೀಕ್ಷಿಸಲಾಗಿಲ್ಲ ಎಂಬುದು. ಸೌಜನ್ಯಾ ಅವರ ಉಡುಪುಗಳಲ್ಲಿ ಪತ್ತೆಯಾದ ಕೆಲವು ವಸ್ತುಗಳು ಹಾಗೂ ಇತರ ಸಾಕ್ಷ್ಯಗಳನ್ನು ಆಧುನಿಕ ವೈಜ್ಞಾನಿಕ ವಿಧಾನಗಳ ಮೂಲಕ ಮರುಪರಿಶೀಲಿಸುವ ಸಾಧ್ಯತೆಯನ್ನೂ ನ್ಯಾಯಾಲಯ ಪರಿಗಣಿಸಿದೆ. ಕೆಲವು ಪ್ರಮುಖ ಸಾಕ್ಷಿದಾರರನ್ನು ವಿಚಾರಣೆ ನಡೆಸದೇ ಬಿಟ್ಟಿರುವುದು ಹಾಗೂ ಹಿಂದಿನ ತನಿಖೆಯಲ್ಲಿ ಸಂಗ್ರಹವಾಗಿದ್ದ ಕೆಲವು ತಾಂತ್ರಿಕ ಮಾಹಿತಿಯನ್ನು ಮುಂದಿನ ತನಿಖಾಧಿಕಾರಿಗಳಿಗೆ ಸಮರ್ಪಕವಾಗಿ ಹಸ್ತಾಂತರಿಸದಿರುವ ಅಂಶಗಳೂ ಪ್ರಶ್ನೆಗೆ ಒಳಪಟ್ಟಿವೆ.
ವಿಚಾರಣಾ ನ್ಯಾಯಾಲಯದ ದಾಖಲೆಯ ಪ್ರಕಾರ, ಘಟನೆ ನಡೆದ ಸ್ಥಳದ ಸಮೀಪದ ಸಿಸಿಟಿವಿ ದೃಶ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ಪರಿಶೀಲಿಸಿರಲಿಲ್ಲ. ಸೌಜನ್ಯಾ ಅವರ ಛತ್ರಿ, ಚಪ್ಪಲಿ ಹಾಗೂ ಒಳ ಉಡುಪುಗಳು ಪತ್ತೆಯಾಗಿರಲಿಲ್ಲ. ಪ್ರಮುಖ ವೈದ್ಯಕೀಯ ಸಾಕ್ಷ್ಯವಾಗಬಹುದಾಗಿದ್ದ ಯೋನಿ ಸ್ವ್ಯಾಬ್ ಅನ್ನು ಸರಿಯಾಗಿ ಸಂರಕ್ಷಿಸದ ಕಾರಣ ಡಿಎನ್ಎ ಪರೀಕ್ಷೆಗೆ ಸೂಕ್ತ ಫಲಿತಾಂಶ ದೊರೆಯಲಿಲ್ಲ ಎಂದು ತೀರ್ಪಿನಲ್ಲಿ ದಾಖಲಾಗಿದೆ. ಅದೇ ರೀತಿ, ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮಳೆ ಬಿದ್ದಿದ್ದರೂ ಶಾಲಾ ಬ್ಯಾಗ್ನಲ್ಲಿದ್ದ ಪುಸ್ತಕಗಳು ಒದ್ದೆಯಾಗಿರಲಿಲ್ಲ ಎಂಬ ಅಂಶವನ್ನೂ ವಿಚಾರಣಾ ನ್ಯಾಯಾಲಯ ಗಮನಿಸಿತ್ತು. ಇದರಿಂದ ಅಪರಾಧ ನಡೆದ ಸ್ಥಳ ಮತ್ತು ಮೃತದೇಹ ಪತ್ತೆಯಾದ ಸ್ಥಳ ಒಂದೇ ಆಗಿತ್ತೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಅಂಶವನ್ನು ಹಿಂದಿನ ತನಿಖಾಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ನ್ಯಾಯಾಲಯದ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಪ್ರಮುಖ ಸಾಕ್ಷಿದಾರರನ್ನು ವಿಚಾರಣೆ ನಡೆಸದೇ ಬಿಟ್ಟಿರುವುದು, ಹಿಂದಿನ ತನಿಖೆಯಲ್ಲಿ ಸಂಗ್ರಹಿಸಲಾದ ಕೆಲವು ಮೊಬೈಲ್ ಟವರ್ ಡಂಪ್ ಮಾಹಿತಿಯನ್ನು ಮುಂದಿನ ತನಿಖಾಧಿಕಾರಿಗಳಿಗೆ ಹಸ್ತಾಂತರಿಸದಿರುವುದು ಸೇರಿದಂತೆ ಹಲವು ಅಂಶಗಳೂ ನ್ಯಾಯಾಲಯದ ಗಮನಕ್ಕೆ ಬಂದಿವೆ.
ಹೊಸ ಎಸ್ಐಟಿಗೆ ಮಹತ್ವದ ಷರತ್ತು: ಹೊಸದಾಗಿ ರಚನೆಯಾಗುವ ಎಸ್ಐಟಿಯಲ್ಲಿ ಹಿಂದಿನ ತನಿಖೆಗಳಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಸೇರಿಸಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಬೆಳ್ತಂಗಡಿ ಪೊಲೀಸರು, ಸಿಐಡಿ ಅಥವಾ ಸಿಬಿಐ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊರಗಿಟ್ಟು ಹೊಸ ತಂಡ ರಚಿಸಬೇಕು ಎಂದು ಸೂಚಿಸಲಾಗಿದೆ.
ಆಧುನಿಕ ತನಿಖಾ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಬಳಕೆಯಲ್ಲಿ ಪರಿಣತಿ ಹೊಂದಿರುವ ಅಧಿಕಾರಿಗಳನ್ನು ತಂಡದಲ್ಲಿ ಸೇರಿಸಬೇಕು. ತನಿಖೆಯನ್ನು ಸ್ವತಂತ್ರವಾಗಿ ನಡೆಸಿ, ಲಭ್ಯವಿರುವ ಹಳೆಯ ಸಾಕ್ಷ್ಯಗಳನ್ನೂ ಮರುಪರಿಶೀಲಿಸಬೇಕು ಎಂಬುದು ನ್ಯಾಯಾಲಯದ ನಿರ್ದೇಶನವಾಗಿದೆ.
ಸತ್ಯಾಸತ್ಯತೆ ಪತ್ತೆಹಚ್ಚುವ ಸವಾಲು: ಪ್ರಕರಣಕ್ಕೆ ಹಲವು ವರ್ಷಗಳು ಕಳೆದಿದ್ದರೂ ಲಭ್ಯವಿರುವ ವೈಜ್ಞಾನಿಕ ಸಾಕ್ಷ್ಯಗಳು ತನಿಖೆಗೆ ನೆರವಾಗಬಹುದು ಎಂಬ ಅಂಶವೂ ಮಹತ್ವ ಪಡೆದಿದೆ. ಹಳೆಯ ಸಾಕ್ಷ್ಯಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಮರುಪರಿಶೀಲಿಸುವ ಸಾಧ್ಯತೆ ಇರುವುದರಿಂದ ಕಾಲ ಕಳೆದಿರುವುದೇ ಮರುತನಿಖೆಗೆ ಅಡ್ಡಿಯಾಗುವುದಿಲ್ಲ ಎಂಬ ನಿಲುವನ್ನು ಸುಪ್ರೀಂ ಕೋರ್ಟ್ ತೆಗೆದುಕೊಂಡಿದೆ. ಆದರೆ ಹಿಂದಿನ ತನಿಖೆಯಲ್ಲಿ ಹೆಸರುಗಳು ಕೇಳಿಬಂದಿದ್ದ ವ್ಯಕ್ತಿಗಳನ್ನೇ ಅಪರಾಧಿಗಳೆಂದು ಪರಿಗಣಿಸಬಾರದು ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೊಸ ಎಸ್ಐಟಿ ತನ್ನದೇ ಆದ ಸ್ವತಂತ್ರ ತನಿಖೆಯ ಆಧಾರದ ಮೇಲೆ ಸತ್ಯಾಸತ್ಯತೆಯನ್ನು ಪತ್ತೆಹಚ್ಚಬೇಕು.


ಶ್ರೀಕ್ಷೇತ್ರ ಧರ್ಮಸ್ಥಳ ಸ್ವಾಗತ: ಸರ್ವೋಚ್ಚ ನ್ಯಾಯಾಲಯ ಕು. ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿರುವ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ನಾವು ಮುಕ್ತಮನಸ್ಸಿನಿಂದ ಸ್ವಾಗತಿಸುತ್ತೇವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಶ್ರೀ ಕ್ಷೇತ್ರದ ಮೇಲೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಹಾಗೂ ನಿರಂತರವಾಗಿ ಅಪಪ್ರಚಾರ ನಡೆಸಿ, ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕುಮಾರಿ ಸೌಜನ್ಯಾಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ದೃಢವಾದ ಆಶಯ. ಈಗ ಆದೇಶಿಸಲಾಗಿರುವ ಮರು ತನಿಖೆಯು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ ಮತ್ತು ಈ ಮೂಲಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ ಎಂದು ನಾವು ಆಶಿಸುತ್ತೇವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ದೇವಾಲಯ ಕಚೇರಿಯ ವ್ಯವಸ್ಥಾಪಕ ಪಾರ್ಶ್ವನಾಥ್ ಜೈನ್ ತಿಳಿಸಿದ್ದಾರೆ.
ನನ್ನ ಮಗಳಿಗೆ ನ್ಯಾಯ ಸಿಗುವ ವಿಶ್ವಾಸವಿದೆ: ಕುಸುಮಾವತಿ
ಹದಿನಾಲ್ಕು ವರ್ಷಗಳ ಕಾಲ ಮಗಳ ಸಾವಿನ ಕುರಿತು ನ್ಯಾಯಕ್ಕಾಗಿ ಹೋರಾಟ ಮಾಡಿದ್ದೆವು. ಮಗಳ ಸಾವು ಮರುತನಿಖೆ ಆಗಬೇಕು ಎಂದು ಒತ್ತಾಯಿಸಿ, ಸುಪ್ರೀಂ ಕೋರ್ಟ್ಗೆ ಮನವಿ ಯನ್ನೂ ಮಾಡಿದ್ದೆವು.ಇದೀಗ ಸುಪ್ರೀಂ ಕೋರ್ಟ್ ಈ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ.ಇದಕ್ಕಾಗಿ ಸೌಜನ್ಯ ಪರ ಹೋರಾಟಗಾರರು ಮತ್ತು ವಕೀಲರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ದಕ್ಷ ಅಧಿಕಾರಿಗಳಿಂದ ಈ ಪ್ರಕರಣದ ತನಿಖೆ ಮಾಡಬೇಕು. ನಮ್ಮಲ್ಲಿರುವ ಸಾಕ್ಷ್ಯಗಳನ್ನು ಸುಪ್ರೀಂ ಕೋರ್ಟ್ಗೆ ನೀಡಿzವೆ. ಕೊಂದವರು ಯಾರು ಎನ್ನುವುದು ಈ ತನಿಖೆಯಿಂದ ತಿಳಿಯುತ್ತದೆ.ನನ್ನ ಮಗಳಿಗೆ ನ್ಯಾಯ ಸಿಗುವ ವಿಶ್ವಾಸ ಇದೆ.
ಮರು ತನಿಖೆ ತೀರ್ಪು ಸ್ವಾಗತಾರ್ಹ – ಹರೀಶ್ ಪೂಂಜ: ಧರ್ಮಸ್ಥಳ ಗ್ರಾಮದ ಕುಮಾರಿ ಸೌಜನ್ಯ ಪ್ರಕರಣ ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ ಎಂದು ಶಾಸಕ ಹರೀಶ್ ಪೂಂಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರು ತನಿಖಯು ನಿಷ್ಪಕ್ಷಪಾತವಾಗಿ ನಡೆದು ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಆಗಿ ಕುಮಾರಿ ಸೌಜನ್ಯಳಿಗೆ ಸೂಕ್ತ ನ್ಯಾಯ ದೊರಕಲಿ ಎಂದು ಪೂಂಜ ತಿಳಿಸಿದ್ದಾರೆ.
ಮರು ತನಿಖೆಗೆ ರಕ್ಷಿತ್ ಶಿವರಾಂ ಸ್ವಾಗತ
ಬೆಳ್ತಂಗಡಿ: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರು ತನಿಖೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಮರು ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಪ್ರಕರಣದ ಸತ್ಯ ಹೊರಬಂದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಬೇಕು. ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕುವಂತಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.
ಸಾಕ್ಷ್ಯಗಳನ್ನು ಸುಪ್ರೀಂ ಕೋರ್ಟ್ಗೆ ನೀಡಿzವೆ: ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶಿಸಿದ್ದರಿಂದ ಹೊಸ ಆಶಾಭಾವನೆ ಮೂಡಿಸಿದೆ.
ಖಂಡಿತಾ ಸೌಜನ್ಯಳಿಗೆ ನ್ಯಾಯ ಸಿಗುವ ವಿಶ್ವಾಸ ಇದೆ.ವಕೀಲರ ತಂಡ ಅದ್ಭುತವಾಗಿ ಕೆಲಸವನ್ನು ಮಾಡಿದೆ. ನ್ಯಾಯಾಧೀಶರ ಈ ಆದೇಶದಿಂದ ಹೋರಾಟಕ್ಕೆ ಬಲ ಬಂದಿದೆ. ನಮ್ಮಲ್ಲಿರುವ ಸಾಕ್ಷ್ಯಗಳನ್ನು ಸುಪ್ರೀಂ ಕೋರ್ಟ್ಗೆ ನೀಡಿzವೆ. ದಕ್ಷ ಅಧಿಕಾರಿಗಳ ಮೂಲಕ ಪ್ರಕರಣದ ಮರು ತನಿಖೆ ನಡೆಯಲಿ. ತನಿಖೆಯಲ್ಲಿ ಲೋಪದೋಷಗಳಿದ್ದರೆ ಪ್ರಶ್ನಿಸುವ ಹಕ್ಕು ಸುಪ್ರೀಂ ಕೋರ್ಟ್ ನೀಡಿದೆ. ಹಿಂದಿನ ತನಿಖಾ ಸಂಸ್ಥೆಗಳ ತನಿಖೆಯಲ್ಲಿ ಪಾರದರ್ಶಕತೆ ಇರಲಿಲ್ಲ.
ಪ್ರಾಥಮಿಕ ಹಂತದಲ್ಲಿ ಪೊಲೀಸರು ಸಾಕ್ಷ್ಯ ನಾಶ ಮಾಡಿದ್ದಾರೆ. ರಾಜ್ಯ ಸರಕಾರ ದಕ್ಷ ಅಧಿಕಾರಿಗಳನ್ನ ಎಸ್ಐಟಿಗೆ ನಿಯೋಜಿಸಬೇಕು. ಸೌಜನ್ಯ ಕೇವಲ ಹೆಣ್ಣಲ್ಲ, ಆಕೆ ಒಂದು ಶಕ್ತಿ.
ಸುಪ್ರೀಂ ಸುಪರ್ದಿಯಲ್ಲಿ ನಡೆಯುವ ತನಿಖೆಯಿಂದ ಸತ್ಯಕ್ಕೆ ಜಯವಾಗಲಿದೆ.
-ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಪರ ಹೋರಾಟಗಾರ
ಸುಪ್ರೀಂಕೋರ್ಟ್ ಸೂಚನೆಗಳೇನು?
ಪ್ರಕರಣದ ಹೊಸದಾಗಿ ತನಿಖೆ ನಡೆಸಬೇಕು.
ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಹೊಸ ಎಸ್ಐಟಿ ರಚಿಸಬೇಕು.
ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಎಸ್ಐಟಿಯಿಂದ ಹೊರಗಿಡಬೇಕು.
ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಬಳಸಬೇಕು.
ಹಳೆಯ ದಾಖಲೆಗಳು, ಸಾಕ್ಷ್ಯಗಳು ಹಾಗೂ ಸಂಭಾವ್ಯ ಸಾಕ್ಷಿದಾರರನ್ನು ಮರುಪರಿಶೀಲಿಸಬೇಕು.
ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು.
ಈಗಾಗಲೇ ಖುಲಾಸೆಯಾಗಿರುವ ಸಂತೋಷ್ ರಾವ್ ಅವರನ್ನು ಇದೇ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಮತ್ತು ಕಾನೂನು ಕ್ರಮಕ್ಕೆ ಒಳಪಡಿಸಬಾರದು.
ಹಳೆಯ ಸಾಕ್ಷ್ಯಗಳೇ ಹೊಸ ತನಿಖೆಯ ಪ್ರಮುಖ ಆಧಾರ
ಕುಟುಂಬದ ಹೋರಾಟಕ್ಕೆ ಹೊಸ ತಿರುವು: ಸೌಜನ್ಯಾ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕುಟುಂಬ ನಡೆಸುತ್ತಿದ್ದ ಹೋರಾಟ ಇದೀಗ ಮತ್ತೊಂದು ಹಂತ ತಲುಪಿದೆ. ೨೦೨೩ರಲ್ಲಿ ಸಂತೋಷ್ ರಾವ್ ಖುಲಾಸೆಯಾದ ಬಳಿಕ ಪ್ರಕರಣದ ನಿಜವಾದ ಅಪರಾಧಿಗಳು ಯಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿತ್ತು. ಮರುತನಿಖೆಗೆ ಒತ್ತಾಯಿಸಿ ಕುಟುಂಬ ಕಾನೂನು ಹೋರಾಟ ಮುಂದುವರಿಸಿತ್ತು.
ಈ ಹಿಂದೆ ಹೈಕೋರ್ಟ್ ಕೂಡ ಪ್ರಕರಣದ ಹಲವು ಅಂಶಗಳನ್ನು ಪರಿಶೀಲಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಹೊಸ ತನಿಖೆಗೆ ಅವಕಾಶ ನೀಡಿರುವುದರಿಂದ ಪ್ರಕರಣದ ಹಳೆಯ ದಾಖಲೆಗಳು, ಸಾಕ್ಷ್ಯಗಳು ಮತ್ತು ತನಿಖೆಯಲ್ಲಿನ ಲೋಪಗಳು ಮತ್ತೊಮ್ಮೆ ಪರಿಶೀಲನೆಗೆ ಒಳಗಾಗಲಿವೆ. ೧೪ ವರ್ಷಗಳ ಹಿಂದೆ ನಡೆದ ಪ್ರಕರಣದ ಸತ್ಯವನ್ನು ವೈಜ್ಞಾನಿಕ ಸಾಕ್ಷ್ಯಗಳು ಮತ್ತು ಹೊಸ ತನಿಖೆ ಎಷ್ಟರ ಮಟ್ಟಿಗೆ ಬೆಳಕಿಗೆ ತರುತ್ತವೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಮೂರು ತಿಂಗಳ ಗಡುವಿನೊಳಗೆ ಎಸ್ಐಟಿ ಸಲ್ಲಿಸಲಿರುವ ವರದಿ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗೆ ಮಹತ್ವದ ದಿಕ್ಕು ನೀಡುವ ನಿರೀಕ್ಷೆಯಿದೆ.
ಹೈಕೋರ್ಟ್ನ ಹಿಂದಿನ ನಿಲುವು: ಸೌಜನ್ಯಾ ಅವರ ತಂದೆ ಮರುತನಿಖೆಗಾಗಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ೨೦೨೪ರ ಆಗಸ್ಟ್ ೩೦ರಂದು ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ ಸಂತೋಷ್ ರಾವ್ ಅಪರಾಧಿ ಅಲ್ಲವೆಂದು ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ, ಹಾಗಾದರೆ ಅಪರಾಧವನ್ನು ಬೇರೆ ಯಾರೋ ಮಾಡಿರಬೇಕು'' ಎಂಬ ಪ್ರಶ್ನೆ ಇರುವುದರಿಂದ ಪ್ರಕರಣಕ್ಕೆ ಮರುತನಿಖೆಯ ಅಗತ್ಯವಿದೆ ಎಂಬ ಅಭಿಪ್ರಾಯವನ್ನೂ ಹೈಕೋರ್ಟ್ ದಾಖಲಿಸಿತ್ತು. ಆದರೆ ಇಷ್ಟು ವರ್ಷಗಳ ಬಳಿಕ ಹೊಸ ಸಾಕ್ಷ್ಯ ಸಂಗ್ರಹಿಸುವುದು ಕಷ್ಟವಾಗಬಹುದು ಎಂದು ಮರುತನಿಖೆಗೆ ಅನುಮತಿ ನೀಡಿರಲಿಲ್ಲ. ಮರುತನಿಖೆಗೆ ಅಡ್ಡಿಯಾಗುವುದಿಲ್ಲ : ಸುಪ್ರೀಂ ಕೋರ್ಟ್ ಮುಂದೆ ೨೦೨೬ರಲ್ಲಿ ಕೆಲವು ಸಂಭಾವ್ಯ ಸಾಕ್ಷಿದಾರರನ್ನು ರಾಜ್ಯ ಸರ್ಕಾರ ಮೂರು ವಾರಗಳೊಳಗೆ ಪತ್ತೆಹಚ್ಚಿ ರಕ್ಷಣೆ ಒದಗಿಸಿದ ಅಂಶವೂ ದಾಖಲಾಗಿದೆ. ಇದರಿಂದ ಹಿಂದಿನ ತನಿಖಾ ಸಂಸ್ಥೆಗಳಿಗೆ ಸಮಯದಲ್ಲೇ ಅಂತಹ ಸುಳಿವುಗಳನ್ನು ಪರಿಶೀಲಿಸಲು ಸಾಧ್ಯವಾಗದಿರುವ ಬಗ್ಗೆ ನ್ಯಾಯಾಲಯ ಪ್ರಶ್ನೆ ಎತ್ತಿದೆ. ಘಟನೆ ನಡೆದು ಹಲವು ವರ್ಷಗಳಾಗಿವೆ; ಈಗ ಮರುತನಿಖೆಯಿಂದ ಏನು ಪ್ರಯೋಜನ?” ಎಂಬ ವಾದಕ್ಕೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉತ್ತರ ನೀಡಿದೆ. ಸೌಜನ್ಯಾ ಅವರ ಉಡುಪಿನಲ್ಲಿ ಪತ್ತೆಯಾಗಿದ್ದ ಇತರ ವ್ಯಕ್ತಿಯ ಕೂದಲಿನ ಮಾದರಿಯಂತಹ ಸಾಕ್ಷ್ಯ ಇನ್ನೂ ಲಭ್ಯವಿದೆ ಎಂದು ನ್ಯಾಯಾಲಯ ಗಮನಿಸಿದೆ. ಶಂಕಿತ ವ್ಯಕ್ತಿಗಳನ್ನು ಗುರುತಿಸಿದಲ್ಲಿ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆ ಮೂಲಕ ಹೋಲಿಕೆ ನಡೆಸುವ ಸಾಧ್ಯತೆಯಿದೆ ಎಂಬ ತಜ್ಞರ ಸಾಕ್ಷ್ಯವನ್ನೂ ನ್ಯಾಯಾಲಯ ಪರಿಗಣಿಸಿದೆ. ಹೀಗಾಗಿ ಕಾಲ ಕಳೆದಿರುವುದೇ ಮರುತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಯಾರ ಮೇಲೂ ಮುಂಚಿತ ಆರೋಪ ಇಲ್ಲ: ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ, ಹಿಂದಿನ ತನಿಖೆಯಲ್ಲಿ ಶಂಕಿತರೆಂದು ಉಲ್ಲೇಖಿಸಲ್ಪಟ್ಟ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಸೇರಿದಂತೆ ಯಾವುದೇ ವ್ಯಕ್ತಿಯ ವಿರುದ್ಧ ಸುಪ್ರೀಂ ಕೋರ್ಟ್ ತನ್ನದೇ ಆದ ಅಪರಾಧ ನಿರ್ಣಯವನ್ನು ಮಾಡಿಲ್ಲ. ತೀರ್ಪಿನಲ್ಲಿ ಈ ವ್ಯಕ್ತಿಗಳ ಪಾತ್ರದ ಬಗ್ಗೆ ಯಾವುದೇ ಅಭಿಪ್ರಾಯವನ್ನು, ಪ್ರಾಥಮಿಕ ಮಟ್ಟದಲ್ಲಿಯೂ ವ್ಯಕ್ತಪಡಿಸುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹೊಸ ಎಸ್ಐಟಿ ಹಿಂದಿನ ತೀರ್ಪಿನಲ್ಲಿರುವ ವಿಚಾರಗಳಿಂದ ಪ್ರಭಾವಿತರಾಗದೆ ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಸೂಚಿಸಿದೆ. ಅದೇ ರೀತಿ, ಈಗಾಗಲೇ ಸಂತೋಷ್ ರಾವ್ ಅವರನ್ನು ವಿಚಾರಣೆ ನಡೆಸಿ ಖುಲಾಸೆಗೊಳಿಸಿರುವುದರಿಂದ, ಸಂವಿಧಾನದ ವಿಧಿ ೨೦(೨) ಮತ್ತು ಸಂಬಂಧಿತ ಕಾನೂನು ರಕ್ಷಣೆಯಡಿ ಅವರನ್ನು ಮತ್ತೊಮ್ಮೆ ಇದೇ ಅಪರಾಧಕ್ಕೆ ಸಂಬಂಧಿಸಿ ವಿಚಾರಣೆ ಅಥವಾ ಕಾನೂನು ಕ್ರಮಕ್ಕೆ ಒಳಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.









