ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಗುಣಿ ನದಿಗೆ ಕಸ ಎಸೆದವರ ಪತ್ತೆ: ದಾಖಲೆ ಆಧರಿಸಿ ದಂಡ ವಿಧಿಸಿದ ಪಂಚಾಯತ್ ಅಧಿಕಾರಿಗಳು

0

​ಅಳದಂಗಡಿ: ಗ್ರಾಮದ ಪಲ್ಗುಣಿ ನದಿಗೆ ಯಾರೋ ದುಷ್ಕರ್ಮಿಗಳು ಮನೆಯ ಕಸವನ್ನು ತಂದು ಎಸೆದು ಹೋಗಿರುವ ಕುರಿತು ಸಾರ್ವಜನಿಕರಿಂದ ಗ್ರಾಮ ಪಂಚಾಯತ್‌ಗೆ ದೂರು ಬಂದಿತ್ತು. ಈ ದೂರಿನ ಆಧಾರದ ಮೇಲೆ ಎಚ್ಚೆತ್ತ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಕೂಡಲೇ ಸ್ಥಳಕ್ಕೆ ತೆರಳಿ, ನದಿಗಿಳಿದು ಪರಿಶೀಲನೆ ನಡೆಸಿದ್ದಾರೆ.

​ನದಿ ದಡಕ್ಕೆ ತಂದು ಬಿಡಿಸಲಾಗಿದ್ದ ಎರಡು ಗೋಣಿ ಚೀಲಗಳ ಕಸವನ್ನು ಪರಿಶೀಲಿಸಿದಾಗ, ಅದರಲ್ಲಿ ಬಡಗಕರಂದೂರು ಗ್ರಾಮದ ಶಂಕರ್ ದೇವಾಡಿಗ ಎಂಬುವವರ ಮನೆಯ ಕಸವಿರುವುದು ಆ ಚೀಲದಲ್ಲಿದ್ದ ದಾಖಲೆಗಳಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ​ಕೂಡಲೇ ಎಚ್ಚೆತ್ತ ಪಂಚಾಯತ್ ಅಧಿಕಾರಿಗಳು ಸಂಬಂಧಪಟ್ಟ ಶಂಕರ್ ದೇವಾಡಿಗ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಸಾರ್ವಜನಿಕ ಸ್ಥಳ ಹಾಗೂ ನದಿಯಲ್ಲಿ ಕಸ ಎಸೆದು ಪರಿಸರ ಮಾಲಿನ್ಯ ಉಂಟುಮಾಡಿದ್ದಕ್ಕಾಗಿ ಅವರಿಂದ ಪಂಚಾಯತ್‌ಗೆ ದಂಡ ವಿಧಿಸಿ ವಸೂಲಿ ಮಾಡಲಾಗಿದೆ.

ಅಲ್ಲದೆ, ನದಿಗೆ ಎಸೆಯಲು ತಂದಿದ್ದ ಆ ಗೋಣಿ ಚೀಲದ ಕಸವನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಕತ್ತೆರಸಿ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ. ನದಿಗಳಿಗೆ ಮತ್ತು ಸಾರ್ವಜನಿಕ ಜಾಗಗಳಿಗೆ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ಮೂಲಗಳು ಎಚ್ಚರಿಸಿವೆ.

LEAVE A REPLY

Please enter your comment!
Please enter your name here