






ತೆಕ್ಕಾರು: ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲಮೇಲು ಮತ್ತು ಗೋದಾಮುಗುಡ್ಡೆ ಪ್ರದೇಶಗಳಲ್ಲಿ ನೂತನ ಅಂಗನವಾಡಿ ಕೇಂದ್ರ ಮಂಜೂರು ಮಾಡುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತೆಕ್ಕಾರು ಇದರ ಅಧ್ಯಕ್ಷ ಬಿ. ಅಬ್ದುಲ್ ರಝಾಕ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ, ತೆಕ್ಕಾರು ಗ್ರಾ.ಪಂ. ವ್ಯಾಪ್ತಿಯ ಈ ಎರಡು ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರ ಇಲ್ಲದಿರುವುದು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದೆ. ಬೈಲಮೇಲು ಪ್ರದೇಶದಲ್ಲಿ 100ಕ್ಕೂ ಅಧಿಕ ಕುಟುಂಬಗಳು ವಾಸವಿದ್ದು, ಅಂಗನವಾಡಿ ಇಲ್ಲದ ಕಾರಣ ಮಕ್ಕಳು ಮತ್ತು ಬಾಣಂತಿಯರು ಸೌಲಭ್ಯಕ್ಕಾಗಿ 2.5 ಕಿ.ಮೀ. ದೂರದ ಕೇಂದ್ರಕ್ಕೆ ಹೋಗಬೇಕಾಗಿದೆ. ವಾರ್ಡ್ ನಂ. 2ರ ಗೋದಾಮುಗುಡ್ಡೆ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿದ್ದು ಅಲ್ಲಿಯೂ ಇದೇ ಸಮಸ್ಯೆ ಇದೆ ಎಂದು ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೈಲಮೇಲು ಸ.ನಂ. 64/1 ಮತ್ತು ಗೋದಾಮುಗುಡ್ಡೆ ಸ.ನಂ. 63/1ರ ಸರ್ಕಾರಿ ಜಮೀನಿನಲ್ಲಿ ನೂತನ ಕಟ್ಟಡ ನಿರ್ಮಿಸಿ ಅಂಗನವಾಡಿ ಕೇಂದ್ರ ತೆರೆಯಲು ಅನುದಾನ ಮಂಜೂರು ಮಾಡುವಂತೆ ಮನವಿಯಲ್ಲಿ ಕೋರಿದ್ದಾರೆ.









