ಮಿತ್ತಬಾಗಿಲು ಗ್ರಾಮಸಭೆ: ಸೇವಾ ನಿರತೆಗೆ ಬೀಳ್ಕೊಡುಗೆ, ಶೈಕ್ಷಣಿಕ ಸಾಧನೆಗೆ ಅಭಿನಂದನೆ

0

ಮಿತ್ತಬಾಗಿಲು:ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಸೆ. 18ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಸಿ. ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಲಕ್ಷ್ಮಿ ಅವರು ಗ್ರಾಮ ಸಭೆಯನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು.ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಯಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳು, ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಮಸ್ಥರಿಗೆ ಸಮಗ್ರ ಮಾಹಿತಿ ನೀಡಿದರು.

ಗ್ರಾಮದ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಯಿತು.44 ವರ್ಷ ಸೇವೆಗೆ ಸನ್ಮಾನ – ಶೈಕ್ಷಣಿಕ ಸಾಧನೆಗೆ ಗೌರವಈ ಗ್ರಾಮಸಭೆಯ ಪ್ರಮುಖ ಆಕರ್ಷಣೆಯಾಗಿ ಎರಡು ಸನ್ಮಾನ ಕಾರ್ಯಕ್ರಮಗಳು ನಡೆದವು.ಕಿಲ್ಲೂರು ಅಂಗನವಾಡಿ ಕೇಂದ್ರದಲ್ಲಿ ಕಳೆದ 44 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಕವಿತಾ ಶ್ರೀನಿವಾಸ ಗೌಡ ಅವರು ನಿವೃತ್ತರಾಗಿದ್ದು, ಅವರ ಸುದೀರ್ಘ ಸೇವೆಯನ್ನು ಗುರುತಿಸಿ ಗ್ರಾಮ ಸಭೆಯಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ನಾಲ್ಕು ದಶಕಗಳ ಕಾಲ ಪುಟಾಣಿ ಮಕ್ಕಳ ಆರೈಕೆ ಮಾಡಿದ ಅವರ ಸೇವೆ ಅನನ್ಯ.ಹಾಗೆಯೇ ಮಿತ್ತಬಾಗಿಲು ಪ್ರೌಢಶಾಲೆಯು ಸತತವಾಗಿ ಹತ್ತನೇ ತರಗತಿ (SSLC) ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಸಾಧನೆ ಮಾಡಿ ಗ್ರಾಮಕ್ಕೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ, ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ್ ಅವರನ್ನು ಗ್ರಾಮಸಭೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಒಕ್ಕೂಟದ ಸದಸ್ಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಕೆ ಸ್ವಾಗತಿಸಿದರು. ಮಧುಕರ್ ಪ್ರಭು ಎನ್ ಅವರು ಕಳೆದ ಸಾಲಿನ ವರದಿ ಹಾಗೂ ಜಮಾ-ಖರ್ಚಿನ ವಿವರಗಳನ್ನು ಓದಿ ಹೇಳಿದರು. ಸುಜಾತಾ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಗಳ ವಿವರವನ್ನು ಮಂಡಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಕೆ ವಂದಿಸಿ. ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here