







ಬೆಳ್ತಂಗಡಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಲಯ ಮಟ್ಟದ ಪುರುಷರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭರ್ಜರಿ ಜಯ ದಾಖಲಿಸಿ ಚಾಂಪಿಯನ್ ಆಗಿ ಹೊರಹಮ್ಮಿದ್ದಾರೆ.
ಪುರುಷರ ವಿಭಾಗದಲ್ಲಿ ಒಟ್ಟು 26 ತಂಡಗಳು ಈ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಸೆಮಿಫೈನಲ್ ಜಯ: ರೋಚಕವಾಗಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ತಂಡವನ್ನು 3-1 ಅಂತರದಿಂದ ಮಣಿಸಿ ಎಸ್‌ಡಿಎಂ ವಿದ್ಯಾರ್ಥಿಗಳು ಫೈನಲ್‌ಗೆ ಲಗ್ಗೆ ಇಟ್ಟರು.


ಫೈನಲ್ ಪಂದ್ಯದಲ್ಲಿ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ತಂಡವನ್ನು ಕೂಡ 3-1 ಅಂತರದಿಂದ ಸೋಲಿಸಿ ಉಜಿರೆಯ ಎಸ್‌ಡಿಎಂ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಈ ಗೆಲುವಿನ ಸಂಭ್ರಮದೊಂದಿಗೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನ ಕಾಲೇಜಿನ ಪುರುಷರ ಶಟಲ್ ಬ್ಯಾಡ್ಮಿಂಟನ್ ತಂಡವು, ಅಕ್ಟೋಬರ್ 1 ರಂದು ಬೆಂಗಳೂರಿನ ಆದಿತ್ಯ ಕಾಲೇಜಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಂತರ್ ವಲಯ ಪಂದ್ಯಾವಳಿಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ, ಮುಂದಿನ ಹಂತದ ಪಂದ್ಯಾವಳಿಗೆ ಶುಭ ಹಾರೈಸಿದರು.









