ಸರಿಯಾದ ದಾಖಲೆ ನೀಡಿದರೂ ಮತದಾರರ ಕರಡು ಪಟ್ಟಿಯಲ್ಲಿ ಲೋಪ: ಇಳಂತಿಲದ ಜಯಂತ್ ಆರೋಪ

0

ಬೆಳ್ತಂಗಡಿ: ಭಾರತೀಯ ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಅರ್ಹ ದಾಖಲೆಗಳನ್ನು ನೀಡಿದರೂ ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಕರಡು ಪ್ರತಿಯಲ್ಲಿ ಕೆಲವರ ಹೆಸರುಗಳು, ಮನೆ ನಂಬ್ರ ಸೇರಿದಂತೆ ಮಾಹಿತಿಗಳು ತಪ್ಪಾಗಿ ನಮೂದಾಗಿವೆ ಎಂದು ಇಳಂತಿಲ ಗ್ರಾಮದ ಪೆದಮಲೆಯ ಜೆ.ಕೆ. ಅಸೋಸಿಯೇಟ್ಸ್‌ನ ಜಯಂತ್ ಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆಗೆ ಬಂದ ಬಿಎಲ್‌ಗಳಿಗೆ ಅಗತ್ಯ ದಾಖಲೆಗಳನ್ನು ನೀಡಿದರೂ ಅವರು ಅದನ್ನು ನಮೂದಿಸುವಾಗ ತಪ್ಪುಗಳನ್ನು ಮಾಡಿದ್ದಾರೆ. ನನ್ನ ಹೆಸರು ಜಯಂತ್ ಕುಮಾರ್ ಎಂದಾಗಬೇಕು. ಆದರೆ ಕರಡು ಪ್ರತಿಯಲ್ಲಿ ಜಮೆಂತ ಕುಮಾರ್ ಎಂದು ನಮೂದಾಗಿದೆ. ಮನೆ ನಂಬರ್ ೩-೭೫ ಎಂದಾಗಬೇಕು. ಆದರೆ ಅದು ೩-೭೩ ಎಂದು ತಪ್ಪಾಗಿ ನಮೂದಾಗಿದೆ. ನನ್ನ ಪತ್ನಿಯ ವೋಟರ್ ಐಡಿಯ ಕರಡು ಪ್ರತಿಯಲ್ಲಿ ಆಕೆಯ ತಂದೆಯ ಹೆಸರಿನ ಮುಂದೆ ಜಯಂತ ಕುಮಾರ್ ಎಂದು ನನ್ನ ಹೆಸರನ್ನು ನಮೂದಿಸಲಾಗಿದೆ. ಆಕೆಯನ್ನು ಮಹಿಳೆ ಎಂದು ಗುರುತಿಸುವುದರ ಬದಲಾಗಿ ಪುರುಷ ಎಂದು ಗುರುತಿಸಲಾಗಿದೆ. ನಾವು ಸರಿಯಾದ ದಾಖಲೆಗಳನ್ನು ನೀಡಿದರೂ ಈ ರೀತಿಯ ಲೋಪ ದೋಷಗಳು ಉಂಟಾದರೆ ಯಾರು ಹೊಣೆ ? ಎಂದು ಅವರು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಲೋಪವಾಗಿರುವುದನ್ನು ಗಮನಿಸಿ ನಾವು ನಮ್ಮ ಕುಟುಂಬಿಕರು ಸೇರಿದಂತೆ ಹಲವರ ಕರಡು ಪ್ರತಿಯನ್ನು ಪರಿಶೀಲನೆ ನಡೆಸಿದಾಗ ಶೇ.೮೯ರಷ್ಟು ಕರಡು ಪ್ರತಿಗಳಲ್ಲಿ ಲೋಪ ಕಂಡು ಬರುತ್ತಿದೆ. ವಿದ್ಯಾವಂತರಾದರೂ ಇದನ್ನು ಗಮನಿಸಿ ಸರಿ ಮಾಡಿಸಬಹುದು. ಆದರೆ ಕೆಲವು ಅವಿದ್ಯಾವಂತರು ಈ ರೀತಿ ಲೋಪವಾದರೆ ಏನು ಮಾಡಬೇಕು. ಮತದಾರರ ಪಟ್ಟಿ ಆಧಾರ್ ಕಾರ್ಡ್‌ಗಳು ಅಮೂಲ್ಯ ದಾಖಲೆಯಾಗಿದ್ದು ಇವುಗಳು ಒಂದಕ್ಕೊಂದು ತಾಳೆ ಹೊಂದದಿದ್ದರೆ ನಾಳೆ ಜನರು ಸಮಸ್ಯೆಯನ್ನೆದುರಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕೆಂದು ಜಯಂತ್ ಕುಮಾರ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here