ಸೆ.೨೧-೨೩: ವಿಧಾನ ಮಂಡಲದ ವಿಶೇಷ ಅಧಿವೇಶನಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮಹತ್ವದ ಚರ್ಚೆ-ತಾಲೂಕಿನ ೧೭ ಗ್ರಾಮಗಳ ಜನರಿಗೆ ಭಾರೀ ಕುತೂಹಲ

0

ಬೆಳ್ತಂಗಡಿ: ಭೀಕರ ಬರ ಪರಿಸ್ಥಿತಿ ಹಾಗೂ ಪಶ್ಚಿಮಘಟ್ಟದ ಕಸ್ತೂರಿರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಕರ್ನಾಟಕ ಸರ್ಕಾರ ಸೆ.೨೧ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೂ ಆಗಿರುವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೆ.೨೧, ೨೨ ಹಾಗೂ ೨೩ರಂದು ವಿಶೇಷ ಅಧಿವೇಶನ ಕರೆಯಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ರೈತರು ಎದುರಿಸುತ್ತಿರುವ ಸಂಕಷ್ಟ ಮತ್ತು ರಾಜ್ಯದ ಆರ್ಥಿಕತೆ ಮತ್ತು ಆಹಾರ ಭದ್ರತೆಯ ಮೇಲೆ ಬರಗಾಲದ ವ್ಯಾಪಕ ಪರಿಣಾಮದ ಬಗ್ಗೆ ಸರ್ಕಾರ ವ್ಯಾಪಕವಾದ ಚರ್ಚೆಯನ್ನು ಬಯಸಿದೆ. ಮೂರು ದಿನಗಳ ಅಧಿವೇಶನ ಎರಡು ವಿಷಯಗಳಿಗೆ ಪ್ರತ್ಯೇಕವಾಗಿ ಮೀಸಲಾಗಿರುತ್ತದೆ. ಯಾವುದೇ ಪ್ರಶ್ನೋತ್ತರ ಸಮಯ ಅಥವಾ ಇತರ ನಿಯಮಿತ ಶಾಸಕಾಂಗ ವ್ಯವಹಾರಗಳಿಲ್ಲ ಎಂದು ಡಾ. ಪರಮೇಶ್ವರ ಅವರು ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಕಸ್ತೂರಿರಂಗನ್ ವರದಿಯನ್ನು ರಾಜ್ಯ ಈ ಹಿಂದೆ ಹಲವಾರು ಬಾರಿ ತಿರಸ್ಕರಿಸಿದೆ. ಆದರೂ ಕೇಂದ್ರ ಇದೀಗ ೭ನೇ ದಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಜನತೆಗೆ ಒಮ್ಮೆ ತಿಳಿಸಲು ಬಯಸಿದ್ದು ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆಯೂ ಚರ್ಚೆ ನಡೆಸುತ್ತೇವೆ. ಕಸ್ತೂರಿರಂಗನ್ ಸಮಿತಿಯ ವರದಿಯು ಪ್ರಾದೇಶಿಕ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯನ್ನು ಸಮತೋಲನಗೊಳಿಸಲು ಪಶ್ಚಿಮ ಘಟ್ಟಗಳ ಸುಮಾರು ೬೦,೦೦೦ ಚದರ ಕಿಲೋ ಮೀಟರ್ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲು ಪ್ರಸ್ತಾಪಿಸಿದೆ ಎಂದು ಅವರು ತಿಳಿಸಿದರು. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸಂಕಷ್ಟಕ್ಕೆ ಒಳಗಾಗುವ ಬೆಳ್ತಂಗಡಿ ತಾಲೂಕಿನ ೧೭ ಗ್ರಾಮಗಳ ಜನರಲ್ಲಿ ಈ ವಿಶೇಷ ಅಧಿವೇಶನ ಭಾರೀ ಕುತೂಹಲ ಮೂಡಿಸಿದೆ.
ಏಳನೇಯ ಅಧಿಸೂಚನೆ: ಪಶ್ಚಿಮ ಘಟ್ಟಗಳಾದ್ಯಂತ ಪರಿಸರ ಸೂಕ್ಷ್ಮ ಪ್ರದೇಶವನ್ನು ಪ್ರಸ್ತಾಪಿಸುವ ಹಿಂದಿನ ೨೦೧೪ರ ಆರನೇ ಆದಿಸೂಚನೆಯ ಕರಡು ಸಂಬಂಧಪಟ್ಟ ರಾಜ್ಯಗಳ ಆಕ್ಷೇಪಣೆಗಳಿಂದಾಗಿ ಅಂತಿಮಗೊಳ್ಳದ ಕಾರಣ ಅದರ ಅವಧಿಯು ಕಳೆದ ಜುಲೈ ೨೬ಕ್ಕೆ ಕೊನೆಗೊಂಡಿತ್ತು. ಇದರಿಂದಾಗಿ ಕೇಂದ್ರ ಪರಿಸರ ಸಚಿವಾಲಯ ಏಳನೇ ಬಾರಿಗೆ ತನ್ನ ಕರಡು ಅಧಿಸೂಚನೆಯನ್ನು ಜುಲೈ ೨೭ರಂದು ಮರು ಹೊರಡಿಸಿದೆ. ಪಶ್ಚಿಮ ಘಟ್ಟಗಳನ್ನು ೨೦೧೨ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ. ಇಲ್ಲಿಯ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಅವುಗಳ ಸಂರಕ್ಷಣೆಗಾಗಿ ಪರಿಸರ (ರಕ್ಷಣೆ) ಕಾಯ್ದೆ ೧೯೮೬ ಇದರಲ್ಲಿ ಅಡಕವಾಗುವಂತೆ ನಿರ್ದೇಶಿಸಲಾಗಿದೆ. ಪಶ್ಚಿಮ ಘಟ್ಟಗಳು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಹಬ್ಬಿಕೊಂಡಿವೆ. ಈ ಅಧಿಸೂಚನೆಯ ಪ್ರಕಾರ ಪಶ್ಚಿಮ ಘಟ್ಟಗಳ ೫೬,೮೨೫.೭ ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲು ಪ್ರಸ್ತಾಪಿಸಲಾಗಿದೆ. ಕರ್ನಾಟಕದ ೨೦,೬೬೮ ಚದರ ಕಿ.ಮೀ., ಮಹಾರಾಷ್ಟ್ರದ ೧೭,೩೪೦ ಚದರ ಕಿ.ಮೀ., ಕೇರಳದ ೯,೯೯೩.೭ ಚದರ ಕಿ.ಮೀ., ತಮಿಳುನಾಡಿನ ೬,೯೧೪ ಚದರ ಕಿ.ಮೀ., ಗೋವಾದ ೧,೪೬೧ ಚದರ ಕಿ.ಮೀ. ಮತ್ತು ಗುಜರಾತಿನ ೪೪೯ ಚದರ ಕಿ.ಮೀ. ಪ್ರದೇಶವನ್ನು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಪ್ರಸ್ತಾವಿತ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಒಟ್ಟು ಪ್ರದೇಶ ೨೦,೬೬೮ ಚ.ಕಿ.ಮೀ (ಎಲ್ಲಾ ಪೀಡಿತ ರಾಜ್ಯಗಳಲ್ಲಿ ಅತಿ ದೊಡ್ಡ ಪಾಲು) ಮತ್ತು ಅವುಗಳು ಹರಡಿಕೊಂಡಿರುವ ಗ್ರಾಮಗಳ ಸಂಖ್ಯೆ ೧,೫೨೯. ಕರಡು ಅಧಿಸೂಚನೆಯ ಅನುಬಂಧ ಸಿಯಲ್ಲಿ ಜಿಲ್ಲೆ, ತಾಲೂಕು ಹಾಗೂ ಗ್ರಾಮವಾರು ಅಧಿಕೃತ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಶ್ಚಿಮ ಘಟ್ಟಗಳ ಪ್ರದೇಶದಾದ್ಯಂತ ಕರ್ನಾಟಕದಲ್ಲಿ ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು, ಚಾಮರಾಜ ನಗರ, ಉತ್ತರ ಕನ್ನಡ, ಬೆಳಗಾಂ, ಉಡುಪಿ ಜಿಲ್ಲೆಗಳನ್ನು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ತಾಲೂಕಿನ ೧೧, ಬೆಳ್ತಂಗಡಿ ತಾಲೂಕಿನ ೧೭ ಮತ್ತು ಸುಳ್ಯ ತಾಲೂಕಿನ ೧೮ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಹೊಸದಾಗಿ ರಚನೆಯಾದ ಕಡಬ ತಾಲೂಕಿನ ಗ್ರಾಮಗಳು ಈ ಮೂರು ತಾಲೂಕುಗಳಲ್ಲಿ ಒಳಗೊಂಡಿವೆ. ಅವಿಭಜಿತ ಪುತ್ತೂರು ತಾಲೂಕಿನ ಕೌಕ್ರಾಡಿ, ಗೋಳಿತಟ್ಟು, ಶಿರಾಡಿ, ಅಲಂತಾಯ, ಸಿರಿಬಾಗಿಲು, ಇಚ್ಚಂಪಾಡಿ, ಬಲ್ಯ, ಕೊಂಬಾರು, ಬಿಳಿನೆಲೆ, ದೋಳ್ವಾಡಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿವೆ. ಕೇಂದ್ರ ಪರಿಸರ ಸಚಿವಾಲಯ ಜುಲೈ ೨೭, ೨೦೨೬ರಂದು ಹೊರಡಿಸಿದ ಏಳನೇ ಅಧಿಸೂಚನೆಯ ಕರಡನ್ನು ಅಂತಿಮ ಗೊಳಿಸುವ ಮುನ್ನ ಕರಡು ಹೊರಡಿಸಿದ ದಿನದಿಂದ ೬೦ ದಿನಗಳವರೆಗೆ ಸಾರ್ವಜನಿಕ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಮತ್ತು ಸಲಹೆ ಸೂಚನೆಗಳನ್ನು ನೀಡಲು ಅವಕಾಶವಿದೆ. ಕೇಂದ್ರ ಸಚಿವಾಲಯ ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆಯಲ್ಲಿ ಪಶ್ಚಿಮಘಟ್ಟಗಳ ಸಾವಿರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯದ ಪಟ್ಟಿಯಲ್ಲಿ ಸೇರಿಸಲಾಗಿದೆ ಈ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಕೇಂದ್ರ ಸರ್ಕಾರ ೬೦ ದಿನಗಳ ಕಾಲಾವಕಾಶ ನೀಡಿದೆ. ಆಕ್ಷೇಪಣೆ ಸಲ್ಲಿಸಲು ಬಯಸುವವರು ಅಥವಾ ಸಲಹೆ ಸೂಚನೆಗಳನ್ನು ನೀಡುವವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಕಳುಹಿಸಬಹುದು. ಸಂಬಂಧ ಪಟ್ಟ ರಾಜ್ಯಗಳೊಡನೆ ಸಮಾಲೋಚನೆ ನಡೆಸಿ
ಈ ಅಧಿಸೂಚನೆಯು ಒಮ್ಮೆ ಅಂತಿಮಗೊಂಡ ನಂತರ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಹೊಸ ಉಷ್ಣ ವಿದ್ಯುತ್ ಸ್ಥಾವರಗಳು, ಕೆಂಪು ವರ್ಗಕ್ಕೆ ಸೇರಿದ ಕಲುಷಿತಗೊಳಿಸುವ ದೊಡ್ಡ ಉದ್ಯಮಗಳು/ಕಾರ್ಖಾನೆಗಳು, ಬೃಹತ್ ಜಲವಿದ್ಯುತ್ ಯೋಜನೆಗಳು, ಬೃಹತ್ ಕಟ್ಟಡ ನಿರ್ಮಾಣ ಯೋಜನೆಗಳು (೨೦,೦೦೦ ಚದರ ಮೀಟರ್‌ಗಿಂತ ದೊಡ್ಡದು). ಹೊಸ ಟೌನ್‌ಶಿಪ್‌ಗಳು ಅಥವಾ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳು ಮೊದಲಾದುವುಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಿಸಲಾಗುವುದು ಎಂದು ಪ್ರಸ್ತಾಪ ಮಾಡಲಾಗಿದೆ. ಕಿರು ಜಲವಿದ್ಯುತ್ ಯೋಜನೆ, ಪರಿಸರ ಸ್ನೇಹಿ ಸಣ್ಣಪುಟ್ಟ ಕೈಗಾರಿಕೆಗಳು ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಯಂತ್ರಿಸಲಾಗುವುದು ಎಂದು ತಿಳಿಸಲಾಗಿದೆ.

ಮತ್ತೆ ಪ್ರತಿಭಟನೆ: ಕಸ್ತೂರಿ ರಂಗನ್ ವರದಿ ಜಾರಿ ವಿರುದ್ದ ಈಗಾಗಲೇ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕಸ್ತೂರಿ ರಂಗನ್ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಮೊಳಗಿದೆ. ಸಮಾಲೋಚನಾ ಸಭೆ, ಪ್ರತಿಕಾಗೋಷ್ಠಿ ನಡೆದಿದೆ. ಇದೀಗ ವಿಶೇಷ ಅಧಿವೇಶನದಲ್ಲಿ ಯಾವೆಲ್ಲಾ ಬೆಳವಣಿಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here