






ಬೆಳ್ತಂಗಡಿ: ಉಜಿರೆ ಗ್ರಾಮ ಅಜಿತ್ನಗರದ ಪ್ರದೀಪ್ ಬಾಬು ಶೆಟ್ಟಿ ಅವರು ಹಿಮದ ಬೆಟ್ಟಗಳ ನಡುವೆ ತನ್ನ ಸಾಹಸದ ಹೆಜ್ಜೆ ಗುರುತು ಮೂಡಿಸಿದ್ದಾರೆ. ೭,೦೭೭ ಮೀಟರ್ ಎತ್ತರದ ಭಾರತ ಮತ್ತು ಚೀನಾ ಗಡಿಯ ಲಡಾಖ್ನ ಮೌಂಟ್ ಕುನ್ ಪರ್ವತವನ್ನು ಏರಿ ಅದರ ಶಿಖರದಲ್ಲಿ ತುಳುನಾಡಿನ ಧ್ವಜವನ್ನು ಹಾರಿಸುವ ಮೂಲಕ ೩೭ ವರ್ಷದ ಪ್ರದೀಪ್ ಬಾಬು ಹೊಸ ಸಾಧನೆ ಮಾಡಿದ್ದಾರೆ. ಮೌಂಟ್ ಕುನ್ ಗ್ರೇಟರ್ ಹಿಮಾಲಯನ್ ಶ್ರೇಣಿಯ ಜನ್ಸ್ಕಾರ್ ಉಪಶ್ರೇಣಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಎತ್ತರದ ಪರ್ವತ ಶಿಖರಗಳಲ್ಲಿ ಒಂದು. ಸಮುದ್ರಮಟ್ಟದಿಂದ ೭,೦೭೭ ಮೀಟರ್ ಎತ್ತರದಲ್ಲಿದೆ. ಸಮುದ್ರ ಮಟ್ಟದ ಸಮೀಪದ ಕರಾವಳಿಯಲ್ಲಿ ಬದುಕುವವರಿಗೆ ಸಾವಿರಾರು ಮೀಟರ್ ಎತ್ತರದ ಹಿಮಪರ್ವತ ಏರುವುದು ಸುಲಭವಲ್ಲ. ಆಮ್ಲಜನಕದ ಕೊರತೆ, ತೀವ್ರ ಚಳಿ, ಹಿಮಗಾಳಿ, ಕಠಿಣವಾದ ಹಾದಿ. ಹೀಗೆ ಪ್ರತಿ ಹೆಜ್ಜೆಯೂ ಸವಾಲೇ. ಆದರೆ ಆ ಸವಾಲುಗಳನ್ನೇ ಮೆಟ್ಟಿಲಾಗಿಸಿಕೊಂಡ ಪ್ರದೀಪ್ ಬಾಬು ಮೌಂಟ್ ಕುನ್ ಶಿಖರವನ್ನು ಏರಿ ಕರಾವಳಿಯ ಹೆಮ್ಮೆಯ ಪುತ್ರ ಎಂದೆನಿಸಿಕೊಂಡಿದ್ದಾರೆ. ತಮ್ಮ ಸಾಹಸದ ಮೂಲಕ ತುಳುನಾಡಿನ ಹೆಸರನ್ನು ಹಿಮಾಲಯದ ಶಿಖರದವರೆಗೂ ಕೊಂಡೊಯ್ದ ಹೆಗ್ಗಳಿಕೆಗೆ ಪಾತ್ರರಾದ ಪ್ರದೀಪ್ ಬಾಬು ಅವರದ್ದು. ಇದು ಮೊದಲ ಸಾಹಸವೂ ಅಲ್ಲ.


ಈ ಹಿಂದೆಯೂ ಅವರು ನೇಪಾಳದ ಆರು ಸಾವಿರದಿಂದ ಏಳು ಸಾವಿರ ಮೀಟರ್ ಎತ್ತರದ ಹಲವು ಪರ್ವತಗಳನ್ನು ಏರಿದ್ದಾರೆ. ಅದೇ ರೀತಿ ಮೌಂಟ್ ಕುನ್ ಕೂಡ ಅವರ ಪರ್ವತಾರೋಹಣ ಪಯಣದ ಮತ್ತೊಂದು ಕಠಿಣ ಅಧ್ಯಾಯವಾಗಿದೆ. ಪ್ರದೀಪ್ ಅವರ ತಂದೆ ಬಾಬು ಶೆಟ್ಟಿ ಮೂಲತಃ ಪುತ್ತೂರು ತಾಲೂಕಿನ ಕೋಡಿಂಬಾಡಿಯವರು. ತಾಯಿ ಗಿರಿಜಾ ಶೆಟ್ಟಿ ಬನ್ನೂರಿನವರು. ಕಳೆದ ೩೦ ವರ್ಷಗಳಿಂದ ಇವರು ಬೆಳ್ತಂಗಡಿ ತಾಲೂಕಿನ ಉಜಿರೆಯ ಅಜಿತ್ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಮೂವರು ಮಕ್ಕಳಲ್ಲಿ ಕಿರಿಯವರಾದ ಪ್ರದೀಪ್ ಬಾಬು ಅವರು ಉಜಿರೆ ಎಸ್ಡಿಎಂ ವಿದ್ಯಾಭ್ಯಾಸ ಪೂರೈಸಿದ್ದು ಪ್ರಸ್ತುತ ಎಂಎನ್ಸಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಳೆದ ೪ ವರ್ಷಗಳಿಂದ ಪರ್ವತ ಶಿಖರಗಳನ್ನು ಏರುವ ಸಾಹಸ ಮಾಡುತ್ತಿದ್ದಾರೆ. ಪ್ರಮಾಣೀಕೃತ ಪರ್ವತಾರೋಹಿ ಆಗಿರುವ ಪ್ರದೀಪ್ ಈವರೆಗೆ ನೇಪಾಳದ ಮೌಂಟ್ ಲುಬೋಚ್(೬೧೧೯ ಮೀ), ಐ ಲ್ಯಾಂಡ್ ಪೀಕ್(೬,೧೮೯ ಮೀ), ಮೌಂಟ್ ಮೆರಾ ಪೀಕ್(೬,೪೭೬ ಮೀ) ಸೇರಿದಂತೆ ಹತ್ತಕ್ಕೂ ಹೆಚ್ಚಿನ ಕಠಿಣವಾದ ಪರ್ತವ ಶಿಖರಗಳನ್ನು ಹತ್ತಿದ್ದಾರೆ.
ತುಳುನಾಡಿಗೆ ಹೆಸರು ಬರಬೇಕು: ಕರಾವಳಿ ಪ್ರದೇಶದವರು ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಇದ್ದಾರೆ. ಆದರೆ ಪರ್ವತ ಶಿಖರ ಏರುವ ವಿಚಾರದಲ್ಲಿ ನಮ್ಮವರು ಕಡಿಮೆ. ನಮ್ಮ ದೇಹ ಪರ್ವತ ಹತ್ತಲು ಹೊಂದಿಕೊಳ್ಳುವುದಿಲ್ಲ ಎನ್ನುವ ಮಾತಿದೆ. ಅದು ಸುಳ್ಳು ಎಂದು ಸಾಬೀತುಪಡಿಸಬೇಕಿತ್ತು. ಅದನ್ನು ನಾನು ಮಾಡಿzನೆ. ನನ್ನ ಮುಂದಿನ ಗುರಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್. ಎವರೆಸ್ಟ್ ಏರುವ ಕನಸು ನನಸಾಗದಿದ್ದರೂ ಅದಕ್ಕಿಂತಲೂ ಅತ್ಯಂತ ಕಠಿಣವೆಂದು ಪರಿಗಣಿಸಲಾಗುವ ಮೌಂಟ್ ಅನ್ನಪೂರ್ಣದತ್ತ ಹೆಜ್ಜೆ ಇಡಬೇಕು ಎಂಬ ಸಂಕಲ್ಪ ಇದೆ. ನನ್ನಿಂದ ತುಳುನಾಡಿಗೆ ಹೆಸರು ಬರಬೇಕು. ನಾನು ಪರ್ವತದ ಶಿಖರ ತಲುಪಿದಾಗ ನನ್ನೊಂದಿಗೆ ತುಳುನಾಡಿನ ಹೆಸರು ಕೂಡ ಶಿಖರ ತಲುಪಬೇಕು. ಅದೇ ನನ್ನ ಕನಸು.-ಪ್ರದೀಪ್ ಶೆಟ್ಟಿ., ತುಳುನಾಡಿನ ಪರ್ವತಾರೋಹಿ









