ನಾಲ್ಕೂರು ಯುವಶಕ್ತಿ ಫ್ರೆಂಡ್ಸ್‌ನಿಂದ ವೈಭವದ ಮೊಸರು ಕುಡಿಕೆ ಉತ್ಸವಸಭಿಕರ ಗಮನ ಸೆಳೆದ ಪುಟಾಣಿಗಳ ಕೃಷ್ಣ ವೇಷ ಸ್ಪರ್ಧೆ: ಸಮಾಜದ ಅಭಿವೃದ್ಧಿಗೆ ಯುವಕರು ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು: ಶಾಸಕ ಪೂಂಜ

0

ಬಳಂಜ: ದೇಶದ ಶಕ್ತಿ ಯುವಜನತೆ. ಶ್ರೀಕೃಷ್ಣನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಯುವಕರು ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು. ಸಮಾಜಮುಖಿ ಚಿಂತನೆಯೊಂದಿಗೆ ಕೆಲಸ ಮಾಡಿದಾಗ ಸಮಾಜ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ನಾಲ್ಕೂರು ಯುವಶಕ್ತಿ ತಂಡದ ಜನಪರ ಹಾಗೂ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಸೆ. 6ರಂದು ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ವತಿಯಿಂದ ನಿಟ್ಟಡ್ಕ ಮೈದಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ 4ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಮಾತನಾಡಿ, ಯುವಶಕ್ತಿ ತಂಡದಿಂದ ನಿರಂತರವಾಗಿ ಸಮಾಜಮುಖಿ ಕೆಲಸಗಳು ನಡೆಯುತ್ತಿದ್ದು, ಯುವಕರು ಸಂಘಟಿತರಾಗಿ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದರು.

ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ ಮಾತನಾಡಿ, ನಾವು ಮಾಡುವ ಯಾವುದೇ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದರೆ ಅದೇ ದೊಡ್ಡ ಸಮಾಜಸೇವೆ. ಯುವಶಕ್ತಿ ತಂಡವು ಇದೇ ಆಶಯದೊಂದಿಗೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಅಳದಂಗಡಿ ಸೊಸೈಟಿ ಅಧ್ಯಕ್ಷ ರಾಕೇಶ್ ಹೆಗ್ಡೆ ಮಾತನಾಡಿ, ಊರಿನ ಅಭಿವೃದ್ಧಿ ಹಾಗೂ ಉತ್ತಮ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಸದಾ ದೊರೆಯುತ್ತದೆ ಎಂದರು.

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್. ಮಾತನಾಡಿ, ಯಾವುದೇ ಕಾರ್ಯಕ್ರಮದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳತೆ ಹಾಗೂ ಅರ್ಥಪೂರ್ಣತೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ವೇದಿಕೆಯಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಮಂಗಳೂರು ಪುರಸಭೆ ಸದಸ್ಯ ಜಯ ಪೂಜಾರಿ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಾಜಿ ಕಾರ್ಯದರ್ಶಿ ರೂಪನಾಥ ವೈ.ಎಲ್., ಬೆಳ್ತಂಗಡಿ ಯುವ ಉದ್ಯಮಿ ಚಿದಾನಂದ ಇಡ್ಯ, ಪ್ರಗತಿಪರ ಕೃಷಿಕ ತಿಮ್ಮಪ್ಪ ಪೂಜಾರಿ ಹಾಗೂ ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಹೆಚ್. ದೇಜಪ್ಪ ಪೂಜಾರಿ ಉಪಸ್ಥಿತರಿದ್ದರು.

ಸಭಿಕರ ಮನಸೂರೆಗೊಂಡ ಮುದ್ದುಕೃಷ್ಣ ಸ್ಪರ್ಧೆ:ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಮುದ್ದುಕೃಷ್ಣ ಹಾಗೂ ಬಾಲಕೃಷ್ಣ ಸ್ಪರ್ಧೆ ಸಭಿಕರ ಗಮನ ಸೆಳೆಯಿತು. 50ಕ್ಕೂ ಅಧಿಕ ಪುಟಾಣಿಗಳು ಶ್ರೀಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಮಿಂಚಿ, ತಮ್ಮ ಮುದ್ದು ನಟನೆ ಹಾಗೂ ವೇಷದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೊಸರು ಕುಡಿಕೆ ಉತ್ಸವದ ಸಂಭ್ರಮದಲ್ಲಿ ಯುವಕರು, ಮಕ್ಕಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು.

ಸಾಧಕರಿಗೆ ಸನ್ಮಾನ:ಈ ಸಂದರ್ಭದಲ್ಲಿ ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ದಾನಿ ಅಶ್ರಫ್ ಬಳಂಜ ಹಾಗೂ ಎಸ್‌ಎಸ್‌ಎಲ್‌ಸಿ ಸಾಧಕರಾದ ಪ್ರತೀಕ್ಷಾ ನಂದ್ರಟ್ಟ ಮತ್ತು ಹರ್ಷಿತಾ ಯೈಕುರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಯುವ ಸಾಹಿತಿ ಚಂದ್ರಹಾಸ ಬಳಂಜ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ವಿಶಾಲ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಯತೀಶ್ ವೈ.ಎಲ್. ವಂದಿಸಿದರು.

ಉತ್ಸವದ ಯಶಸ್ಸಿಗೆ ತಂಡದ ಸದಸ್ಯರಾದ ಯೋಗೀಶ್ ಆರ್., ಕರುಣಾಕರ ಹೆಗ್ಡೆ, ಸಂತೋಷ್ ಕುಮಾರ್, ವಿಜಯ ಪೂಜಾರಿ, ಪ್ರಶಾಂತ್ ಅಂಚನ್, ಜಗದೀಶ್ ಕೋಟ್ಯಾನ್, ಪ್ರಶಾಂತ್ ಕೋಟ್ಯಾನ್, ರಂಜಿತ್ ಪೂಜಾರಿ, ದಿನೇಶ್ ಪೂಜಾರಿ, ಜಯಪ್ರಸಾದ್ ಕೋಟ್ಯಾನ್, ಸುಧೀಶ್ ಪೂಜಾರಿ, ಸಂಪತ್ ಪಿ. ಕೋಟ್ಯಾನ್, ಪ್ರವೀಣ್ ಡಿ. ಕೋಟ್ಯಾನ್, ಶರತ್ ಅಂಚನ್, ರಕ್ಷಿತ್ ಪೂಜಾರಿ, ಸುಧೀರ್ ಸಾಲಿಯಾನ್, ಸತೀಶ್ ಕೋಟ್ಯಾನ್, ಪ್ರಣಾಮ್ ಶೆಟ್ಟಿ, ಮಹೇಶ್ ಕುಲಾಲ್, ಪ್ರಥಮ್ ಕುಮಾರ್, ಸತ್ಯಸಾಯಿ ಹಾಗೂ ಇತರರು ಸಹಕರಿಸಿದರು.

ಹೆಲ್ಮೆಟ್ ಇಲ್ಲದೆ ವಾಹನ ಮುಟ್ಟುವುದಿಲ್ಲ ಎಂಬ ಸಂಕಲ್ಪ ಮಾಡಿ: ಹರೀಶ್ ಪೂಂಜ: ನಮ್ಮ ಯುವಕರು ಅತ್ಯಂತ ಸುಂದರವಾದ ಭವಿಷ್ಯ ಹೊಂದಿರುವವರು. ಆದರೆ ರಸ್ತೆ ಸುರಕ್ಷತೆಯ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡಬಾರದು. ಹೆಲ್ಮೆಟ್‌ನ್ನು ಕೈಯಲ್ಲಿ ಇಟ್ಟುಕೊಂಡು ವಾಹನ ಚಲಾಯಿಸಬೇಡಿ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಾಹನಕ್ಕೆ ಇನ್ಶೂರೆನ್ಸ್ ಮಾಡಿಸಿಕೊಂಡೇ ಸಂಚರಿಸಬೇಕು.
ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಅದರ ನೋವು ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೆ ತಟ್ಟುತ್ತದೆ. ಮನೆಯಲ್ಲಿ ತಂದೆ, ತಾಯಿ, ಹೆಂಡತಿ, ಮಕ್ಕಳು ಹಾಗೂ ಒಡಹುಟ್ಟಿದವರು ನಮ್ಮನ್ನು ನಂಬಿಕೊಂಡಿರುತ್ತಾರೆ. ನಮ್ಮ ಸುರಕ್ಷತೆಯೇ ಅವರ ನೆಮ್ಮದಿ. ಆದ್ದರಿಂದ ಈ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಮುಟ್ಟುವುದಿಲ್ಲ, ಇನ್ಶೂರೆನ್ಸ್ ಮಾಡಿಸದೆ ವಾಹನ ಓಡಿಸುವುದಿಲ್ಲ ಎಂಬ ಸಂಕಲ್ಪವನ್ನು ಯುವಕರು ಮಾಡಬೇಕು. ಆಗ ಮಾತ್ರ ಈ ಕೃಷ್ಣ ಜನ್ಮಾಷ್ಟಮಿ ನಿಜವಾದ ಅರ್ಥದಲ್ಲಿ ಸಾರ್ಥಕವಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ನಾಲ್ಕೂರಿನ ಒಗ್ಗಟ್ಟು, ಶಿಸ್ತು ಸಮಾಜಕ್ಕೆ ಮಾದರಿ:ಸುಮಂತ್ ಕುಮಾರ್ ಜೈನ್

ನಾಲ್ಕೂರಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾನು ಭಾಗವಹಿಸುತ್ತೇನೆ. ಇಲ್ಲಿನ ಜನರ ಒಗ್ಗಟ್ಟು, ಶಿಸ್ತು ಹಾಗೂ ಎಲ್ಲರೂ ಒಂದಾಗಿ ಸೇರಿ ಕಾರ್ಯಕ್ರಮಗಳನ್ನು ಆಚರಿಸುವ ಪರಂಪರೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಯುವಶಕ್ತಿ ತಂಡವು ಉತ್ತಮ ಕಾರ್ಯಗಳನ್ನು ಮುಂದುವರಿಸಲಿ. ಮುಂದೆಯೂ ತಂಡದ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಯುವಶಕ್ತಿಯಿಂದ ಸಮಾಜಮುಖಿ ಕಾರ್ಯ: ಸಂತೋಷ್ ಪಿ. ಕೋಟ್ಯಾನ್

ಯುವಶಕ್ತಿ ತಂಡದಿಂದ ಉತ್ತಮ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ತಂಡದ ಯುವಕರು ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಶ್ರೀಕೃಷ್ಣನ ಸಂದೇಶದಂತೆ ತಮ್ಮ ಕೆಲಸವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಯುವಶಕ್ತಿಯ ಇಂತಹ ಕಾರ್ಯಗಳಿಗೆ ಸಮಾಜದ ಎಲ್ಲರ ಸಹಕಾರ ಇರಬೇಕು ಎಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಹೇಳಿದರು.

LEAVE A REPLY

Please enter your comment!
Please enter your name here