






ಶಿಶಿಲ: ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಆಶ್ರಯದಲ್ಲಿ 29ನೇ ವರ್ಷದ ಮೊಸರುಕುಡಿಕೆ ಉತ್ಸವವು ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಹಾಗೂ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ಶಿಶಿಲೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುನಿಲ್ ಗೋಖಲೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಕೆಸರಿನಲ್ಲಿ ಹಗ್ಗಜಗ್ಗಾಟ, ಅಟ್ಟಿ ಮಡಿಕೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಪುಟಾಣಿಗಳಿಗೆ ಶ್ರೀಕೃಷ್ಣವೇಷ ಸ್ಪರ್ಧೆ ಹಾಗೂ ಶಾಲಾ ಮಕ್ಕಳಿಗೆ ಕಾಡುಮರಗಳ ಎಲೆಗಳನ್ನು ಗುರುತಿಸುವ ವಿಶಿಷ್ಟ ಸ್ಪರ್ಧೆ ಆಯೋಜಿಸಲಾಗಿತ್ತು.ಮಧ್ಯಾಹ್ನ ನೃತ್ಯಭೂಷಿಣಿ ಕಲಾ ಶಾಲೆ ಶಿಶಿಲದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.


ಅಂಗನವಾಡಿ, ಹೇವಾಜೆ ಕಿರಿಯ ಪ್ರಾಥಮಿಕ ಶಾಲೆ ಹಾಗೂ ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ದುರ್ಗಾಪರಮೇಶ್ವರಿ ಯಕ್ಷ ಕಲಾ ಕೇಂದ್ರ ಶಿಶಿಲದ ಸದಸ್ಯರಿಂದ ಪರಂಪರೆಯ ಹನುಮನ ಒಡ್ಡೋಲಗ ಪ್ರದರ್ಶನ ಗಮನ ಸೆಳೆಯಿತು.
ಭಗವದ್ಗೀತೆಯ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತ: ರಾಜಲಕ್ಷ್ಮಿ ಕೋಡಿಬೆಟ್ಟುಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜಲಕ್ಷ್ಮಿ ಕೋಡಿಬೆಟ್ಟು ಮಾತನಾಡಿ, ಶ್ರೀಕೃಷ್ಣನು ದ್ವಾಪರಯುಗದಲ್ಲಿ ಉಪದೇಶಿಸಿದ ಭಗವದ್ಗೀತೆಯಲ್ಲಿನ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಜೀವನದ ವಿವಿಧ ಹಂತಗಳಲ್ಲಿ ಹೇಗೆ ಬದುಕಬೇಕು ಎಂಬುದನ್ನು ಭಗವದ್ಗೀತೆ ತಿಳಿಸಿಕೊಡುತ್ತದೆ. ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಒಗ್ಗಟ್ಟಿನಿಂದ ಇಂತಹ ಯಶಸ್ವಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.11 ವಿದ್ಯಾರ್ಥಿಗಳಿಗೆ ಗೌರವ, ಇಬ್ಬರು ಸಾಧಕರಿಗೆ ಸನ್ಮಾನಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ 11 ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಶಿಶಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುಜಾತ ಹಾಗೂ ಜನಪದ ಕಲಾವಿದೆ ಮತ್ತು ನಾಟಿ ಚಿಕಿತ್ಸೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚೆನ್ನಮ್ಮ ಅವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಶಿಶಿಲೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯೆ ವಿಮಲಾ ಎಳ್ಳುಮಜಲು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮುಡಂಗೆ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಪವನ್ ಗೌರೀಶ ಹಾಗೂ ರಂಜಿತ್ ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರಖ್ಯಾತ್ ಅಭಿನಂದನಾ ಪತ್ರ ವಾಚಿಸಿದರು. ನಿತಿನ್ ಬೈರಕಟ್ಟ ಸ್ವಾಗತಿಸಿ, ಸುಂದರ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಮೇಶ್ ಕೊಳಂಬೆ ಧನ್ಯವಾದ ಸಮರ್ಪಿಸಿದರು. ಸತೀಶ್ ಬೆದ್ರ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸರ್ವಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.









