






ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಆಶ್ರಯದಲ್ಲಿ ಸೆ.10 ಮತ್ತು 11 ರಂದು ಎರಡು ದಿನಗಳ ರಾಷ್ಟ್ರಮಟ್ಟದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ‘ಎಸ್ಡಿಎಂ ಆರೋಹಂ-2026’ ನಡೆಯಲಿದೆ ಎಂದು ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ತಿಳಿಸಿದರು.
ಅವರು ಸೆ.7 ರಂದು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಂಗಳೂರಿನ ಕ್ಷೇಮವನದ ಮುಖ್ಯ ಆಡಳಿತಾಧಿಕಾರಿ ಶ್ರದ್ಧಾ ಅಮಿತ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಪಾಲ್ಗೊಳ್ಳಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ವಹಿಸಲಿದ್ದಾರೆ.


ಸೆ.11 ರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಡಾ. ಸತೀಶ್ಚಂದ್ರ ಎಸ್. ಹಾಗೂ ಪ್ರೊ. ವಿಶ್ವನಾಥ ಪಿ. ಉಪಸ್ಥಿತರಿರಲಿದ್ದಾರೆ.
ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಆರೋಹಂ-2026 ರಲ್ಲಿ ಪಿಯು ಹಾಗೂ ಪದವಿ ವಿಭಾಗಗಳಿಗೆ ಕಲೆ, ವಿಜ್ಞಾನ, ವಾಣಿಜ್ಯ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಒಟ್ಟು 23 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಒಬ್ಬ ವಿದ್ಯಾರ್ಥಿ ಕೇವಲ ಒಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ವಿಜೇತರಿಗೆ ಒಟ್ಟು ರೂ.1,50,000 ನಗದು ಬಹುಮಾನ ನೀಡಲಾಗುವುದು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಸೆಲೆಬ್ರಿಟಿ ನೈಟ್ ಹಾಗೂ ಮ್ಯೂಸಿಕ್ ಕನ್ಸರ್ಟ್. ಸೆ.10 ರ ಸಂಜೆ 6 ಗಂಟೆಗೆ ನಡೆಯಲಿರುವ ಸೆಲೆಬ್ರಿಟಿ ನೈಟ್ನಲ್ಲಿ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜಕ ರವಿ ಬಸ್ರೂರು ಕೇಂದ್ರಬಿಂದುವಾಗಿದ್ದು, 7 ಗಂಟೆಯಿಂದ ಟೀಂ ಕಂಬೋಜಿ ಮ್ಯೂಸಿಕ್ ಕನ್ಸರ್ಟ್ ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ನಂದಕುಮಾರಿ, ಆರೋಹಂ ಸಂಘಟಕ ಗಣೇಶ್ ನಾಯಕ್, ಡಾ. ಶ್ರೀಧರ ಭಟ್ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುನಿಲ್ ಹೆಗ್ಡೆ ಉಪಸ್ಥಿತರಿದ್ದರು.









