






ಬೆಳ್ತಂಗಡಿ: ಒಬ್ಬ ವ್ಯಕ್ತಿಯ ದೂರದೃಷ್ಟಿ, ಒಂದು ಸಂಸ್ಥೆಯ ಪ್ರಾಮಾಣಿಕ ಸೇವೆ ಹೇಗೆ ಸಾವಿರಾರು ಕುಟುಂಬಗಳ ಬದುಕಿಗೆ ಬೆಳಕಾಗಬಲ್ಲದು ಎಂಬುದಕ್ಕೆ ಸಾಕ್ಷಿ ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 28 ಶಾಖೆಗಳೊಂದಿಗೆ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಸಂಸ್ಥೆ 19ನೇ ವರ್ಷದಲ್ಲಿ ರೂ.1979.12 ಕೋಟಿ ವಹಿವಾಟು ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಬೆಳ್ತಂಗಡಿಯ ಪ್ರತಿಷ್ಠಿತ ಸಿವಿಸಿ ಹಾಲ್ನಲ್ಲಿ ಸೆ.05ರಂದು ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು ಸಂಘದ 19 ವರ್ಷಗಳ ಪಯಣವನ್ನು ಹೆಮ್ಮೆಯಿಂದ ವಿವರಿಸಿದರು.

ಗ್ರಾಹಕ ಸ್ನೇಹಿ ಸೇವೆಯೇ ಮೂಲಮಂತ್ರ: “ಗ್ರಾಹಕ ಸ್ನೇಹಿ ಸೇವೆ, ಪಾರದರ್ಶಕ ಆಡಳಿತ ಹಾಗೂ ಸದಸ್ಯರ ವಿಶ್ವಾಸವೇ ನಮ್ಮ ಯಶಸ್ಸಿನ ಮೂಲಮಂತ್ರ. ಸದಸ್ಯರು ಹಾಗೂ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ವಿವಿಧ ಸೇವೆಗಳನ್ನು ಒದಗಿಸುತ್ತಿರುವುದರಿಂದ ಸಂಘ ನಿರಂತರ ಪ್ರಗತಿ ಸಾಧಿಸುತ್ತಿದೆ. ಆರ್ಥಿಕ ವರ್ಷದಲ್ಲಿ ರೂ.1,979 ಕೋಟಿ ವ್ಯವಹಾರ ನಡೆಸಿ, ರೂ.5.85 ಕೋಟಿ (ರೂ.585.10 ಲಕ್ಷ) ನಿವ್ವಳ ಲಾಭ ಗಳಿಸಿರುವುದು ಸಂಘದ ಮೇಲಿನ ವಿಶ್ವಾಸಕ್ಕೆ ಸಾಕ್ಷಿ. ಬೆಳ್ತಂಗಡಿ ಭಾಗದಲ್ಲಿ ಅತಿ ಹೆಚ್ಚು ವ್ಯವಹಾರದೊಂದಿಗೆ ಅತಿ ಹೆಚ್ಚು ಲಾಭ ಗಳಿಸಿದ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಂಘ ಪಾತ್ರವಾಗಿದೆ. ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ” ಎಂದು ಅವರು ಹೇಳಿದರು.

ದಿ. ವಸಂತ ಬಂಗೇರರ ಕನಸಿನ ಕೂಸು ಇಂದು ಹೆಮ್ಮರವಾಗಿ ಬೆಳೆದಿದೆ: ಸಂಘದ “ನಿಮ್ಮ ಸ್ಫೂರ್ತಿ ನಮ್ಮ ಉತ್ಕೃಷ್ಟ ಸೇವೆ” ಎಂಬ ಧ್ಯೇಯವಾಕ್ಯವೇ ಯಶಸ್ಸಿನ ಗುಟ್ಟು. ಸಂಸ್ಥೆಯ ಮುಖ್ಯ ಪ್ರವರ್ತಕ, ಮಾಜಿ ಶಾಸಕ ದಿ. ಕೆ. ವಸಂತ ಬಂಗೇರ ಅವರ ಭದ್ರ ಅಡಿಪಾಯದಲ್ಲಿ ಆರಂಭವಾದ ಈ ಸಂಸ್ಥೆ, ಸ್ಥಾಪಕ ಅಧ್ಯಕ್ಷ ದಿ.ಕೆ.ಜಿ. ಬಂಗೇರ ಹಾಗೂ ಮಾಜಿ ಅಧ್ಯಕ್ಷ ದಿ. ಪದ್ಮನಾಭ ಮಾಣಿಂಜ ಅವರ ಮಾರ್ಗದರ್ಶನದಲ್ಲಿ ಇಂದು ಬೃಹತ್ ವೃಕ್ಷವಾಗಿ ಬೆಳೆದು ನಿಂತಿದೆ.

28 ಶಾಖೆಗಳ ಬೃಹತ್ ಜಾಲ: ಬೆಳ್ತಂಗಡಿ, ಶಿರ್ತಾಡಿ, ಕಲ್ಲಡ್ಕ, ಕಕ್ಕಿಂಜೆ, ಬೆಳುವಾಯಿ, ನೆಲ್ಲಾಡಿ, ಮುಡಿಪು, ವೇಣೂರು, ಉಪ್ಪಿನಂಗಡಿ, ಕಡಬ, ಬ್ರಹ್ಮಾವರ, ಹಳೆಯಂಗಡಿ, ಕುಪ್ಪೆಪದವು, ಬಜಗೋಳಿ, ಅರಿಸಿನಮಕ್ಕಿ, ಸಿದ್ಧಕಟ್ಟೆ, ಅಜೆಕಾರು, ಹಿರಿಯಡ್ಕ, ಪಡೀಲ್, ಕಬಕ, ಹೊಸೂರು, ಪುರುಷರಕಟ್ಟೆ, ಕುಂಬ್ರ, ವಾಮದಪದವು, ಮಾವಿನಕಟ್ಟೆ, ಮೂಡಬಿದಿರೆ, ಅಳಂಕಾರು, ಗುರುಪುರ-ಕೈಕಂಬ. ಶಾಖೆಗಳನ್ನು ಹೊಂದಿದ್ದು ಠೇವಣಿ ರೂ.326.34 ಕೋಟಿ, ಸಾಲ ರೂ.269.42 ಕೋಟಿ, ದುಡಿಯುವ ಬಂಡವಾಳ ರೂ.351.24 ಕೋಟಿ ಹೊಂದಿದೆ ಎಂದರು.
ಮಾನವೀಯತೆಯ ಮಾದರಿ – ಮರಣ ನಿಧಿ: ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ಕುಟುಂಬ ಸಾಲದ ಹೊರೆಯಲ್ಲಿ ಸಿಲುಕಬಾರದು ಎಂಬ ದೃಷ್ಟಿಯಿಂದ ಶ್ರೀ ಗುರು ಸಾಲಗಾರರ ಮರಣ ನಿಧಿ ಯೋಜನೆ ಜಾರಿಯಲ್ಲಿದೆ. ಗರಿಷ್ಠ ರೂ.10 ಲಕ್ಷದವರೆಗೆ ಪರಿಹಾರ. ಕಳೆದ ಒಂದು ವರ್ಷದಲ್ಲಿ 119 ಮೃತ ಸಾಲಗಾರರಿಗೆ ರೂ.90,28,747 ನೀಡಿ ಕುಟುಂಬವನ್ನು ಸಾಲದಿಂದ ಮುಕ್ತಗೊಳಿಸಲಾಗಿದೆ.


ತಂತ್ರಜ್ಞಾನದಲ್ಲೂ ಮುಂದು: ಎಲ್ಲ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್, ಸ್ವಂತ IFS Code, ಸಿಸಿಟಿವಿ, ಭದ್ರತಾ ಕೊಠಡಿ. ಸಾಮಾಜಿಕ ಸೇವೆಗೆ ರೂ.17.95 ಲಕ್ಷ ವಿನಿಯೋಗ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ 10 ಬಾರಿ ಸಾಧನಾ ಪ್ರಶಸ್ತಿ ಅಭಿಸಿದೆ.
108 ಕುಟುಂಬಗಳ ಜವಾಬ್ದಾರಿ ಹೊತ್ತ ಸಂಸ್ಥೆ: ಹಿರಿಯರ ಆಶೀರ್ವಾದದಿಂದ ಬೆಳಗಿದೆ, ಒಳ್ಳೆಯ ಕೆಲಸವನ್ನು ಮಾಡಿಕೊಂಡು ಜನರ ಸೇವೆಯನ್ನು ಮಾಡಿಕೊಂಡು ಬಂದಿದ್ದೇವೆ. 108 ಕುಟುಂಬಗಳ ಸದಸ್ಯರನ್ನು ಸಂಸ್ಥೆ ನೋಡಿಕೊಂಡು ಬರುತ್ತಿದೆ. ಕೇಂದ್ರ ಕಚೇರಿಗೆ ಹೊರೆಯಾಗಬಾರದು ಎಂಬ ದೃಷ್ಟಿಯಿಂದ 28 ಶಾಖೆಗಳಲ್ಲಿ ಹೊಸ ಜಾಗವನ್ನು ಖರೀದಿಸಿ ಅಲ್ಲಿಯೇ ಕಟ್ಟಡವನ್ನು ನಿರ್ಮಿಸಿ ಅದರಿಂದ ಲಾಭವನ್ನು ಗಳಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ಸಿಬ್ಬಂದಿಗಳನ್ನು ಮನೆಯವರ ರೀತಿಯಲ್ಲಿ ನೋಡಿಕೊಂಡಿದ್ದೇವೆ, ಸಿಬ್ಬಂದಿಗಳ ಸಂಬಳವನ್ನು 20% ಏರಿಸಿದ್ದೇವೆ, ಸಿಬ್ಬಂದಿಗಳಿಗೆ ಬೇಕಾದ ಭದ್ರತೆಯನ್ನು ಒದಗಿಸಿಕೊಟ್ಟಿದ್ದೇವೆ ಎಂದರು.

ಹೊಸ ಯೋಜನೆಗಳು – ಜಾತಿ ಧರ್ಮವನ್ನು ನೋಡದೆ ಅರ್ಹ ಫಲಾನುಭವಿಗಳಿಗೆ ವರ್ಷಕ್ಕೊಂದು ಮನೆ ನಿರ್ಮಾಣ ಮಾಡಿಕೊಡಲಾಗುವುದು ಹಾಗೂ ಸೂಕ್ತ ಕಂಡಲ್ಲಿ ಬಸ್ ತಂಗುದಾಣ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಇಟ್ಟುಕೊಂಡಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದಾಗ, ಮನೆ ನಿರ್ಮಾಣವನ್ನು ಸಂಘದ ಸದಸ್ಯರಿಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದು ಸದಸ್ಯರು ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮೊದಲ ಆದ್ಯತೆಯನ್ನು ಸಂಘದ ಸದಸ್ಯರಿಗೆ ನೀಡುತ್ತೇವೆ, ಆದರೆ ಮನೆ ನಿರ್ಮಾಣಕ್ಕೆ ಬೇಕಾದ ಜಾಗ ಮತ್ತು ಮೂಲ ದಾಖಲೆಗಳು ಅವರಲ್ಲಿ ಇರಬೇಕು ಎಂದರು.
ಉದ್ಯೋಗದಲ್ಲಿ ಇರುವಾಗಲೇ ಮರಣ ಹೊಂದಿದ ಸಿಬ್ಬಂದಿಗಳಿಗೆ ಮರಣ ನಿಧಿಯನ್ನು ನೀಡಬೇಕು ಎಂದು ಸದಸ್ಯರು ತಿಳಿಸಿದರು.
ಅನುತ್ಪಾದಕ ಸಾಲಗಳ ಬಗ್ಗೆ ಪ್ರಸ್ತಾಪಿಸಿದಾಗ ನಾರಾಯಣ ಪೂಜಾರಿ ಮಾತನಾಡಿ, “ದೊಡ್ಡ ದೊಡ್ಡ ಸಮಸ್ಯೆಗಳು ಬಂದರೆ ಮಾತ್ರ ಈ ನಿಧಿಯಿಂದ ಹೊಂದಾಣಿಕೆ ಮಾಡಿ, ಇಲ್ಲದಿದ್ದರೆ ಯಾರು ಸಾಲವನ್ನು ಕಟ್ಟುವುದಿಲ್ಲ. ಇದರಿಂದ ಸಾಲವನ್ನು ಮನ್ನಾ ಮಾಡುತ್ತಾ ಹೋದರೆ ಬ್ಯಾಂಕ್ ಮುಚ್ಚುವ ಪರಿಸ್ಥಿತಿಗೆ ಬರಬಹುದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದರು.

IAS ಜಿ. ಜಗದೀಶ್ ಮಾತು: ಪ್ರತಿಷ್ಠಿತ ಶ್ರೀ ಗುರು ಮಾಣಿಕ್ಯ ಪ್ರಶಸ್ತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್, ದಕ್ಷ ಆಡಳಿತಗಾರ, ಮಾಜಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಐಎಎಸ್ ಅವರಿಗೆ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿ, “ನಿಮ್ಮ ಅಭಿಮಾನ ಪ್ರೀತಿ ನೋಡಿದಾಗ ಮಾತನಾಡಲು ಸಾಧ್ಯವಾಗುತ್ತಿಲ್ಲ. ಗುರುವಿನ ಹೆಸರಿನಲ್ಲಿ ಪ್ರಶಸ್ತಿಯನ್ನು ಪಡೆದಿದ್ದೇನೆ ತುಂಬಾ ಸಂತೋಷವಾಗುತ್ತಿದೆ. ಕಷ್ಟದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹುದ್ದೆಯನ್ನು ನಿಭಾಯಿಸುವುದು ಕಷ್ಟ. ಕೋವಿಡ್ ಸಮಯದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಎಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಕೊರೊನಾ ಸಂದರ್ಭದಲ್ಲಿ ಅತಿ ಕಡಿಮೆ ಖರ್ಚು ಮಾಡಿರುವ ಜಿಲ್ಲೆ ಎಂಬ ಹೆಮ್ಮೆ ನನಗಿದೆ. ಈ ಸಂಘವು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ” ಎಂದರು.
ನಾಲ್ವರು ಸಾಧಕರಿಗೆ ಗೌರವ: ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಹಾಸ್ಯ ಕಲಾವಿದ ಸುಂದರ ಬಂಗಾಡಿ, ಸಮಾಜ ಸೇವೆ ಕ್ಷೇತ್ರದಲ್ಲಿ ಸ್ನೇಹದೀಪ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕಿ ತಬಸ್ಸುಮ್, ಶಿಕ್ಷಣ ಕ್ಷೇತ್ರದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯ ಪ್ರಥಮ ದಿಶಾ ಪೂಜಾರಿ, ಕ್ರೀಡೆ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ನಿರ್ದೇಶಕರಾದ ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ. ದಿವಾಕರ್, ಚಂದ್ರಶೇಖರ್, ಧರ್ಣಪ್ಪ ಪೂಜಾರಿ, ಗಂಗಾಧರ ಮಿತ್ತಮಾರ್, ಧರಣೇಂದ್ರ ಕುಮಾರ್ ಪಿ., ಆನಂದ ಪೂಜಾರಿ ಕೆ., ಡಾ. ರಾಜಾರಾಮ ಕೆ.ಬಿ., ಜಯವಿಕ್ರಮ್ ಪಿ., ಚಿದಾನಂದ ಪೂಜಾರಿ, ರಕ್ಷಿತ್ ಶಿವರಾಮ್, ಸೂರಾಜ್ ಕುಮಾರ್, ವಿಶೇಷಾಧಿಕಾರಿ ಎಂ. ಮೋನಪ್ಪ ಪೂಜಾರಿ ಹಾಗೂ ಸಿಇಒ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಇಒ ಅಶ್ವತ್ ಕುಮಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.









