ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ ಆರೋಪ-ಐವರ ವಿರುದ್ಧ ಕೇಸ್ ದಾಖಲು-ಅಪಹರಣ ನಡೆಸಿದ ಆರೋಪದಡಿ ತಾಯಿ ದೂರುಶೇಕ್ ಮುಕ್ತಾರ್ ವಿರುದ್ಧ ಕೇಸು: ಕಾರ್ಕಳ ಠಾಣೆಗೆ ವರ್ಗಾವಣೆ

0

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯ ಕಾರನ್ನು ತಡೆದು ಆತನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಉಪ್ಪಿನಂಗಡಿ ಠಾಣಾ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಾರ್ಕಳ ತಾಲೂಕಿನ ಈದು ನಿವಾಸಿ ಶೇಕ್ ಮುಕ್ತಾರ್ (೫೦) ಕೆಲಸದ ನಿಮಿತ್ತ ಪರಿಚಯಸ್ಥರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳನ್ನು ಕಾರಿನಲ್ಲಿ ಕರೆದೊಯ್ದು ಹಾಸನದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ಬಳಿ ಕೆಲವರು ಗುಂಪಾಗಿ ಸೇರಿ ಕಾರನ್ನು ತಡೆದು ನಿಲ್ಲಿಸಿ ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಕುರಿತು ವಿಚಾರಿಸಿದ್ದಾರೆ.
ಬಳಿಕ ಶೈಕ್ ಮುಕ್ತಾರ್ ಅವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿರುವ ಶೈಕ್ ಮುಕ್ತಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೧೦೬/೨೦೨೬ರಂತೆ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು ಕೊಕ್ಕಡದ ಧನುಷ್(೨೩ವ), ಚಾರ್ಮಾಡಿಯ ದಿನೇಶ್ (೪೫ವ), ಪುದುವೆಟ್ಟಿನ ಪೂರ್ಣಾಕ್ಷ ಬಿ. (೪೦ವ), ಕೊಕ್ಕಡದ ಸೂರಜ್ (೨೫ವ) ಮತ್ತು ಕೊಕ್ಕಡದ ರಂಜಿತ್ ಭಂಡಾರಿ (೨೯ವ) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಪ್ರಾಪ್ತ ಬಾಲಕಿಯ ಅಪಹರಣ-ತಾಯಿ ದೂರು: ಅನ್ಯ ಕೋಮಿನ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕರೆದೊಯ್ಯುತ್ತಿದ್ದ ವ್ಯಕ್ತಿಯ ಕಾರನ್ನು ಗುಂಪೊಂದು ತಡೆದು ನಿಲ್ಲಿಸಿ ಹಲ್ಲೆ ನಡೆಸಿದೆ ಎಂದು ದೂರಲಾದ ಈ ಪ್ರಕರಣದಲ್ಲಿ ಹಲ್ಲೆಗೀಡಾದ ವ್ಯಕ್ತಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಹೆತ್ತವರ ಗಮನಕ್ಕೆ ಬಾರದೇ ಅಪಹರಿಸಿಕೊಂಡು ಹೋಗುತ್ತಿದ್ದ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ವಾಸವಾಗಿರುವ ನೊಂದ ಬಾಲಕಿಯ ಹೆತ್ತವರು ಉದ್ಯೋಗ ಸಂಬಂಧ ಹೊರಗೆ ಹೋಗಿದ್ದು ಮನೆಯಲ್ಲಿ ಇಲ್ಲದ ವೇಳೆ ಆ.೧೧ರಂದು ರಾತ್ರಿ ೯ ಗಂಟೆ ಸುಮಾರಿಗೆ ಬಾಲಕಿಯ ಮನೆಗೆ ಬಂದಿದ್ದ ಈದು ಗ್ರಾಮದ ಹೊಸ್ಮಾರು ಸುಜಲ್ ಆರ್ಕೆಡ್ ಬಳಿಯ ಸಾಬು ಸಾಹೇಬ್ ಎಂಬವರ ಮಗ ಶೇಕ್ ಮುಕ್ತಾರ್ (೫೨) ಎಂಬಾತ ಮನೆಯಲ್ಲಿದ್ದ ೧೩ರ ಹರೆಯದ ಬಾಲಕಿಯನ್ನು ಬಲವಂತದಿಂದ ಕಾರಿನಲ್ಲಿ ಕರೆದೊಯ್ದಿದ್ದಾನೆ.

ಈ ಬಗ್ಗೆ ಮಾಹಿತಿ ದೊರೆತ ಹೆತ್ತವರು ಕಳವಳಗೊಂಡು ಮುಗಳ ರಕ್ಷಣೆಗಾಗಿ ಅವರಿವರಲ್ಲಿ ಸಹಕಾರ ಯಾಚಿಸಿದ್ದಾರೆ. ಅಪಹರಣದ ಮಾಹಿತಿ ಬಿತ್ತರಿಸಲ್ಪಟ್ಟ ಕಾರಣ ರಾತ್ರಿ ಸುಮಾರು ೧೧ ಗಂಟೆಗೆ ಕಾಪಿನಬಾಗಿಲು ಪ್ರದೇಶದಲ್ಲಿ ತಪಾಸಣೆ ನಿರತ ಯುವಕರ ತಂಡಕ್ಕೆ ಕಾರಿನಲ್ಲಿ ಬಾಲಕಿಯನ್ನು ಕರೆದೊಯ್ಯುತ್ತಿದ್ದ ಶೇಕ್ ಮುಕ್ತಾರ್ ಸಿಕ್ಕಿ ಬಿದ್ದಿದ್ದಾನೆ. ಬಳಿಕ ಶೇಕ್ ಮುಕ್ತಾರ್‌ನನ್ನು ಬಾಲಕಿಯ ಸಹಿತ ಪೊಲೀಸರಿಗೊಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ತನ್ನ ಅಪಹರಣ ಕೃತ್ಯವನ್ನು ಮರೆಮಾಚಿ ತಾನು ಬಾಲಕಿಯನ್ನು ಕೆಲಸಕ್ಕೆಂದು ಕರೆದೊಯ್ಯುತ್ತಿದ್ದಾಗ ಗುಂಪೊಂದು ತನ್ನ ಕಾರನ್ನು ಅಡ್ಡಗಟ್ಟಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿರುವುದಕ್ಕೆ ಆಕ್ಷೇಪಿಸಿ ತನಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿದೆ ಎಂದು ಶೇಕ್ ಮುಕ್ತಾರ್ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದರು.
ಘಟನೆ ಬಳಿಕ ಪೊಲೀಸರು ಬಾಲಕಿಯ ಹೆತ್ತವರನ್ನು ಸಂಪರ್ಕಿಸಿದಾಗ ಅಪಹರಣ ಪ್ರಕರಣ ಬಯಲಾಗಿದೆ ಎಂದು ಹೇಳಲಾಗಿದೆ. ಬಳಿಕ ಬಾಲಕಿಯ ತಾಯಿ ನೀಡಿದ ದೂರಿನಂತೆ ಭಾರತೀಯ ನ್ಯಾಯ ಸಂಹಿತೆಯ ೧೩೭/೨ರ ಅನ್ವಯ ಕಾನೂನುಬದ್ಧ ರಕ್ಷಕನ ವಶದಿಂದ ಮಗುವನ್ನು ಅಪಹರಿಸಿದ ಅಪರಾಧವೆಸಗಿದ ಆರೋಪದಡಿ ಶೇಕ್ ಮುಕ್ತಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಂತರ ಪ್ರಕರಣವನ್ನು ಕಾರ್ಕಳ ಠಾಣೆಗೆ ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here