






ಬೆಳ್ತಂಗಡಿ: ಮೊಗ್ರು ಗ್ರಾಮದ ಪಿಲಿಕುಡೇಲು ಎಂಬಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದವರ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಒಡ್ಡಿ ಸ್ಕೂಟರ್, ಟಿ.ವಿ., ವಿದ್ಯುತ್ ಸ್ವಿಚ್ಛ್ ಬೋರ್ಡ್, ಸಿಮೆಂಟ್ ಶೀಟ್ಗೆ ಹಾನಿ ಮಾಡಿದ್ದಲ್ಲದೆ ಮನೆಯಲ್ಲಿದ್ದ ಮಹಿಳೆ ಮತ್ತು ಆಕೆಯ ಮಗಳನ್ನು ಅತ್ಯಾಚಾರ ಮಾಡಲು ಯತ್ನಿಸಿ ಜಾತಿ ನಿಂದನೆ ಮಾಡಿ ಬೆದರಿಸಿದ ಆರೋಪದಡಿ ಉಪ್ಪಿನಂಗಡಿ ಠಾಣಾ ಪೊಲೀಸರಿಂದ ಬಂಧಿತನಾಗಿದ್ದ ಹಿರೇಬಂಡಾಡಿ ಗ್ರಾಮದ ಹರಿನಗರದ ಚೂವಿಶಾಂತ ಎಂಬಾತನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಪಿಲಿಕುಡೇಲು ಎಂಬಲ್ಲಿಯ ೪೯ರ ಹರೆಯದ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಚೂವಿಶಾಂತ್ ವಿರುದ್ಧ ದೂರು ನೀಡಿದ್ದರು. ದೂರುದಾರ ಮಹಿಳೆಯ ಕೊನೆಯ ಮಗಳ ಸಹಪಾಠಿಯಾಗಿರುವ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿಯ ಹರಿನಗರದ ಚೂವಿಶಾಂತ ಎಂಬಾತ ಪಿಲಿಕುಡೇಲು ಎಂಬಲ್ಲಿರುವ ಮಹಿಳೆಯ ಮನೆಗೆ ಏಕಾಏಕಿಯಾಗಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಹಿಳೆಯ ಮಗಳನ್ನು ಉzಶಿಸಿ ಹೊರಗೆ ಬಾ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿzನೆ. ನನ್ನನ್ನು ಮದುವೆ ಆಗಲು ನಿರಾಕರಿಸುತ್ತೀಯಾ. ನಿನಗೆಷ್ಟು ಅಹಂಕಾರ ಇರಬೇಕು. ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ. ಮನೆಯ ಹೊರಗೆ ನಿಲ್ಲಿಸಿದ್ದ ಸ್ಕೂಟರ್ಗೆ ಕಾಲಿನಿಂದ ಒದ್ದು ಮಗುಚಿ ಹಾಕಿ ದೊಣ್ಣೆಯಿಂದ ಹೊಡೆದು ಪುಡಿಪುಡಿ ಮಾಡಿದ್ದಾನೆ. ಅಲ್ಲದೆ ಮನೆಯ ಬಾಗಿಲನ್ನು ಒದ್ದು ಒಡೆದು ಮನೆಯೊಳಗೆ ಬಲತ್ಕಾರವಾಗಿ ನುಗ್ಗಿ ಟಿ.ವಿ. ಹಾಗೂ ವಿದ್ಯುತ್ ಸ್ವಿಚ್ ಬೋರ್ಡ್ ಮತ್ತು ಮನೆಯ ಹಿಂಬದಿಯ ಹಾಗೂ ಮುಂದಿನ ಸಿಮೆಂಟ್ ಶೀಟ್ಗಳನ್ನು ಪುಡಿ ಮಾಡಿದ್ದಾನೆ.


ತಡೆಯಲು ಹೋದ ಮಹಿಳೆಯನ್ನು ತಬ್ಬಿ ಹಿಡಿದುಕೊಂಡು ಸೀರೆಯ ಸೆರಗನ್ನು ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ತಡೆಯಲು ಬಂದ ಮಹಿಳೆಯ ಮಗಳನ್ನು ತಬ್ಬಿ ಎತ್ತಿಕೊಂಡು ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಚೂವಿಶಾಂತ ಆತನ ತಂದೆಗೆ ಕರೆ ಮಾಡಿದ್ದಾನೆ. ನಂತರ ಚೂವಿಶಾಂತನ ತಂದೆ, ತಾಯಿ ಹಾಗೂ ತಾಯಿಯ ತಂಗಿ ಬಂದು ಚೂವಿಶಾಂತನನ್ನು ಕೋಣೆಯಿಂದ ಬಿಡಿ ಎಂದು ಹೇಳಿದ್ದಾರೆ. ಮನೆಯವರು ಪೋಲಿಸರು ಬರಲಿ ಎಂದು ಹೇಳಿದಾಗ ಚೂವಿಶಾಂತನ ತಂದೆ, ತಾಯಿ ಹಾಗೂ ತಾಯಿಯ ತಂಗಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ದೂರುದಾರ ಮಹಿಳೆಯ ಗಂಡ ಬರುವುದನ್ನು ನೋಡಿ ಮಹಿಳೆಯ ಮಗಳ ಜೊತೆ ಚೂವಿಶಂತನು ನೀನು ನನ್ನ ಜೊತೆ ಬರಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ನಂತರ ಮನೆಯಿಂದ ಸ್ವಲ್ಪ ದೂರ ಹೋಗಿ ಸಾರ್ವಜನಿಕ ದಾರಿಯಲ್ಲಿ ನಿಂತು ಜಾತಿ ನಿಂದನೆ ಮಾಡಿದ್ದಾನೆ.
ಅಲ್ಲದೆ ನಿನ್ನ ಮಗಳ ತಲೆ ಕತ್ತರಿಸಿ ನಡುರಸ್ತೆಯಲ್ಲಿ ಹಾಕುತ್ತೇನೆ. ಮಗಳನ್ನು ಕಳುಹಿಸು. ಇಲ್ಲದಿದ್ದಲ್ಲಿ ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದಾನೆ. ಚೂವಿಶಾಂತನ ಈ ಕೃತ್ಯದಿಂದ ರೂ. ೯೦ ಸಾವಿರ ರೂ ಮೌಲ್ಯದ ಸ್ಕೂಟರ್, ೨೫,೦೦೦ ರೂ ಮೌಲ್ಯದ ಟಿ.ವಿ., ೧೦ ಸಾವಿರ ರೂ ಮೌಲ್ಯದ ವಿದ್ಯುತ್ ಸ್ವಿಚ್ ಬೋರ್ಡ್, ಮತ್ತು ೧೦ ಸಾವಿರ ರೂ ಮೌಲ್ಯದ ಸಿಮೆಂಟ್ ಶೀಟ್ ಹಾನಿಯಾಗಿದೆ.ಹಾನಿಯಾದ ವಸ್ತುಗಳ ಮೌಲ್ಯ ಸುಮಾರು ೧,೩೫,೦೦೦ ರೂಪಾಯಿ ಆಗಬಹುದು ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ೮೭/೨೦೨೬ರಂತೆ ಬಿಎನ್ಎಸ್ ೩೯೪(೪), ೩೫೨, ೩೫೧(೩), ೨೪, (೫) ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ನಂತರ ಎಸ್.ಐ. ಕೌಶಿಕ್ ಬಿ.ಸಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಪ್ರಮುಖ ಆರೋಪಿ ಚೂವಿಶಾಂತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಉಳಿದ ಆರೋಪಿಗಳಾದ ವಿಶ್ವನಾಥ, ಕುಶಲತಾ ಮತ್ತು ಪಾರ್ವತಿ ಅವರಿಗೆ ಮಂಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಬಂಧಿತ ಚೂವಿಶಾಂತನಿಗೆ ಮಂಗಳೂರು ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆನಂತರ ಚೂವಿಶಾಂತ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಇದೀಗ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ರಾಜಾರಾಂ ಸೂರಂಬೈಲು, ಪ್ರಸಾದ್ ಕುಮಾರ್ ರೈ ಉಪ್ಪಿನಂಗಡಿ ಮತ್ತು ಕೃಷ್ಣದೇವ ಮಂಗಳೂರು ವಾದಿಸಿದ್ದರು.









