ಮುಗೇರಡ್ಕದಲ್ಲಿ ಸೇತುವೆ ನಿರ್ಮಾಣ: ಇಂಜಿನಿಯರ್‌ಗಳು ಭೇಟಿ-ಪರಿಶೀಲನೆ

0

ಬೆಳ್ತಂಗಡಿ: ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವೇಳೆ ಸಾರ್ವಜನಿಕರ ಸುರಕ್ಷತೆಗೆ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ವಿಚಾರಕ್ಕೆ ಸಂಬಂಧಿಸಿ ಇಂಜಿನಿಯರ್‌ಗಳು ಆ.೧೪ರಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜಾರವರ ಸೂಚನೆಯ ಮೇರೆಗೆ ಸ್ಟ್ರಕ್ಚರಲ್ ಇಂಜಿನಿಯರ್ ಪ್ರಸನ್ನ ದರ್ಬೆ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ಘಟಕದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿಯವರ ಜೊತೆ ಆ.೧೩ರಂದು ಚರ್ಚೆ ನಡೆಸಿದ್ದರು.

ಮುಗೇರಡ್ಕ ಕ್ಷೇತ್ರದ ಭಕ್ತರಿಗೆ ಅನುಕೂಲವಾಗುವ, ಬಹು ನಿರೀಕ್ಷಿತ ಪ್ರವಾಸೋದ್ಯಮ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ಜಾಗ ಕಾಯ್ದಿರಿಸುವ ಮತ್ತು ಅಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಸಂಪರ್ಕಿಸುವ ರಸ್ತೆಯ ನಿರ್ಮಾಣದ ಬಗ್ಗೆ ಪ್ರಸನ್ನ ದರ್ಬೆ ಅವರು ಅಬ್ದುಲ್ ಜಾವೇದ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಆ.೧೪ರಂದು ಪ್ರಸನ್ನ ದರ್ಬೆ ಯವರು ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳೊಂದಿಗೆ ಬೇಟಿ ನೀಡಿ ಸಮಸ್ಯೆಯ ಕುರಿತು ಸೂಕ್ತ ವ್ಯವಸ್ಥೆ ಮಾಡುವ ಕುರಿತು ಚರ್ಚಿಸಿದರು.

ಬಿಜೆಪಿಯ ಕಣಿಯೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಬಂದಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ಬಂದಾರು ಪಂಚಾಯತ್ ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಪುತ್ತೂರು ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಅದೇಶ್ ಶೆಟ್ಟಿ ಉಪ್ಪಿನಂಗಡಿ, ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಬಂದಾರು, ಗ್ರೋಮಾ ಕನ್ಸ್ಟ್ರಕ್ಷನ್ಸ್‌ನ ಅಧಿಕಾರಿಗಳಾದ ಜಯರಾಮ್, ಮೋಹನ್ ಮತ್ತು ಇಂಜಿನಿಯರ್‌ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here