






ಬೆಳ್ತಂಗಡಿ: ಶಿವಮೊಗ್ಗ ಮೂಲದ ಅನಿಷಾ ಪಲಣ್ಣ ಅವರ ವಿರುದ್ಧ ಸುಮಾರು 87 ಲಕ್ಷ ರೂ ಹಣದ ವಂಚನೆಗೆ ಸಂಬಂಧಿಸಿದಂತೆ ಜು. 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದ ಬೆಳ್ತಂಗಡಿಯ ಅನನ್ಯ ಕೃಷ್ಣ ಅವರು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟಿಕರಣ ನೀಡಿದ್ದಾರೆ. ಅನಿಷಾ ಅವರೊಂದಿಗೆ ಸುಮಾರು 10 ದಿನಗಳ ಕಾಲ ಯಾವುದೇ ರೀತಿಯ ಸಂಪರ್ಕ ಸಾಧ್ಯವಾಗಿರಲಿಲ್ಲ. ಈ ಅವಧಿಯಲ್ಲಿ ಅನಿಷಾ ಅವರ ಬಗ್ಗೆ ಇತರ ವ್ಯಕ್ತಿಗಳ ಬಳಿ ವಿಚಾರಿಸಿದಾಗ ಅವರ ಬಗ್ಗೆ ಸಂಪೂರ್ಣವಾಗಿ ತಪ್ಪು ಹಾಗೂ ವಾಸ್ತವಾಂಶಕ್ಕೆ ವಿರುದ್ಧವಾದ ಮಾಹಿತಿಯನ್ನು ನೀಡಲಾಗಿತ್ತು. ಇದರಿಂದ ಆತಂಕ, ಗೊಂದಲ ಹಾಗೂ ಭಯ ಉಂಟಾಗಿತ್ತು. ನಂತರ ಅನಿಷಾ


ಅವರು ಸಂಪರ್ಕಕ್ಕೆ ಬಂದು ನಡೆದಿರುವ ವಿಚಾರಗಳ ಬಗ್ಗೆ ಸಂಪೂರ್ಣ ಮತ್ತು ಸೂಕ್ತ ಸ್ಪಷ್ಟಿಕರಣ ನೀಡಿದ್ದು ವಿಷಯದ ಕುರಿತು ಸ್ಪಷ್ಟ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಉಂಟಾಗಿದ್ದ ತಪ್ಪು ತಿಳುವಳಿಕೆ ಹಾಗೂ ಗೊಂದಲವನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲಾಗಿದೆ ಎಂದು ಅನನ್ಯ ಕೃಷ್ಣ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮಿಬ್ಬರ ನಡುವೆ ಪರಸ್ಪರ ಒಪ್ಪಿಗೆಯಿಂದ ರಾಜಿ ಸಮಾಧಾನವಾಗಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದೆ ಯಾವುದೇ ತಪ್ಪು ತಿಳುವಳಿಕೆ ಅಥವಾ ಅನಗತ್ಯ ಗೊಂದಲ ಉಂಟಾಗದಂತೆ ಸ್ಪಷ್ಟಿಕರಣ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಯಾರಿಗೂ
ಯಾವುದೇ ರೀತಿಯ ತಪ್ಪು ಅಭಿಪ್ರಾಯ ಉಂಟಾಗಬಾರದು.
ತಮ್ಮ ಮತ್ತು ಅನಿಷಾ ಅವರ ನಡುವೆ ಉಂಟಾಗಿದ್ದ ಸಮಸ್ಯೆ ಪರಸ್ಪರ ಮಾತುಕತೆ ಹಾಗೂ ಒಪ್ಪಿಗೆಯ ಮೂಲಕ ಬಗೆ ಹರಿದಿದೆ ಎಂದು ಅನನ್ಯ ಕೃಷ್ಣ ಅವರು ಸ್ಪಷ್ಟಪಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಯಾವುದೇ ತಪ್ಪು ಮಾಹಿತಿ, ಊಹಾಪೋಹ ಅಥವಾ ವೈಯಕ್ತಿಕ ಆರೋಪಗಳು ಪ್ರಕಟವಾಗದಂತೆ ಮೇಲಿನ ವಾಸ್ತವಾಂಶಗಳನ್ನು ಪರಿಗಣಿಸುವಂತೆ ಅವರು ಮನವಿ ಮಾಡಿದ್ದಾರೆ.









