ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಕುಂದು ಕೊರತೆಗಳ ವರದಿ-ರಾಜ್ಯ ಕಾನೂನು ಸೇವೆ ಪ್ರಾಧಿಕಾರಕ್ಕೆ ಸಲ್ಲಿಕೆ

0

ಬೆಳ್ತಂಗಡಿ: ತಾಲೂಕು ಆಸ್ಪತ್ರೆಗೆ ಬೆಳ್ತಂಗಡಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಮಲಿಂಗಪ್ಪ ಹಾಗೂ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಶಾಂಕ್ ನಾಗೇಂದ್ರ ಭಟ್ ಅವರು ಜು.29 ರಂದು ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಕಂಡು ಬಂದ ವರದಿಯನ್ನು ಅ.1 ರಂದು ಜಿಲ್ಲಾ ಕಾನೂನು ಪ್ರಾಧಿಕಾರ ಮೂಲಕ ರಾಜ್ಯ ಕಾನೂನು ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ.

ವರದಿಯಲ್ಲಿರುವ ಅಂಶಗಳು:ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯು ತಾಲೂಕಿನ ಜನರಿಗೆ ಪ್ರಮುಖ ಆರೋಗ್ಯ ಸೇವಾ ಕೇಂದ್ರವಾಗಿರುತ್ತದೆ. ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ತಜ್ಞರು, ಫಾರ್ಮಸಿ ಸಿಬ್ಬಂದಿ, ಆಡಳಿತ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಗಂಭೀರವಾದ ವಿಷಯ. ವಿಶೇಷವಾಗಿ ಫಿಸಿಷಿಯನ್, ಅಳವಡಿಕೆ ತಜ್ಞರು ಮತ್ತು ರೇಡಿಯಾಲಜಿಸ್ಟ್ ಹುದ್ದೆಗಳು ಖಾಲಿ ಇರುವುದರಿಂದ ತುರ್ತು ಮತ್ತು ಗಂಭೀರ ರೋಗಿಗಳ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸಾ ಸೇವೆಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಆದುದರಿಂದ ಕುಂದುಕೊರತೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಮೂಲಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದೆ.

ಖಾಲಿ ಇರುವ ಹುದ್ದೆಗಳ ವರದಿ ಸಲ್ಲಿಕೆ:ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿಯಿರುವ ಫಿಸಿಷಿಯನ್ ಹುದ್ದೆಯನ್ನು ತುರ್ತಾಗಿ ಭರ್ತಿ ಮಾಡುವುದು.ಖಾಲಿಯಿರುವ ಅರವಳಿಕೆ ತಜ್ಞರ ಹುದ್ದೆಯನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಿ, ತುರ್ತು ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆಗಳು ನಿರಂತರವಾಗಿ ನಡೆಯುವಂತೆ ವ್ಯವಸ್ಥೆ ಮಾಡುವುದು. ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ಯಂತ್ರದ ಸಮರ್ಪಕ ಬಳಕೆಗೆ ಒಬ್ಬ ಖಾಯಂ ರೇಡಿಯಾಲಜಿಸ್ಟ್ ಅವರನ್ನು ನೇಮಕ ಮಾಡುವುದು.*ಆಸ್ಪತ್ರೆಯ ಆಡಳಿತ ಕಾರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಲು ಪ್ರತ್ಯೇಕವಾಗಿ ಒಬ್ಬ ಹಿರಿಯ ವೈದ್ಯರನ್ನು ಪೂರ್ಣಕಾಲಿಕ ಆಡಳಿತ ವೈದ್ಯಾಧಿಕಾರಿಯಾಗಿ ನಿಯುಕ್ತಿಗೊಳಿಸುವುದು.*ಖಾಲಿಯಿರುವ ಇಬ್ಬರು ಫಾರ್ಮಸಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವುದು.*ಖಾಲಿಯಿರುವ ಎರಡು ಪ್ರಥಮ ದರ್ಜೆ ಸಹಾಯಕ, ಎರಡು ದ್ವಿತೀಯ ದರ್ಜೆ ಸಹಾಯಕ ಮತ್ತು ಒಂದು ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವುದು.*ಹೊರಗುತ್ತಿಗೆ ಗ್ರೂಪ್-ಡಿ ಸಿಬ್ಬಂದಿಗೆ ಪ್ರತಿ ತಿಂಗಳು ಸಕಾಲದಲ್ಲಿ ವೇತನ ಪಾವತಿಯಾಗುವಂತೆ ಗುತ್ತಿಗೆದಾರರ ಬಿಲ್ ಗಳಿಗೆ ಅಗತ್ಯ ಅನುದಾನವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡುವುದು.*ಆಸ್ಪತ್ರೆಯ ಕಟ್ಟಡದಲ್ಲಿರುವ ತೇವ ಮತ್ತು ಸೋರಿಕೆ ಸಮಸ್ಯೆಗಳನ್ನು ಸರಿಪಡಿಸಿ, ಮಳೆಗಾಲದ ನಂತರ ಆಸ್ಪತ್ರೆಯ ಒಳ ಮತ್ತು ಹೊರ ಗೋಡೆಗಳಿಗೆ ಬಣ್ಣ ಬಳಿಯಲು ವಿಶೇಷ ಅನುದಾನ ಒದಗಿಸುವುದು.*KHSDP ವತಿಯಿಂದ ಕೈಗೊಳ್ಳಲಾಗಿರುವ ಕಾಂಪೌಂಡ್ ಮತ್ತು ಶೌಚಾಲಯ ದುರಸ್ತಿ ಕಾಮಗಾರಿಗಳನ್ನು ಶೀಘ್ರವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಮೇಲ್ವಿಚಾರಣೆ ನಡೆಸುವುದು.*ಆಸ್ಪತ್ರೆಗೆ ಒಬ್ಬ ಪೂರ್ಣಕಾಲಿಕ ಎಲೆಕ್ಟ್ರಿಷಿಯನ್ ಮತ್ತು ಒಬ್ಬ ಪ್ಲಂಬರ್ ರನ್ನು ನೇಮಿಸುವುದು ಅಥವಾ ಅವರ ಸೇವೆ ಸದಾ ಲಭ್ಯವಾಗುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು.

ಆಸ್ಪತ್ರೆಯಲ್ಲಿರುವ ಎಲ್ಲ ಮಂಜೂರಾದ ಮತ್ತು ಖಾಲಿ ಹುದ್ದೆಗಳ ವಿವರ, ಹುದ್ದೆ ಖಾಲಿಯಾದ ದಿನಾಂಕ, ನೇಮಕಾತಿಗೆ ಕೈಗೊಂಡ ಕ್ರಮ ಹಾಗೂ ಭರ್ತಿಗೆ ನಿರೀಕ್ಷಿತ ಅವಧಿಯ ಕುರಿತು ಸಂಬಂಧಪಟ್ಟ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವರದಿ ಪಡೆಯುವುದು.

LEAVE A REPLY

Please enter your comment!
Please enter your name here