`ಹೂವಲ್ಲಿ ನಿನ್ನ…ಮೊಗವನ್ನು ಕಂಡೆ….ಮೊಗದಲ್ಲಿ ನಿನ್ನ ಹೂ ನಗೆಯ ಕಂಡೇ…’ಮುಂಡಾಜೆಯಲ್ಲಿ ಚಿತ್ರೀಕರಣವಾಗಿದ್ದ ಬಯಲು ದಾರಿ ಸಿನಿಮಾದಲ್ಲಿ ಎಸ್.ಜಾನಕಿ ಹಾಡು

0

ಬೆಳ್ತಂಗಡಿ: ಜು.೧೧ರಂದು ವಿಧಿವಶರಾದ ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಪ್ರಸಿದ್ಧರಾಗಿರುವ ಖ್ಯಾತ ಹಿನ್ನಲೆ ಗಾಯಕಿ ಎಸ್.ಜಾನಕಿ (೮೮) ಅವರು ಮುಂಡಾಜೆಯಲ್ಲಿ ಈಗಿರುವ ಮೃತ್ಯುಂಜಯ ನದಿಯ ಕಾಪು ಡ್ಯಾಮ್ ಪರಿಸರದಲ್ಲಿ ೧೯೭೬ರ ವೇಳೆಗೆ ಚಿತ್ರೀಕರಣಗೊಂಡ ಬಯಲುದಾರಿ ಚಿತ್ರದ ಹಾಡಿಗೆ ಧ್ವನಿಯಾಗಿದ್ದರು ಎಂಬುದನ್ನು ಬೆಳ್ತಂಗಡಿ ತಾಲೂಕಿನ ಜನತೆ ನೆನಪಿಸಿಕೊಳ್ಳುತ್ತಿದ್ದಾರೆ. ಬಯಲು ದಾರಿ ಸಿನಿಮಾದ ಬಹುತೇಕ ಚಿತ್ರೀಕರಣ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ನಡೆದಿತ್ತು. ಇದರಲ್ಲಿ ನಟ ಅನಂತ್‌ನಾಗ್ ಅವರು ಹೆಲಿಕಾಪ್ಟರ್‌ನಲ್ಲಿ ಸಾಗುತ್ತಾ ಹೇಳುವ ಎಲ್ಲಿರುವೇ ಮನವ ಕಾಡುವ ರೂಪಸಿಯೇ....' ಹಾಡು ಈಗಲೂ ಜನಮಾನಸದಲ್ಲಿದೆ. ಈ ಹಾಡನ್ನು ಎಸ್.ಬಿ. ಬಾಲಸುಬ್ರಹ್ಮಣ್ಯಂ ಹಾಡಿದ್ದು ೧೯೭೭ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. ಮುಂಡಾಜೆಯಲ್ಲಿ ನಟಿ ಕಲ್ಪನಾ ಅವರ ನೃತ್ಯಕ್ಕೆ ಎಸ್. ಜಾನಕಿ ಅವರುಹೂವಲ್ಲಿ ನಿನ್ನ…ಮೊಗವನ್ನು ಕಂಡೆ….ಮೊಗದಲ್ಲಿ ನಿನ್ನ ಹೂ ನಗೆಯ ಕಂಡೇ…’ ಎಂಬ ಹಾಡು ಹಾಡಿದ್ದರು. ಈ ಹಾಡು ಈಗಲೂ ಸಿನಿ ಪ್ರಿಯರ ಮನದಲ್ಲಿ ಚಿರಸ್ಥಾಯಿಯಾಗಿದೆ. ಈ ಹಾಡು ಚಿತ್ರೀಕರಣಗೊಂಡ ಜಾಗ ಅಂದು ಸಾಂಪ್ರದಾಯಿಕ ಕಟ್ಟವಾಗಿತ್ತು. ಈಗ ಡ್ಯಾಮ್ ನಿರ್ಮಾಣವಾಗಿದೆ.
ಮುಂಡಾಜೆಯಲ್ಲಿ ಚಿತ್ರೀಕರಣವಾಗಿದ್ದ ಬಯಲು ದಾರಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಈಗಿರುವ ಮೃತ್ಯುಂಜಯ ನದಿಯ ಕಾಪು ಡ್ಯಾಮ್ ಪರಿಸರದಲ್ಲಿ ೧೯೭೬ರ ವೇಳೆಗೆ ಬಯಲು ದಾರಿ ಸಿನಿಮಾ ಚಿತ್ರೀಕರಣವಾಗಿತ್ತು. ಆಗ ಸಾಂಪ್ರದಾಯಿಕ ಕಟ್ಟವಾಗಿದ್ದ ಈ ಸ್ಥಳದಲ್ಲಿ ಕಲ್ಪನಾ ಅವತ ನೃತ್ಯಕ್ಕೆ ಎಸ್.ಜಾನಕಿ `ಹೂವಲ್ಲಿ ನಿನ್ನ…ಮೊಗವನ್ನು ಕಂಡೆ….ಮೊಗದಲ್ಲಿ ನಿನ್ನ ಹೂ ನಗೆಯ ಕಂಡೇ…’ ಎಂಬ ಹಾಡನ್ನು ಹಾಡಿದ್ದರು. ಭಾರತಿಸುತ ಅವರ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ದೊರೆ-ಭಗವಾನ್ ಜೋಡಿ ನಿರ್ದೇಶನ ಮಾಡಿ ನಿರ್ಮಾಣ ಮಾಡಿತ್ತು. ಖ್ಯಾತ ನಟರಾದ ಅನಂತ್‌ನಾಗ್ ಮತ್ತು ಕಲ್ಪನಾ ನಟಿಸಿದ್ದರು. ರಾಜನ್-ನಾಗೇಂದರ್ ಅವರ ಮಧುರ ಸಂಗೀತದ ಹಾಡುಗಳು ದೊಡ್ಡ ಆಕರ್ಷಣೆಯಾಗಿತ್ತು. ಶ್ರೀಮಂತ ಎಸ್ಟೇಟ್ ಮಾಲಕನ ಮಗಳು ಚಂದ್ರಾಳ ಸುತ್ತ ಸುತ್ತುವ ಈ ಸಿನಿಮಾದ ಕಥೆಯಲ್ಲಿ ಊರಿನಲ್ಲಿ ರೋಮಿಯೋ ಎಂದೇ ಖ್ಯಾತಿಯಾದ ಗೋಪು ಎಂಬ ಯುವಕನನ್ನು ಪ್ರೀತಿಸುತ್ತಾಳೆ. ನಂತರ ತನ್ನ ಮೇಲಿರುವ ಕೆಟ್ಟ ಹೆಸರನ್ನು ತೊಳೆದುಕೊಳ್ಳಲು ಗೋಪು ಸೈನಕ್ಕೆ ಸೇರುತ್ತಾನೆ. ಆದರೆ ಆತ ದುರಾದೃಷ್ಟವಶಾತ್ ವಿಮಾನ ಅಪಘಾತದಲ್ಲಿ ಮೃತಪಟ್ಟನೆಂದು ನಂಬಲಾಗುತ್ತದೆ. ಗರ್ಣಿಣಿಯಾದ ಚಂದ್ರಾ ಮನೆಯನ್ನು ತೊರೆದು ಕಷ್ಟಗಳನ್ನು ಎದುರಿಸಿ ತನ್ನ ಪ್ರೀತಿಯನ್ನು ಮತ್ತು ಜೀವನವನ್ನು ಹೇಗೆ ಮುನ್ನಡೆಸುತ್ತಾಳೆ ಎಂದು ವಿವರಿಸುತ್ತದೆ. ಮುಂಡಾಜೆ ಮತ್ತು ಚಾರ್ಮಾಡಿ ಪರಿಸರದಲ್ಲಿ ಚಿತ್ರೀಕರಣವಾಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಎಸ್.ಜಾನಕಿ ಹಾಡಿರುವ ಹಾಡು ಸೂಪರ್ ಡೂಪರ್ ಆಗಿತ್ತು ಎಂದು ಬೆಳ್ತಂಗಡಿಯ ಜನತೆ ಸ್ಮರಿಸುತ್ತಿದ್ದಾರೆ.
ಇಹಲೋಕ ತ್ಯಜಿಸಿದ ಗಾನ ಕೋಗಿಲೆ: ಮೈಸೂರಿನಲ್ಲಿ ವಾಸವಿದ್ದ ಎಸ್. ಜಾನಕಿ ಅವರಿಗೆ ಜು.೧೧ರಂದು ಸಂಜೆ ತೀವ್ರ ಹೃದಯಾಘಾತವಾಗಿದ್ದು ತಕ್ಷಣವೇ ಅವರನ್ನು ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ೧೯೩೮ರ ಏಪ್ರಿಲ್ ೨೩ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದ ಎಸ್.ಜಾನಕಿ ತಮ್ಮ ಮೂರನೆಯ ವಯಸ್ಸಿನಲ್ಲೇ ನಾದಸ್ವರ ವಿದ್ವಾನ್ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿದ್ದರು. ೧೯೫೭ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ.ಚಲಪತಿ ರಾವ್ ಅವರ ತಮಿಳು ಚಿತ್ರ ವಿಧಿಯಿನ್ ವಿಳಯಾಟ್ಟು ಜಾನಕಿ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದು ಎಂಬಂತೆ ಅವಕಾಶಗಳು ಹರಿದು ಬರಲು ಪ್ರಾರಂಭವಾದವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ೨೦ಕ್ಕೂ ಹೆಚ್ಚು ಭಾಷೆಗಳಲ್ಲಿ ೪೮ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದ ಎಸ್.ಜಾನಕಿ ಅವರು ಹಿಂದಿಯನ್ನೊಳಗೊಂಡಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ತಮ್ಮ ಗಾನಮಾಧುರ್ಯವನ್ನು ಹರಿಸಿದ್ದರು. ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಹುಟ್ಟಿದ ಕೋಟಿ ಚೆನ್ನಯರ ಕಥೆಯನ್ನೊಳಗೊಂಡ ಕೋಟಿ ಚೆನ್ನಯ ತುಳು ಚಲನಚಿತ್ರದಲ್ಲಿ ಪುತ್ತೂರು ಮೂಲದವರಾದ ಜಾನಪದ ವಿದ್ವಾಂಸ ಪ್ರೊ. ಬಿ.ಎ.ವಿವೇಕ್ ರೈ ಅವರು ಬರೆದಿರುವ ಎಕ್ಕ ಸಕ್ಕ? ಹಾಡು ಸೇರಿದಂತೆ ತುಳುವಿನಲ್ಲಿ ಹಲವು ಹಾಡುಗಳು ಎಸ್.ಜಾನಕಿಯವರ ಕಂಠಸಿರಿಯಲ್ಲಿ ಮೂಡಿಬಂದಿತ್ತು. ಯಾವುದೇ ಶುಭ ಸಮಾರಂಭಗಳ ಧ್ವನಿವರ್ಧಕಗಳಲ್ಲಿ ಮೊದಲು ಕೇಳಿ ಬರುತ್ತಿದ್ದುದೇ ಎಸ್.ಜಾನಕಿಯವರು ಹಾಡಿರುವಗಜಮುಖನೆ ಗಣಪತಿಯೇ ನಿನಗೆ ವಂದನೆ? ಹಾಡು. ದೀಪವು ನಿನ್ನದೆ, ಗಾಳಿಯೂ ನಿನ್ನದೆ, ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ, ಯುಗ ಯುಗಾದಿ ಕಳೆದರೂ, ಹೇಳೇ ಗೆಳತಿ, ಬಾನಲ್ಲು ನೀನೆ ಭುವಿಯಲ್ಲು ನೀನೆ, ಬಿಸಿಲಾದರೇನು ಮಳೆಯಾದರೇನು ಸೋಲೇ ಇಲ್ಲ ಮುಂತಾದ ಅಸಂಖ್ಯಾತ ಸುಮಧುರ ಕನ್ನಡ ಗೀತೆಗಳಿಗೆ ಅವರು ದನಿಯಾಗಿದ್ದರು. ಎಸ್.ಜಾನಕಿ ಅವರಿಗೆ ಹಲವು ರಾಷ್ಟ್ರಪ್ರಶಸ್ತಿಗಳು, ವಿವಿಧ ರಾಜ್ಯಗಳ ಪ್ರಶಸ್ತಿಗಳು ಲಭಿಸಿತ್ತು. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿತ್ತು. ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದಾಗ ಪದ್ಮ ಪ್ರಶಸ್ತಿಗಳಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ ಈ ಪ್ರಶಸ್ತಿಯನ್ನು ಅವರು ತಿರಸ್ಕರಿಸಿದ್ದರು.
ಫಾರ್ಮ್‌ಹೌಸ್‌ನಲ್ಲಿ ಅಂತ್ಯಸಂಸ್ಕಾರ: ಸಾರ್ವಜನಿಕ ದರ್ಶನದ ಬಳಿಕ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಬೋಗಾದಿ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಜು.೧೨ರಂದು ಸಂಜೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರ ನೆರವೇರಿದೆ. ಸರಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳು ನಡೆದಿದ್ದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. ಎಸ್.ಜಾನಕಿ ಅವರ ನಿಧನರಾಗಿರುವ ಕಾರಣ ಜಾನಕಿ ಅವರ ಮೊಮ್ಮಗಳು ಅಪ್ಸಾರ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದರು.

ಪುತ್ತೂರು ಮೂಲದವರು?:ಖ್ಯಾತ ಗಾಯಕಿ ಎಸ್. ಜಾನಕಿಯವರು ಪುತ್ತೂರು ತಾಲೂಕಿನ ಕೋಡಿಂಬಾಡಿ ಮೂಲದವರು ಎಂದು ಹಲವು ವರ್ಷಗಳಿಂದ ಆ ಪರಿಸರದ ಮನೆ ಮನಗಳು ಮಾತನಾಡುತ್ತಿದ್ದಾರೆ. ಎಸ್.ಜಾನಕಿಯವರು ಕೋಡಿಂಬಾಡಿ ಗ್ರಾಮದ ಕಾಂತಳಿಕೆ ಮೂಲ ಬಿಲ್ಲವ ಮನೆತನದವರು. ಸಣ್ಣದ್ದರಿಂದಲೇ ಉತ್ತಮ ಕಂಠ ಸಿರಿ ಹೊಂದಿದ್ದ ಅವರನ್ನು ಆಗಿನ ಕಾಲದಲ್ಲಿ ಸಣ್ಣ ಯೌವನಕ್ಕೆ ಬಂದಾಗಲೇ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ನಿವಾಸಿಯೋರ್ವರಿಗೆ ಮದುವೆ ಮಾಡಿಕೊಡಲಾಗಿತ್ತು. ಆ ಸಂಸಾರದಲ್ಲಿ ಇಬ್ಬರು ಮಕ್ಕಳನ್ನೂ ಅವರು ಪಡೆದಿದ್ದರು. ಆ ಸಂದರ್ಭದಲ್ಲಿ ಶಾಂತಿನಗರಕ್ಕೆ ಬಂದಿದ್ದ ಸೈಕಲ್ ಬ್ಯಾಲೆನ್ಸ್ ತಂಡವೊಂದು ಇವರ ಬದುಕಿಗೆ ಮತ್ತೊಂದು ತಿರುವು ನೀಡಿತು. ತನ್ನಿಬ್ಬರು ಪುಟ್ಟ ಮಕ್ಜಳೊಂದಿಗೆ ತನ್ನೂರು, ತನ್ನ ಸಂಸಾರವನ್ನು ಆ ತಂಡದೊಂದಿಗೆ ತೊರೆದ ಅವರು ಮುಂದೊಂದು ದಿನ ದೊಡ್ಡ ಗಾಯಕಿಯಾಗಿ ಬದಲಾದರು ಎಂದು ಆ ಪರಿಸರದ ಕೆಲವರು ಮಾತನಾಡುತ್ತಿದ್ದಾರೆ. ಕಾಂತಳಿಕೆಯಿಂದ ಇವರ ಮನೆತನದವರೂ ಚದುರಿ ಹೋಗಿದ್ದರೂ ಸಂಗೀತ ಕ್ಷೇತ್ರಕ್ಕೆ ಇವರ ಕೊಡುಗೆ ಈಗಲೂ ಇದೆ. ಇವರ ಸ್ವಂತ ಸಹೋದರ ಎನ್ನಲಾಗುತ್ತಿರುವವರ ಮಕ್ಕಳು ಈಗ ನೆಕ್ಕಿಲಾಡಿಯಲ್ಲಿ ಸ್ವಂತ ಬ್ಯಾಂಡ್ ತಂಡವನ್ನು ಕಟ್ಟಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ನೀಡುತ್ತಿದ್ದಾರೆ. ಜಾನಕಿಯವರಿಗೆ ಇಲ್ಲಿನ ಮಣ್ಣಿನ ಸಂಬಂಧ ಇರುವ ಬಗ್ಗೆ ಅಧಿಕೃತ ದಾಖಲೆಗಳು ಸಿಗದಿದ್ದರೂ ಅವರ ಮೂಲದ ಬಗ್ಗೆ ಪರಿಸರದಲ್ಲಿ ಕೇಳಿಬರುತ್ತಿರುವ ಮಾತುಗಳು ಇಂದಿಗೂ ನಿಂತಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ೩೪ ನೆಕ್ಕಿಲಾಡಿಯ ಶಾಂತಿನಗರ ಮಹಾವಿಷ್ಣು ದೇವಳದಲ್ಲಿ ನಡೆದಿದ್ದ ಪ್ರಶ್ನಾ ಚಿಂತನೆಯ ಸಂದರ್ಭ ಈ ಭಾಗದಿಂದ ಸಣ್ಣ ಪ್ರಾಯದಲ್ಲಿ ಹೋಗಿರುವ ಹೆಣ್ಣು ಮಗಳೊಬ್ಬಳು ಸಂಗೀತ ಕ್ಷೇತ್ರದಲ್ಲಿ ಅದ್ಬುತ ಸಾಧನೆ ಮಾಡಿದ್ದಾರೆ? ಎಂಬ ವಿಚಾರ ಕಂಡು ಬಂದಿತ್ತು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದದ್ದು ಎಸ್.ಜಾನಕಿಯವರ ವಿಚಾರ ಎಂದು ಆ ಸಂದರ್ಭ ಚರ್ಚೆಗಳು ನಡೆದಿದ್ದವು. ಎಸ್. ಜಾನಕಿ ಅವರು ಪುತ್ತೂರು ಮೂಲದವರು ಎಂದು ಚರ್ಚೆ ನಡೆಯುತ್ತಿರುವ ಕುರಿತು ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬಳಿಕ ಈ ವಿಚಾರದಲ್ಲಿ ಭಾರೀ ಪರ ವಿರೋಧ ಚರ್ಚೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here