ಬೆಳ್ತಂಗಡಿ, ಉಪ್ಪಿನಂಗಡಿಯಲ್ಲಿ ನಡೆದಿದ್ದ ಸರಣಿ ಕಳವು ಪ್ರಕರಣ: ಕೊಯಮುತ್ತೂರಿನ ಜಯಕುಮಾರ್ ಬಂಧನ

0

ಬೆಳ್ತಂಗಡಿ: ಬೆಳ್ತಂಗಡಿ ಮತ್ತು ಉಪ್ಪಿನಂಗಡಿಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು, ದ.ಕ. ಜಿಲ್ಲೆ, ಕೇರಳ ಸೇರಿದಂತೆ ಒಟ್ಟು ೧೧ ಕಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಡಿ ತಮಿಳುನಾಡಿನ ಕೊಯಮುತ್ತೂರು ನಿವಾಸಿ ಜಯಕುಮಾರ್ (೫೫) ಎಂಬಾತನನ್ನು ಜು.೮ರಂದು ಬಂಧಿಸಲಾಗಿದ್ದು ಆತನಿಂದ ಕಬ್ಬಿಣದ ಸಲಾಕೆ, ಸ್ಕೂ ಡ್ರೈವರ್, ಬ್ಯಾಗ್ ಹಾಗೂ ೨ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ಉಪ್ಪಿನಂಗಡಿ ಹಾಗೂ ಬೆಳ್ತಂಗಡಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಯಕುಮಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ ೫೮/೨೦೨೬, ಅ.ಕ್ರ ೫೯/೨೦೨೬, ಅ.ಕ್ರ ೬೪/೨೦೨೬, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೭೮/೨೦೨೬ ಹಾಗೂ ಅ.ಕ್ರ:೭೯/೨೦೨೬ರಂತೆ ಪ್ರಕರಣ ದಾಖಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ವ್ಯಾಪಿಯಲ್ಲಿ ೫, ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ೧, ಕೇರಳ ರಾಜ್ಯದ ೪ ಪೊಲೀಸ್ ಠಾಣೆಗಳಲ್ಲಿ ತಲಾ ೧ ಹಾಗೂ ಬೆಂಗಳೂರಿನಲ್ಲಿ ೧ ಪ್ರಕರಣ ಈತನ ವಿರುದ್ಧ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್, ಉಪ್ಪಿನಂಗಡಿ ಠಾಣಾ ಪೊಲೀಸ್ ನಿರೀಕ್ಷಕ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣಾ ಸಬ್‌ಇನ್ಸ್‌ಪೆಕ್ಟರ್‌ಗಳಾದ ಆನಂದ ಎಂ, ಸಿಕಂದರ್ ಪಾಷಾ, ಉಪ್ಪಿನಂಗಡಿ ಠಾಣಾ ಎಸ್.ಐ. ಸುತೇಶ್ ಕೆ.ಪಿ., ಬೆಳ್ತಂಗಡಿ ಪೊಲೀಸ್ ಠಾಣಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಪಂಪಾಪತಿ, ಗಿರೀಶ್, ಹೇಮರಾಜ್ ಹೆಚ್. ಪಿ, ಕಡಬ ಪೊಲೀಸ್ ಠಾಣೆಯ ಹರ್ಷಿತ್, ಪ್ರಕಾಶ್, ಸಿಡಿಆರ್ ವಿಭಾಗದ ಸಂಪತ್ ಮತ್ತು ದಿವಾಕರ್ ಪಾಲ್ಗೊಂಡಿದ್ದರು.

ಒಂದೇ ರಾತ್ರಿ ಆರು ವಕೀಲರ ಕಚೇರಿ ಸಹಿತ ೧೧ ಕಡೆ ಕಳ್ಳನ ಕರಾಮತ್ತು ನಡೆದಿತ್ತು: ಬೆಳ್ತಂಗಡಿಯಲ್ಲಿ ಒಂದೇ ರಾತ್ರಿ ಆರು ವಕೀಲರ ಕಚೇರಿ ಸಹಿತ ೧೧ ಕಡೆ ಕಳವು ನಡೆಸಿ ಜಯಕುಮಾರ್ ಕರಾಮತ್ತು ನಡೆಸಿದ್ದ. ಬೆಳ್ತಂಗಡಿ ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್‌ನಲ್ಲಿ ಬರೋಬ್ಬರಿ ಆರು ಅಂಗಡಿ ಕೋಣೆಗಳಲ್ಲಿ ಹುಡುಕಾಡಲಾಗಿತ್ತು. ಧರ್ಮಶ್ರೀ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿರುವ ಎಲ್ಲಾ ಕೋಣೆಗಳ ಬೀಗ ಮುರಿದು ಸಿಕ್ಕ ಸಿಕ್ಕ ವಸ್ತುಗಳನ್ನು ಜಾಲಾಡಲಾಗಿತ್ತು. ಸಮೃದ್ಧಿ ಎಂಟರ್‌ಪ್ರೈಸಸ್, ವಕೀಲರುಗಳಾದ ವೈ. ರಾಧಾಕೃಷ್ಣ, ಯತೀಶ್ ಶೆಟ್ಟಿ, ಉಷಾ ಎನ್.ಜಿ. ಹಾಗೂ ಉದ್ಯಮಿ ಮಹಮ್ಮದ್ ಹನೀಫ್ ಅವರ ಕಚೇರಿ ಸೇರಿದಂತೆ ಮೊದಲ ಮಹಡಿಯಲ್ಲಿರುವ ಎಲ್ಲಾ ರೂಮ್‌ಗಳಲ್ಲೂ ಕೈಚಳಕ ತೋರಿಸಲಾಗಿತ್ತು. ಧರ್ಮಶ್ರೀ ಬಿಲ್ಡಿಂಗ್‌ನಲ್ಲಿರುವ ಸಮೃದ್ಧಿ ಎಂಟರ್‌ಪ್ರೈಸಸ್‌ನಿಂದ ಸುಮಾರು ೧.೫ ಲಕ್ಷಕ್ಕೂ ಅಧಿಕ ನಗದು ಹಣವನ್ನು ಕಳವು ಮಾಡಿದ್ದಾರೆಂದು ಅದರ ಮಾಲಕ ರಂಜಿತ್ ತಿಳಿಸಿದ್ದರು. ಕಳ್ಳತನದ ಸುಳಿವು ಸಿಗಬಾರದೆಂಬ ಉzಶದಿಂದ ಕಳ್ಳ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಮೆಮೊರಿ ಕಾರ್ಡ್ ದೋಚಿದ್ದ. ಬೆಳ್ತಂಗಡಿ ಪೇಟೆಯ ಮೂರು ಮಾರ್ಗದ ಸಮೀಪವಿರುವ ಮಾತೃಶ್ರೀ ಹೋಟೆಲ್‌ಗೆ ನುಗ್ಗಿದ್ದ ಕಳ್ಳ ಡ್ರಾಯರ್‌ನಲ್ಲಿದ್ದ ಎರಡು ಸಾವಿರ ರೂ ಹಾಗೂ ಡಬ್ಬಿಯಲ್ಲಿ ಸಂಗ್ರಹಿಸಿದ್ದ ೫ ಸಾವಿರಕ್ಕೂ ಅಧಿಕ ಹಣ ಕದ್ದೊಯ್ದಿದ್ದ. ಕಳ್ಳ ಕದಿಯುವ ತುರ್ತಿನಲ್ಲಿ ಚಿಲ್ಲರೆಗಳನ್ನು ಹೊಟೇಲ್‌ನಲ್ಲಿ ಚೆಲ್ಲಾಡಿದ್ದ. ಮಾತೃಶ್ರೀ ಹೊಟೇಲ್‌ನ ಪಕ್ಕದ ಹಿಮಾಲಯ ಫೈನಾನ್ಸ್, ವಕೀಲರುಗಳಾದ ಜಯರಾಮ ಮಣಿಯಾಣಿ, ಜಿತೇಶ್ ಕೆ., ರಾಮಚಂದ್ರ ಗೌಡ ಮತ್ತು ಶಬರಿ ಎಂಟರ್‌ಪ್ರೈಸಸ್ ಅಂಗಡಿಗೂ ಕನ್ನ ಹಾಕಿದ್ದ. ಕಳವು ಕೃತ್ಯದ ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಡಿವೈಎಸ್‌ಪಿ ರೋಹಿಣಿ ಸಿ.ಕೆ., ಸರ್ಕಲ್ ಇನ್ಸಪೆಕ್ಟರ್ ರವಿ ಬಿ.ಎಸ್. ನೇತೃತ್ವದ ತಂಡ ಆಗಮಿಸಿ ಪರಿಶೀಲನೆ ನಡೆಸಿತ್ತು.

ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು: ಕಳವು ಕೃತ್ಯದ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಕೋರ್ಟ್ ರೋಡ್‌ನಲ್ಲಿರುವ ಧರ್ಮಶ್ರೀ ಕಟ್ಟಡದ ಮೊದಲನೇ ಮಹಡಿಯಲ್ಲಿ ಸಮೃದ್ಧಿ ಎಂಟರ್‌ಪ್ರೈಸಸ್ ಎಂಬ ಕಚೇರಿಯನ್ನು ರಂಜಿತ್ ಎಂಬವರು ನಡೆಸಿಕೊಂಡು ಬರುತ್ತಿದ್ದಾರೆ. ಎಂದಿನಂತೆ ರಂಜಿತ್ ಅವರ ಸಹೋದ್ಯೋಗಿ ಮೇ. ೧೮ರಂದು ಸಂಜೆ ೬ ಗಂಟೆಗೆ ಕಚೇರಿ ಬಂದ್ ಮಾಡಿ ಹೋಗಿದ್ದು ಮೇ.೧೯ರಂದು ಬೆಳಿಗ್ಗೆ ೮.೦೦ ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಕಚೇರಿಯ ಬಾಗಿಲನ್ನು ಒಡೆದು ಒಳನುಗ್ಗಿ ಮೇಜಿನ ಲಾಕರ್ ಒಡೆದು ಅದರಲ್ಲಿರುವ ಸುಮಾರು ೧,೪೫,೦೦೦ ಹಣವನ್ನು ಮತ್ತು ಸಿಸಿ ಕ್ಯಾಮೆರಾದ ಮೆಮೊರಿ ಕಾರ್ಡು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅಕ್ಕಪಕ್ಕದ ಕಚೇರಿಯವರನ್ನು ವಿಚಾರಿಸಿದಾಗ ಹನೀಫ್‌ರವರ ಕಚೇರಿಯ ಬೀಗ ಒಡೆದು ಒಳಹೋಗಿದ್ದು ಯಾವುದೇ ನಗದು ಕಳವಾಗಿಲ್ಲ. ಆ ಬಳಿಕ ರಂಜಿತ್ ರವರ ಕಚೇರಿಯ ಪಕ್ಕದಲ್ಲಿ ಯತೀಶ್ ಶೆಟ್ಟಿಯವರ ವಕೀಲರ ಕಚೇರಿಯಲ್ಲಿ ಅವರು ಸಂಗ್ರಹಿಸಿಟ್ಟಿದ್ದ ಸುಮಾರು ೩೦೦೦ ರೂ ಹಣವನ್ನು ಕಳವು ಮಾಡಿಕೊಂಡು ಹೋಗಲಾಗಿದೆ. ಆ ನಂತರ ವೈ.ರಾಧಾಕೃಷ್ಣ ಮತ್ತು ಉಷಾ ಎನ್.ಜಿ. ವಕೀಲರ ಕಚೇರಿಯ ಬಾಗಿಲನ್ನು ಮುರಿದು ಉಷಾ ಎನ್.ಜಿ. ಅವರ ಪರ್ಸ್ ಕಳವು ಮಾಡಿದ್ದು ಅದರಲ್ಲಿ ಸುಮಾರು ೧೦೦೦೦ ಹಣ ಇರುವುದಾಗಿ ತಿಳಿಸಿದ್ದಾರೆ. ಆ ಬಳಿಕ ಇನ್ನೊಂದು ರೂಂ ಹಾಗೂ ಬಾತ್ ರೂಂನ ಬೀಗ ಮುರಿದಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇನ್ನೊಂದು ಕಳವು ಕೃತ್ಯಕ್ಕೆ ಸಂಬಂಧಿಸಿ ಮಾತೃಶ್ರೀ ಹೋಟೆಲ್ ಮಾಲಕ ಪ್ರಮೋದ್ ಪೂಜಾರಿ ನೀಡಿದ ದೂರಿನಂತೆ ಕೇಸ್ ದಾಖಲಾಗಿತ್ತು. ಸುಮಾರು ೬ ವರ್ಷಗಳಿಂದ ಬೆಳ್ತಂಗಡಿ ಕಸಬಾ ಗ್ರಾಮದ ಮೂರು ಮಾರ್ಗದ ಬಳಿ ಇರುವ ಶಿವಪ್ರಸಾದ್ ಪಿ. ರಾವ್ ಎಂಬವರ ಕಟ್ಟಡದಲ್ಲಿ ಪ್ರಮೋದ್ ಪೂಜಾರಿ ಅವರು ಮಾತೃಶ್ರೀ ಹೊಟೇಲ್ ನಡೆಸುತ್ತಿದ್ದಾರೆ. ಎಂದಿನಂತೆ ಮೇ.೧೮ರಂದು ಸಂಜೆ ೬.೩೦ ಗಂಟೆಗೆ ಹೊಟೇಲ್ ಬಂದ್ ಮಾಡಿ ಹೋಗಿದ್ದು ಮೇ.೧೯ರಂದು ಬೆಳಿಗ್ಗೆ ೭.೦೦ ಗಂಟೆಗೆ ಬಂದು ನೋಡಿದಾಗ ಹೊಟೇಲ್‌ನ ಬಾಗಿಲು ಮುರಿದು ಯಾರೋ ಕಳ್ಳರು ಒಳನುಗ್ಗಿ ಕ್ಯಾಶ್ ಟೇಬಲ್ ಮೇಲೆ ಇರಿಸಿದ್ದ ಸ್ಟೀಲ್ ಡಬ್ಬಿಯಲ್ಲಿಟ್ಟಿದ್ದ ಅಂದಾಜು ಸುಮಾರು ರೂ.೫೦೦೦ ನಗದು ಹಾಗೂ ಡ್ರಾವರ್‌ನಲ್ಲಿರಿಸಿದ್ದ ರೂ.೨೫೦೦ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅಕ್ಕಪಕ್ಕದವರನ್ನು ವಿಚಾರಿಸಿದಾಗ ಜಯರಾಮ್ ಮಣಿಯಾಣಿ ಅವರ ವಕೀಲರ ಕಚೇರಿಯ ಬೀಗ ಮುರಿದು ಕಳ್ಳರು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ಬಳಿಕ ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟೆಂಟ್ ಕಚೇರಿಯ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ಬಳಿಕ ಜಿತೇಶ್ ಕೆ. ಅವರ ವಕೀಲರ ಕಚೇರಿಯ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ನಂತರ ಶಿವಪ್ರಸಾದ್ ಪಿ. ರಾವ್‌ರವರ ಶಬರಿ ಎಂಟರ್‌ಪ್ರೈಸಸ್‌ನ ಶಟರ್ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ನಂತರ ಮೊದಲನೇ ಮಹಡಿಯಲ್ಲಿರುವ ಕೆ. ರಾಮಚಂದ್ರ ಗೌಡ ಅವರ ವಕೀಲರ ಕಚೇರಿಯ ಬಾಗಿಲಿನ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಎಂದು ಎಫ್‌ಐಆರ್ ದಾಖಲಿಸಲಾಗಿತ್ತು.

ಉಪ್ಪಿನಂಗಡಿಯಲ್ಲಿಯೂ ಸರಣಿ ಕಳವು ನಡೆದಿತ್ತು: ಮೇ. ೧೫ರಂದು ಉಪ್ಪಿನಂಗಡಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದಲ್ಲಿಯೂ ಅಂತರಾಜ್ಯ ಕಳ್ಳ ಜಯಕುಮಾರ್ ಭಾಗಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪ್ಪಿನಂಗಡಿ ಪೇಟೆಯ ಹೃದಯ ಭಾಗದಲ್ಲಿರುವ ಮಕ್ಕಳ ತಜ್ಞ ಡಾ.ಎಂ.ಎನ್. ಭಟ್ ಅವರ ಕ್ಲಿನಿಕ್‌ನ ಬೀಗ ಮುರಿದು ೫೫ ಸಾವಿರ ರೂ., ಇದರ ಎದುರು ಭಾಗದಲ್ಲಿರುವ ನೋಟರಿ ವಕೀಲ ಅರವಿಂದ ಭಂಡಾರಿ ಅವರ ಕಚೇರಿಯ ಬೀಗ ಮುರಿದು ೧೬,೫೦೦ ರೂ. ಹಣವನ್ನು ಕಳವುಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಅದೇ ಕಟ್ಟಡದಲ್ಲಿರುವ ಡಾ. ರಾಜಾರಾಮ ಕೆ.ಬಿ. ಅವರ ದಂತ ಚಿಕಿತ್ಸಾಲಯಕ್ಕೂ ನುಗ್ಗಿ ವೈದ್ಯರ ಟೇಬಲ್‌ನ ಡ್ರಾಯರ್ ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದ. ಅಲ್ಲದೆ ಅಲ್ಲೇ ಸಮೀಪದಲ್ಲಿರುವ ಡಾ. ಗೋವಿಂದ ಪ್ರಸಾದ್ ಕಜೆ ಅವರ ಕ್ಲಿನಿಕ್‌ನ ಒಂದು ಬೀಗ ಮುರಿದು ಇನ್ನೊಂದು ಬೀಗವನ್ನು ತೆಗೆಯಲು ಸಾಧ್ಯವಾಗದೆ ಅಲ್ಲಿಂದ ತೆರಳಿದ್ದ. ಈ ಎಲ್ಲಾ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ಬೆಳ್ತಂಗಡಿ ಉಪವಿಭಾಗದ ಬೆಳ್ತಂಗಡಿ, ಉಪ್ಪಿನಂಗಡಿ, ಉಜಿರೆ ಇತ್ಯಾದಿ ಕಡೆಗಳಲ್ಲಿ ನಡೆದಿದ್ದ ಕಳವು ಕೃತ್ಯವನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ನಡೆಸುತ್ತಿದ್ದರು. ಗುರುವಾಯನಕೆರೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾದ ವ್ಯಕ್ತಿಯನ್ನು ಸಂಶಯದ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಆತ ತಾನು ಕೊಯಮುತ್ತೂರಿನ ಜಯಕುಮಾರ್ ಎಂದು ತಿಳಿಸಿದ್ದು ಆತನನ್ನು ವಿಚಾರಣೆಗೊಳಪಡಿಸಿದಾಗ ಕಳವು ಕೃತ್ಯ ಬಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಉಜಿರೆ ಗ್ರಾಮದ ಬೆಳಾಲು ಕ್ರಾಸ್ ಬಳಿ ಇರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿಯೂ ಜಯಕುಮಾರ್ ಕಳವು ನಡೆಸಿದ್ದ ಎಂದು ತಿಳಿದು ಬಂದಿದೆ. ಉಜಿರೆಯ ಸುಪ್ರೀಮ್ ಲಾಡ್ಜ್ ಕೆಳಭಾಗದಲ್ಲಿರುವ ಜನೌಷಧಿ ಕೇಂದ್ರವನ್ನು ಗುರಿಯಾಗಿಸಿಕೊಂಡ ಒಬ್ಬಂಟಿ ಕಳ್ಳ ಮೇ. ೨೯ರ ರಾತ್ರಿ ೧೨:೪೦ರಿಂದ ಮೇ ೩೦ರ ಬೆಳಗ್ಗೆ ೮ ಗಂಟೆಯ ನಡುವಿನ ಅವಧಿಯಲ್ಲಿ ಶಟರ್ ಬೀಗ ಮುರಿದು ಒಳ ನುಗ್ಗಿದ್ದ. ಕೌಂಟರ್‌ನಲ್ಲಿದ್ದ ಕ್ಯಾಶ್ ಡ್ರಾವರ್ ಒಡೆದು ವ್ಯವಹಾರದ ಕಲೆಕ್ಷನ್ ಹಣವಾದ ಒಟ್ಟು ೯೮,೪೬೦ ರೂಪಾಯಿಯನ್ನು ಹೊತ್ತೊಯ್ದಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಬೆಳ್ತಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಳ್ಳನ ಪತ್ತೆಗಾಗಿ ಮಂಗಳೂರಿನಿಂದ ಶ್ವಾನ ದಳ ಹಾಗೂ ಬೆರಳಚ್ಚು ವಿಭಾಗದ ತಜ್ಞ ಅಧಿಕಾರಿಗಳನ್ನು ಕರೆಸಲಾಗಿತ್ತು. ಜನೌಷಧಿ ಕೇಂದ್ರದ ಮ್ಯಾನೇಜರ್ ಅನಿತಾ ಅವರು ಮೇ. ೩೦ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿ ಕಳ್ಳನ ಪತ್ತೆಗೆ ಬಲೆ ಬೀಸಲಾಗಿತ್ತು.

ಸ್ಥಳ ಮಹಜರು: ಜಯಕುಮಾರ್‌ಗೆ ನ್ಯಾಯಾಂಗ ಬಂಧನ: ಕಳವು ಕೃತ್ಯ ನಡೆದಿರುವ ಬೆಳ್ತಂಗಡಿ, ಉಜಿರೆ ಮತ್ತು ಉಪ್ಪಿನಂಗಡಿಯಲ್ಲಿ ಬಂಧಿತ ಜಯಕುಮಾರ್ ಉಪಸ್ಥಿತಿಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬಂಧಿತ ಜಯಕುಮಾರ್ ಕಳವು ಮಾಡಿರುವ ಹಣವನ್ನು ಆತನಿಂದ ವಶಕ್ಕೆ ಪಡೆಯಲು ಬಾಕಿಯಿದೆ. ವಿಚಾರಣೆ ಪೂರ್ಣಗೊಳಿಸಿದ ಬಳಿಕ ಜಯಕುಮಾರ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

LEAVE A REPLY

Please enter your comment!
Please enter your name here