ಅಜಿಕುರಿ ರಸ್ತೆ ತಕ್ಷಣ ದುರಸ್ತಿಗೆ ಆಗ್ರಹ: ರಸ್ತೆ ತಡೆ ನಡೆಸಿ ಪ್ರತಿಭಟನೆದುರಸ್ತಿಯಾಗದೇ ಇದ್ದರೆ ಚುನಾವಣೆ ಬಹಿಷ್ಕಾರ-ಪ್ರತಿಭಟನಾಕಾರರ ಎಚ್ಚರಿಕೆ

0

ಧರ್ಮಸ್ಥಳ: ಕಳೆದ ಹಲವು ವರ್ಷಗಳಿಂದ ಹದಗೆಟ್ಟಿರುವ ಅಜಿಕುರಿ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಜು.೭ರಂದು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ರಸ್ತೆ ಇಲ್ಲದಿದ್ದರೆ ಮತವೂ ಇಲ್ಲ ಎಂದು ಘೋಷಣೆ ಮೊಳಗಿಸಿದ ಪ್ರತಿಭಟನಾಕಾರರು ರಸ್ತೆ ದುರಸ್ತಿಯಾಗದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಳೆಯಲ್ಲಿಯೇ ಪ್ರತಿಭಟನೆ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಸಮೀಪದ ಅಜಿಕುರಿ ಮುಖ್ಯರಸ್ತೆ ಕಳೆದ ಐದಾರು ವರ್ಷಗಳಿಂದ ಹಳ್ಳ ಗುಂಡಿಮಯವಾಗಿದೆ. ಇದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ೨೦೧೦ರಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ನಿರ್ಮಾಣಗೊಂಡ ಈ ರಸ್ತೆ ಇದೀಗ ಸಂಪೂರ್ಣ ಹಾಳಾಗಿದೆ. ಈ ರಸ್ತೆ ಬಗ್ಗೆ ಜು.೪ರಂದು ಸುದ್ದಿ ನ್ಯೂಸ್ ವಿಸ್ತತ ವರದಿ ಮಾಡಿತ್ತು. ರಸ್ತೆ ಗುಂಡಿಗಳ ಬಗ್ಗೆ ಗ್ರಾಮಸ್ಥರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿವರಿಸಲಾಗಿತ್ತು. ಈ ಸಮಸ್ಯೆಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕಳೆದ ವರ್ಷವೂ ಬಾಳೆ ಗಿಡ ನೆಟ್ಟು ಗ್ರಾಮಸ್ಥರು ಪ್ರತಿಭಟನೆ ಕೈಗೊಂಡಿದ್ದರು. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಈ ಬಾರಿ ಮತ್ತೆ ಜು.೭ರಂದು ಪ್ರತಿಭಟನೆ ನಡೆಸಲಾಗಿದೆ.
ಜತೆಗೆ ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಮಳೆಯಲ್ಲಿಯೇ ನಿಂತು ಪ್ರತಿಭಟಿಸಿದ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಹಶೀಲ್ದಾರ್, ಶಾಸಕರು ಬರುವಂತೆ ಆಗ್ರಹ ವ್ಯಕ್ತಪಡಿಸಿದರು.
ಪಿಡಿಒ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ಪಿಡಿಒ ಗಾಯತ್ರಿ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಮಸ್ಯೆಗಳ ಕುರಿತು ವಿಚಾರಿಸಿದರು. ಬಳಿಕ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಕಿರಿಯ ಅಭಿಯಂತರ ದಶರಥ್ ವಿ. ಕುಂಬಾರ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿದರು.
ಗ್ರಾಮಸ್ಥರು ಅವರನ್ನು ರಸ್ತೆ ಉದ್ದಕ್ಕೂ ಕರೆದುಕೊಂಡು ಹೋಗಿ ಹಳ್ಳ-ಗುಂಡಿಗಳನ್ನು ತೋರಿಸಿದರು. ಅಧಿಕಾರಿಗಳು ರಸ್ತೆ ಸರಿಪಡಿಸುವ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆಯನ್ನು ಹಿಂಪಡೆದರು.
ಆದರೆ ನೀಡಿದ ಭರವಸೆಯಂತೆ ಶೀಘ್ರದಲ್ಲೇ ಕಾಮಗಾರಿ ಆರಂಭವಾಗದಿದ್ದರೆ ಮತ ಬಹಿಷ್ಕಾರ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತಾತ್ಕಾಲಿಕ ಕಾಮಗಾರಿ: ಇದು ಬಹಳ ದೊಡ್ಡದಾದ ರಸ್ತೆ. ಇದರ ಸಂಪೂರ್ಣ ಅಭಿವೃದ್ಧಿ ಮಾಡಲು ಗ್ರಾ.ಪಂ.ನಲ್ಲಿ ಅನುದಾನದ ಕೊರತೆ ಇದೆ. ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ನಾವು ಮನವಿ ಮಾಡುತ್ತೇವೆ. ಇನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ರಸ್ತೆಯ ಬದಿಯ ಕಣಿಗಳನ್ನು ತೆರವುಗೊಳಿಸಿ ಚರಳು ಕಲ್ಲು ಹಾಕುವ ತಾತ್ಕಾಲಿಕ ಕಾಮಗಾರಿ ಕೈಗೊಳ್ಳುತ್ತೇವೆ. -ಗಾಯತ್ರಿ., ಪಿಡಿಒ ಧರ್ಮಸ್ಥಳ ಗ್ರಾ.ಪಂ.

ಕಾಮಗಾರಿ ಆರಂಭ: ಈ ರಸ್ತೆಯ ಸಮಸ್ಯೆಯನ್ನು ಪರಿಶೀಲನೆ ಮಾಡಿzನೆ. ಸರ್ಕಾರದಿಂದ ನಮಗೆ ಸರಿಯಾದ ಅನುದಾನ ಬಾರದೆ ಇಷ್ಟು ವರ್ಷದಿಂದ ಯಾವುದೇ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಆದರೆ ಇಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹಾಗಾಗಿ ನಾಳೆಯೇ ಜೆಸಿಬಿ ಯಂತ್ರವನ್ನು ತರಿಸಿ ಕಣಿಗಳನ್ನು ತೆರವುಗೊಳಿಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು. -ದಶರಥ ವಿ. ಕುಂಬಾರ
ಕಿರಿಯ ಅಭಿಯಂತರ, ಜಿ.ಪಂ. ಎಂಜಿನಿಯರಿಂಗ್ ವಿಭಾಗ

LEAVE A REPLY

Please enter your comment!
Please enter your name here