






ಬೆಳ್ತಂಗಡಿ ಜುಲೈ 01: ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಂತ ತರೇಸಾ ಪದವಿ ಪೂರ್ವ ಸಂಯುಕ್ತ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಮಾದಕ ದ್ರವ್ಯ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಬೆಳ್ತಂಗಡಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಕಿಶೋರ್ ಪಿ ಯವರು ಮಾದಕ ದ್ರವ್ಯಗಳ ಬಳಕೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.


ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಲ್ಲದೆ, ಅನುಮಾನಾಸ್ಪದ ಮಾದಕ ದ್ರವ್ಯ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಮೋಲಿ ಡಿಕುನ್ಹ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ತಮ್ಮ ಸಂದೇಹಗಳಿಗೆ ಉತ್ತರಗಳನ್ನು ಪಡೆದರು. ಕಾರ್ಯಕ್ರಮವು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳು ಇಂತಹ ಅರಿವು ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪನ್ಯಾಸಕಿ ಝಿಟಾರವರು ನಿರೂಪಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.









