







ಬೆಳ್ತಂಗಡಿ: ನ್ಯಾಯಾಲಯದಿಂದ ಒಂದು ತಿಂಗಳ ಕಾರಾಗೃಹ ಶಿಕ್ಷೆಯ ಆದೇಶಕ್ಕೆ ಒಳಗಾದ ಬಳಿಕ ತಲೆ ಮರೆಸಿಕೊಂಡು ಭೂಗತರಾಗಿರುವ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ವಿಠಲ ಗೌಡ ಅವರ ಬಂಧನಕ್ಕೆ ಬೆಂಗಳೂರು ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಜೂ.೨೭ರಂದು ವಿವಿಧೆಡೆ ವ್ಯಾಪಕ ಶೋಧ ನಡೆಸಿದ್ದಾರೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡದಂತೆ ನಿರ್ಬಂಧ ವಿಧಿಸಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಸಿದಕ್ಕಾಗಿ ಕು. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರ ಸಹೋದರ ವಿಠಲ ಗೌಡ ಅವರಿಗೆ ಬೆಂಗಳೂರು ನ್ಯಾಯಾಲಯ ಒಂದು ತಿಂಗಳ ಸಜೆ ವಿಧಿಸಿ ನಾಲ್ಕು ತಿಂಗಳ ಹಿಂದೆ ಆದೇಶ ನೀಡಿತ್ತು. ಬಳಿಕ ತಲೆ ಮರೆಸಿಕೊಂಡಿರುವ ವಿಠಲ ಗೌಡ ಸ್ಥಳೀಯ ಪೋಲೀಸರಿಗೂ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ಆದ್ದರಿಂದ ವಿಠಲ ಗೌಡ ಅವರ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಜೂ.೨೭ರಂದು ಬೆಂಗಳೂರಿನಿಂದ ಕೋರ್ಟ್ ಅಧಿಕಾರಿಗಳೊಂದಿಗೆ ಆಗಮಿಸಿದ ಪೊಲೀಸರು ವಿವಿಧೆಡೆ ಶೋಧ ನಡೆಸಿದ್ದಾರೆ.
ವಿಠಲ ಗೌಡ ಅವರ ಮನೆ, ಕುಸುಮಾವತಿಯವರ ಮನೆ ಮತ್ತು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆ ಸಹಿತ ಹಲವೆಡೆ ಶೋಧ ನಡೆಸಿ ವಿಠಲ ಗೌಡರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಆದರೆ ವಿಠಲ ಗೌಡ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಬರಿಗೈಯಲ್ಲಿ ಮರಳಿದ್ದಾರೆ. ಬೆಂಗಳೂರು ನ್ಯಾಯಾಲಯ ತನಗೆ ಕಾರಾಗ್ರಹ ಶಿಕ್ಷೆ ವಿಧಿಸಿ ನೀಡಿರುವ ಆದೇಶ ಪ್ರಶ್ನಿಸಿ ವಿಠಲ ಗೌಡ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.









