







ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ಸಂಭೋಳ್ಯದ ಬಾಲಕ ಸುಮಂತ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರಿಗೆ ಮಂಪರು ಪರೀಕ್ಷೆಯ ಅಸ್ತ್ರ ಪ್ರಯೋಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ತಮ್ಮ ಎಲ್ಲಾ ಸಾಮರ್ಥ್ಯ ಪ್ರದರ್ಶಿಸಿದ್ದರೂ ಇದುವರೆಗೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಸಣ್ಣಪುಟ್ಟ ಮಾಹಿತಿಗಳನ್ನೂ ಬಿಡದೆ ಜಾಲಾಡಿದರೂ ಪೊಲೀಸರಿಗೆ ಯಾವುದೇ ಕುರುಹು ಇದುವರೆಗೆ ದೊರಕಿಲ್ಲ. ಹಾಗಾಗಿ ಕೊನೇಯ ಅಸ್ತ್ರ ಎಂಬಂತೆ ಮಂಪರು ಪರೀಕ್ಷೆಯ ಮೊರೆ ಹೋಗಲು ಇಲಾಖೆ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.
ಕೋರ್ಟ್ ಮೊರೆ ಹೋಗಲು ತನಿಖಾಧಿಕಾರಿ ಸಿದ್ಧತೆ: ಬೆಳ್ತಂಗಡಿ ತಾಲೂಕಿನ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜ.೧೪ರಂದು ಮುಂಜಾನೆ ಧನುಪೂಜೆಗೆ ತೆರಳಿದ್ದ ಗೇರುಕಟ್ಟೆ ಸಮೀಪದ ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿ ಸುಮಂತ್(೧೫) ಅವರ ಸಂಶಯಾಸ್ಪದ ಸಾವಿನ ಪ್ರಕರಣದ ನಿಗೂಢತೆ ಬಯಲಿಗೆಳೆಯಲು ಪೊಲೀಸ್ ಇಲಾಖೆ ಹರಸಾಹಸ ಪಟ್ಟಿದೆ. ಆದರೂ ಈ ಕೇಸ್ ನಿಗೂಢವಾಗಿಯೇ ಮುಂದುವರಿದಿದೆ. ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ೯ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಪ್ರತಿಭಾನ್ವಿತ ಬಾಲಕ ಸುಮಂತ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂಬ ಸಂಶಯದ ಆಧಾರದಲ್ಲಿ ತಂಡ ರಚಿಸಿ ತನಿಖೆ ನಡೆಸಿದ್ದ ಪೊಲೀಸ್ ಇಲಾಖೆ ಯಾವುದೇ ಫಲಿತಾಂಶ ದೊರಕದೆ ನಿರಾಶೆಗೊಳಗಾಗಿದೆ. ಪ್ರಾಣಿಗಳ ದಾಳಿಗೆ ಆತ ಬಲಿಯಾಗಿರುವ ಸಾಧ್ಯತೆ ಕಡಿಮೆ ಇದೆ ಎಂದು ಇಲಾಖೆ ಈಗಾಗಲೇ ಮೇಲ್ನೋಟಕ್ಕೇ ಕಂಡುಕೊಂಡಿದೆ.


ಆಕಸ್ಮಿಕವಾಗಿ ಆತನ ಮೇಲಿನ ಹೊಡೆತ ಆಯ ತಪ್ಪಿ ತಲೆಗೆ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಬಾವಿಗೆ ಯಾರಾದರೂ ಎಸೆದರೇ ಎಂಬ ಶಂಕೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಆಸುಪಾಸಿನಲ್ಲಿ ಆ ಬಗ್ಗೆ ಸಣ್ಣ ಸುಳಿವೂ ದೊರೆತಿಲ್ಲ. ಪ್ರಾಣಿ ದಾಳಿ ಮಾಡಿದಾಗ ರಕ್ಷಣೆಗಾಗಿ ಆತ ಕೆರೆಯ ಬಳಿ ಹೋದಾಗ ನೀರಿಗೆ ಬಿದ್ದು ಮೃತಪಟ್ಟನೇ, ತಲೆಗೆ ತೆಂಗಿನಕಾಯಿ ಬಿದ್ದು ಗಾಯಗೊಂಡ ಆತ ಜೀವನ್ಮರಣ ಹೋರಾಟದೊಂದಿಗೆ ಕೆರೆಯ ಬಳಿ ಹೋದಾಗ ಕೊನೆಯುಸಿರೆಳೆದನೇ ಎಂಬ ನಿಟ್ಟಿನಲ್ಲಿ ತನಿಖೆ ನಡೆದರೂ ಅದಕ್ಕೆ ಪುಷ್ಠಿ ಒದಗಿಸುವ ದಾಖಲೆಗಳು ಈವರೆಗೆ ಸಿಕ್ಕಿಲ್ಲ. ಯಾರದ್ದೋ ಅನೈತಿಕ ಚಟುವಟಿಕೆಯನ್ನು ಕಣ್ಣಾರೆ ಕಂಡಿದ್ದರಿಂದ ಸುಮಂತ್ನನ್ನು ಕೊಲೆ ಮಾಡಿರಬಹುದೇ ಎಂದು ತನಿಖೆ ನಡೆಸಿದ್ದ ಪೊಲೀಸರು ಹಲವರ ಮೊಬೈಲ್ ಫೋನ್ಗಳ ಕರೆ ವಿವರ ಮತ್ತು ವಾಟ್ಸಾಪ್ ಸಂದೇಶಗಳನ್ನು ಜಾಲಾಡಿದರೂ ಅವರಿಗೆ ಬೇರೆ ಬೇರೆ ಮಾಹಿತಿ ಸಿಕ್ಕಿದೆಯಾದರೂ ಸುಮಂತ್ಗೆ ಸಂಬಂಧಿಸಿದ ಯಾವ ಸಣ್ಣ ಮಾಹಿತಿಯೂ ಸಿಕ್ಕಿಲ್ಲ. ಕೃತ್ಯದ ಹಿಂದೆ ಯಾವುದೇ ವೈಷಮ್ಯದ ಕಾರಣ ಇರಬಹುದೇ ಎಂಬ ಕೋನದಲ್ಲಿ ಪೊಲೀಸ್ ತನಿಖೆ ನಡೆದಿದ್ದರೂ ಅಂತಹ ವೈಷಮ್ಯ ಸುಮಂತ್ ಮೇಲಾಗಲೀ, ಅವರ ಮನೆಯವರ ಮೇಲಾಗಲೀ ಯಾರಿಗೂ ಇಲ್ಲ ಎಂಬುದು ಖಚಿತವಾಗಿದೆ.
ಅಕ್ಕಪಕ್ಕದ ಸಿ.ಸಿ. ಕೆಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರೂ ತಮ್ಮಲ್ಲಿರುವ ಎಲ್ಲಾ ಸಾಮರ್ಥ್ಯಗಳನ್ನು ಪಣಕ್ಕಿಟ್ಟು ಪೊಲೀಸರು ತನಿಖೆ ನಡೆಸಿದ್ದರೂ ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆರಂಭದಲ್ಲಿ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ್ ಅವರು ವರ್ಗಾವಣೆಗೊಂಡ ಬಳಿಕ ತನಿಖಾಧಿಕಾರಿಯಾಗಿರುವ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಅವರು ಕಡತಗಳನ್ನು ಪರಿಶೀಲನೆ ನಡೆಸಿ ಹಲವು ಆಯಾಮಗಳಲ್ಲಿ ನೋಡಿದರೂ ಯಾವುದೇ ಕ್ಲೂ ಸಿಕ್ಕಿಲ್ಲ. ಕೇರಳದ ಕಾಸರಗೋಡಿನ ಬಾಯಾರಿನಿಂದ ಕಳೆದ ೧೩ ವರ್ಷಗಳ ಹಿಂದೆ ಆಗಮಿಸಿ ಓಡಿಲ್ನಾಳ ಗ್ರಾಮದ ಸಂಭೋಳ್ಯದಲ್ಲಿ ನೆಲೆಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಸುಬ್ರಹ್ಮಣ್ಯ ನಾಯಕ್ ಮತ್ತು ರತ್ನಾವತಿ ದಂಪತಿಯ ಮೂರು ಮಕ್ಕಳ ಪೈಕಿ ಎರಡನೇಯವರಾಗಿರುವ ಸುಮಂತ್ ಅವರ ನಿಗೂಢ ಸಾವಿನ ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸುವಂತೆ ಖುದ್ದು ಗೃಹ ಸಚಿವರು ಸೂಚಿಸಿದ್ದರೂ ಯಾವುದೇ ಸಾಧನೆಯಾಗಿಲ್ಲ.
ಸುಮಂತ್ ಅವರ ಮನೆಯವರು, ಸಂಬಂಧಿಕರು, ನೆರೆ ಹೊರೆಯವರು, ಶಾಲೆಯವರು, ಹಲವು ಸಂಶಯಿತ ವ್ಯಕ್ತಿಗಳು, ಆತನೊಂದಿಗೆ ಧನುಪೂಜೆಗೆ ಹೋಗುತ್ತಿದ್ದ ಸ್ನೇಹಿತರಾದ ಪಕ್ಕದ ಮನೆಯ ಮನ್ವಿತ್, ತನುಷ್, ಕಾರ್ತಿಕ್ ಸೇರಿದಂತೆ ಹಲವರಿಂದ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ಹಲವರ ಮೊಬೈಲ್ ಫೋನ್, ಲ್ಯಾಪ್ಟಾಪ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೂ ಯಾವುದೇ ಫಲಿತಾಂಶ ದೊರಕಿಲ್ಲ. ಸುಮಂತ್ ಅವರ ಹೆತ್ತವರು ಗೃಹ ಸಚಿವರು ಸಹಿತ ಹಲವರನ್ನು ಭೇಟಿಯಾಗಿ ಸಮಗ್ರ ತನಿಖೆ ನಡೆಸಿ ಹಂತಕರನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಎಲ್ಲಾ ಬೆಳವಣಿಗೆಗಳು ಪೊಲೀಸ್ ಇಲಾಖೆಗೆ ಹಿನ್ನಡೆ ಆಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೊನೇಯ ಅಸ್ತ್ರವಾಗಿ ಶಂಕಿತರ ಮಂಪರು ಪರೀಕ್ಷೆ ನಡೆಸಲು ಇಲಾಖೆ ಸಿದ್ಧವಾಗಿದೆ. ಈ ಕುರಿತು ಅನುಮತಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತನಿಖಾಧಿಕಾರಿ ಮುಂದಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆದರೆ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.









