ಉಜಿರೆ: ಕೊಳಚೆ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ-ಗ್ರಾಮ ಪಂಚಾಯತ್‌ನಿಂದ ಸಕ್ಕಿಂಗ್ ಕಾರ್ಯಾಚರಣೆ

0

ಉಜಿರೆ: ಉಜಿರೆ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕೆಳಗಿನ ಪೆಟ್ರೋಲ್ ಬಂಕ್ ಸಮೀಪ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದ್ದ ಸಮಸ್ಯೆಗೆ ಉಜಿರೆ ಗ್ರಾಮ ಪಂಚಾಯತ್ ತ್ವರಿತ ಸ್ಪಂದನೆ ನೀಡಿದೆ.

ಸಮಸ್ಯೆ ಕುರಿತು ಸಾರ್ವಜನಿಕರು ಮತ್ತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಉಜಿರೆ ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಅವರ ನೇತೃತ್ವದಲ್ಲಿ ಸಕ್ಕಿಂಗ್ ಯಂತ್ರದ ಮೂಲಕ ಚರಂಡಿಯಲ್ಲಿ ನಿಂತಿದ್ದ ಕೊಳಚೆ ನೀರನ್ನು ತೆರವುಗೊಳಿಸುವ ಕಾರ್ಯ ನಡೆಸಲಾಯಿತು.

ಚರಂಡಿಯಲ್ಲಿ ನೀರು ನಿಂತ ಪರಿಣಾಮ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ವ್ಯಕ್ತವಾಗಿತ್ತು. ಅಷ್ಟು ಮಾತ್ರವಲ್ಲದೆ ಹತ್ತಿರದಲ್ಲಿಯೇ ಇರುವ ವಾಣಿಜ್ಯ ಸಂಕೀರ್ಣಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ, ಮಳೆ ಬಂದಾಗ ನೀರು ರಸ್ತೆ ಮೇಲೆ ಹರಿಯುತ್ತದೆ. ವಾಣಿಜ್ಯ ಸಂಕೀರ್ಣಕ್ಕೆ ಬೇಕಾದ ಸರಕು ಸಾಮಾನುಗಳನ್ನು ತರುವ ವಾಹನಗಳಿಗೆ ಬರಲು ಕಷ್ಟವಾಗುತ್ತದೆ ಎಂಬ ದೂರುಗಳು ಕೇಳಿ ಬಂದಿತ್ತು.

ಸಮೀಪದಲ್ಲೇ ಶಾಲೆ ಇರುವುದರಿಂದ ಚರಂಡಿ ನೀರಿನಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿ ನ್ಯೂಸ್ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಉಜಿರೆ ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಪ್ರವೃತ್ತರಾಗಿ, ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸಕ್ಕಿಂಗ್ ಯಂತ್ರದ ಮೂಲಕ ನೀರು ತೆರವುಗೊಳಿಸಿರುವುದರಿಂದ ದುರ್ವಾಸನೆ ಹಾಗೂ ಆರೋಗ್ಯ ಸಮಸ್ಯೆಯ ಭೀತಿ ತಾತ್ಕಾಲಿಕವಾಗಿ ನಿವಾರಣೆಯಾಗಿದೆ. ಸ್ಥಳೀಯರು ಗ್ರಾಮ ಪಂಚಾಯತ್ ಹಾಗೂ ಪಿಡಿಒ ಅವರ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಚರಂಡಿ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಸ್ವಚ್ಛತೆ ಮಾಡಿಸಲಾಗಿದೆ: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಮಲಿನ ನೀರು ಹಾದುಹೋಗುವ ಚರಂಡಿಗಳ ಕೆಲಸ ಅಪೂರ್ಣವಾಗಿದೆ. ಹೀಗಾಗಿ ಅಲ್ಲಲ್ಲಿ ಮಳೆ ನೀರು ಜೊತೆ ಕೊಳಚೆ ನೀರು ಸೇರಿಕೊಂಡು ವಾಸನೆ ಬರಲು ಆರಂಭವಾಗಿದೆ, ಅದನ್ನು ಗ್ರಾ.ಪಂ ಪರಿಶೀಲನೆ ಮಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವವರಿಗೆ ತಿಳಿಸಿzನೆ. ಅವರಿಂದ ಕಾಮಗಾರಿ ಆರಂಭಿಸಲಾಗಿದೆ. ಹಾಗೆಯೇ ಪಂಚಾಯತ್‌ನಿಂದ ಸಕ್ಕಿಂಗ್ ಯಂತ್ರದ ಮೂಲಕ ಸ್ವಚ್ಛತಾ ಕೆಲಸ ಮಾಡಿಸಲಾಗಿದೆ. -ಪ್ರಕಾಶ್ ಶೆಟ್ಟಿ ನೊಚ್ಚ, ಪಿಡಿಒ, ಉಜಿರೆ ಗ್ರಾ.ಪಂ.

ಬೇಸತ್ತು ಹೋಗಿzವೆ: ಮಳೆ ಇಲ್ಲದೆ ವಾರವಾದರೂ ಇಲ್ಲಿ ಮಾತ್ರ ಕೊಳಚೆ ನೀರು ಬರುತ್ತಿದೆ. ಇದು ಯಾವುದೋ ಕಟ್ಟಡದ ಅಥವಾ ಮನೆಯ ಕೊಳಚೆ ನೀರು. ಅಲ್ಲಿಂದಲೇ ಸರಿ ಮಾಡಬೇಕು. ನಾವು ಇಲ್ಲಿನ ಚರಂಡಿಯಿಂದ ಬರುವ ಕೆಟ್ಟ ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿzವೆ. – ವೀರಸಿಂಹ ಬಾಳಿಗ.,ಸ್ಥಳೀಯರು

LEAVE A REPLY

Please enter your comment!
Please enter your name here