ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸಾಧಕರಿಗೆ ಅಭಿನಂದನೆ, ಸನ್ಮಾನ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

0

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆಯಲ್ಲಿ ಜೂ25 ರಂದು ಗುರುವಾರ ಪೂರ್ವಾಹ್ನ 10 ಗಂಟೆಗೆ ಶಾಲೆಯ ಎಸ್.ಡಿ.ಎಂ.ಸಿ., ಹಿರಿಯ ವಿದ್ಯಾರ್ಥಿ ಸಂಘ, ಗ್ರಾಮ ಪಂಚಾಯತ್ ಕಾಶಿಪಟ್ಣ ಹಾಗೂ ಊರಿನ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಅಭಿನಂದನೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಹಾಗೂ ಉಚಿತ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

2025–26ನೇ ಸಾಲಿನ ಎಸ್.ಎಸ್.ಎಲ್.ಸಿ. ಸಾರ್ವಜನಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಹಾಗೂ ಸತತ ಮೂರನೇ ಬಾರಿ ಶಾಲೆಯಲ್ಲಿ 100% ಫಲಿತಾಂಶ ಬರಲು ಶ್ರಮಿಸಿದ ಶಾಲಾ ಶಿಕ್ಷಕ ವೃಂದವನ್ನು ಈ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ಇದೇ ವೇಳೆ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಶ್ರೀಯುತ ದೇವದಾಸ್ ನಾಯಕ್ ಮತ್ತು ಶ್ರೀಮತಿ ಸೌಮ್ಯ ಕೆ. ಇವರನ್ನು ಶಾಲಾ ಸಮಿತಿ ಹಾಗೂ ಊರವರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.ಉಚಿತ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರ ವಿತರಣೆ:ಶ್ರೀ ಸತ್ಯ ದೇವತಾ ದೈವಸ್ಥಾನ ಅಳದಂಗಡಿ ಮತ್ತು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಜೊತೆಗೆ ವಿವಿಧ ದಾನಿಗಳಿಂದ ಶಾಲಾ ಮಕ್ಕಳಿಗೆ ಅಗತ್ಯವಿರುವ ವಿವಿಧ ಶೈಕ್ಷಣಿಕ ಪರಿಕರಗಳನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸತ್ಯ ದೇವತಾ ದೈವಸ್ಥಾನ ಅಳದಂಗಡಿ ಇದರ ಆಡಳಿತದಾರರಾದ ಶಿವಪ್ರಸಾದ ಅಜಿಲರು, “ಕಠಿಣ ಪರಿಶ್ರಮವೇ ಯಶಸ್ಸಿನ ಹೆಬ್ಬಾಗಿಲು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ, ಶುಭ ಹಾರೈಸಿದರು.

ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ:ವೇದಿಕೆಯಲ್ಲಿ ಮೂಡುಬಿದರೆಯ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಶ್ರೀಯುತ ಹೇಮರಾಜ್ ಜೈನ್ ಬೆಳ್ಳಿಬೀಡು, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಪ್ರಗತಿಪರ ಕೃಷಿಕರಾದ ಮಿತ್ತೊಟ್ಟುಗುತ್ತು ಪಿ.ಕೆ ರಾಜು ಪೂಜಾರಿ, ಶಾಲೆಯ ಸ್ಥಾಪಕ ಅಧ್ಯಕ್ಷರಾದ ಪ್ರವೀಣ್ ಪಿಂಟೋ, ದಾನಿಗಳಾದ ಹಾಸ್ಕೋ ಟ್ರೇಡರ್ಸ್‌ನ ಅಕ್ತರ್ ಅಹಮದ್, ಉದ್ಯಮಿ ಅನಿಲ್ ಅಂಚನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ವೃಂದಾ ಪಿ.ಎಸ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಗೆ ಸದಾ ಸಹಕರಿಸುತ್ತಿರುವ ಪೋಷಕರಾದ ಹಮೀದ್ ಕೆ, ಪ್ರಕಾಶ್, ಸೌಮ್ಯ ಹಾಗೂ ಶಾಲಾ ಕೊಠಡಿಗಳನ್ನು ಅಂದವಾಗಿ ನಿರ್ಮಿಸಿಕೊಟ್ಟ ಶಫೀದ್ ರವರನ್ನು ಗುರುತಿಸಿ ಅಭಿನಂದಿಸಲಾಯಿತು.

ಪೆರಾಡಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿಯಮಿತ ಇದರ ಅಧ್ಯಕ್ಷರು ಹಾಗೂ ಸಹಕಾರ ರತ್ನ ಪ್ರಶಸ್ತಿ ವಿಜೇತರಾದ ಸತೀಶ್ ಕೆ ಕಾಶಿಪಟ್ಣ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಶಾಲೆಯ ಹಿರಿಯ ಶಿಕ್ಷಕಿ ಅನುಲೇಖ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು. ಗಣಿತ ಶಿಕ್ಷಕ ಶ್ರೀ ಶಶಿಧರ್ ಕೆ ಕಾರ್ಯಕ್ರಮ ನಿರೂಪಿಸಿದರೆ, ಗರಡಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷ ಮನೋಜ್ ಕಾಶಿಪಟ್ಣ ಧನ್ಯವಾದ ಸಮರ್ಪಿಸಿದರು. ಶಾಲೆಯ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here