







ಇಂದಬೆಟ್ಟು (ಜೂನ್ 22, 2026): ನವಭಾರತ್ ಗೆಳೆಯರ ಬಳಗ (ರಿ.) ಕಲ್ಲಾಜೆ ಇಂದಬೆಟ್ಟು ಇದರ ವತಿಯಿಂದ ದೇವನಾರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಮಾಹಿತಿ ಕಾರ್ಯಾಗಾರವನ್ನು ಬೆಳ್ತಂಗಡಿಯ ಜನಪ್ರಿಯ ಶಾಸಕ ಹರೀಶ್ ಪೂಂಜಾ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಮಾರ್ಗದರ್ಶನ ನೀಡುತ್ತಿರುವ ನವಭಾರತ್ ಗೆಳೆಯರ ಬಳಗದ ಯುವಕರ ಸಮಾಜಮುಖಿ ಕಾರ್ಯಕ್ಕೆ ತುಂಬು ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳಿದ್ದರೂ, ಈ ವಿಶೇಷ ಜನೋಪಯೋಗಿ ಕಾರ್ಯಕ್ರಮಕ್ಕಾಗಿ ನೇರವಾಗಿ ಆಗಮಿಸಿದ ಶಾಸಕರು, ಬಳಗದ ಸದಸ್ಯರನ್ನು ಅಭಿನಂದಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡಿ, ಭಾಗವಹಿಸಿದ್ದ ಎಲ್ಲಾ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು.



ಕಾರ್ಯಾಗಾರದಲ್ಲಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಉಪ ನಿರೀಕ್ಷಕರಾದ ಕಿಶೋರ್, ಸಿಬ್ಬಂದಿ ಉಮಾಪತಿ, ಬೆಳ್ತಂಗಡಿ ಪೊಲೀಸ್ ಠಾಣೆಯ ಎ.ಎಸ್.ಐ ನಾರಾಯಣ್ ಮತ್ತು ಬೀಟ್ ಪೊಲೀಸ್ ಸಂತೋಷ್ ಅವರು ಭಾಗವಹಿಸಿ, ತಮ್ಮ ವೃತ್ತಿಜೀವನದ ನೈಜ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಪರೀಕ್ಷೆ ಎದುರಿಸುವ ಕುರಿತು ಪ್ರಮುಖ ಮಾಹಿತಿಗಳನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮುಡಾಯಿಬೆಟ್ಟು ಸ.ಹಿ.ಪ್ರಾ ಶಾಲೆಯ ಮುಖ್ಯಶಿಕ್ಷಕರಾದ ಕಿಶೋರ್ ಕುಮಾರ್ ಎಚ್.ಕೆ ಅವರು ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಭಾರತ್ ಗೆಳೆಯರ ಬಳಗದ ಅಧ್ಯಕ್ಷ ಸಂತೋಷ್ ಕುಮಾರ್ ಉಂಬೆಜೆ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಕಾರ್ಯದರ್ಶಿ ನಾಗೇಶ್ ಆಚಾರ್ಯ ಮುಂಡ್ರಬೆಟ್ಟು, ಉಪಾಧ್ಯಕ್ಷ ರಾಜೇಶ್ ಹೆಬ್ಬಾರಪಲ್ಕೆ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ವಿನೋದ್ ಪ್ರಸಾದ್ ಕಲ್ಲಾಜೆ ಅವರು ಸಮಗ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಪರೀಕ್ಷಾಕಾಂಕ್ಷಿ ಯುವಕ-ಯುವತಿಯರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಮುಂದಿನ ದಿನಗಳಲ್ಲೂ ಪರೀಕ್ಷಾರ್ಥಿಗಳಿಗೆ ಆನ್ಲೈನ್ ಅಪ್ಲಿಕೇಷನ್ ಸಲ್ಲಿಕೆ ಹಾಗೂ ದೈಹಿಕ ಪರೀಕ್ಷೆಯ (Physical Test) ತಯಾರಿ ಕುರಿತು ನವಭಾರತ್ ಗೆಳೆಯರ ಬಳಗ (ರಿ.) ಕಲ್ಲಾಜೆ ಇಂದಬೆಟ್ಟು ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಪ್ರಕಟಿಸಿದರು.









