






ಬೆಳ್ತಂಗಡಿ: ವಿದ್ಯಾರ್ಥಿನಿ ಸೌಜನ್ಯ ಪರ ಹೋರಾಟಗಾರರಾಗಿರುವ ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಜೀವ ಬೆದರಿಕೆ ಪ್ರಕರಣದ ತನಿಖೆ ಮುಂದುವರಿಕೆಗೆ ಅನುಮತಿಸಿರುವ ಹೈಕೋರ್ಟ್ ಇದೇ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ ಆರೋಪದ ತನಿಖೆಗೆ ತಡೆಯಾಜ್ಞೆ ನೀಡಿದೆ.
ಘಟನೆಯ ವಿವರ: ಜೀವ ಬೆದರಿಕೆ ಹಾಕಿದ ಮತ್ತು ಸುಳ್ಳು ಸಾಕ್ಷ್ಯ ನೀಡಲು ಬಲವಂತಪಡಿಸಿದ ಆರೋಪದಡಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ನೀಡಿದೆ.


ಅಲ್ಲದೆ ಅರ್ಜಿದಾರ ಮಹೇಶ್ ಶೆಟ್ಟಿ ಸಹಕರಿಸಬೇಕು. ತಪ್ಪಿದರೆ ಪೊಲೀಸರು ಕ್ರಮ ಜರುಗಿಸಬಹುದು ಎಂದು ಮಧ್ಯಂತರ ಆದೇಶ ಮಾಡಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದ್ದಾರೆ. ತಿಮರೋಡಿ ಪರ ವಕೀಲ ಎಂ.ಆರ್. ಬಾಲಕೃಷ್ಣ ಸುಳ್ಯ ಅವರು ವಾದ ಮಂಡಿಸಿ ಈ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ಮೊದಲನೇ ಆರೋಪಿಯಾಗಿದ್ದಾರೆ.
ಈ ಆರೋಪಗಳು ಅವರಿಗೆ ಅನ್ವಯವಾಗದು, ಘಟನೆ ನಡೆದ ೧೬ ದಿನಗಳ ನಂತರ ದೂರು ದಾಖಲಿಸಲಾಗಿದೆ. ದುರುzಶದಿಂದ ತಿಮರೋಡಿ ವಿರುದ್ಧ ದೂರು ದಾಖಲಿಸಲಾಗಿದೆ. ಈ ಪ್ರಕರಣದ ದೂರುದಾರ ಸುಂದರ್ ರೈ ಮಂದಾರ ಪರ ವಕೀಲರು ಅರ್ಜಿದಾರರ ವಿರುದ್ಧ ಹಿಂದೆ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ದೂರುದಾರರನ್ನು ಬೆದರಿಸಲಾಗಿದೆ ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಪ್ರಕರಣವೇನು?: ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ನಿವಾಸಿಯಾಗಿರುವ ಕಲಾವಿದ ಸುಂದರ ರೈ ಮಂದಾರ ಅವರು ೨೦೨೬ರ ಮೇ ೧ರಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ನಾನು ಏ.೧೫ರಂದು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದೂರು ದಾಖಲಿಸಿದ್ದೆ. ಸತೀಶ್ ಕುಮಾರ್ ರೈ ಪಡುಮಲೆ ಎಂಬವರು ನನಗೆ ಕರೆ ಮಾಡಿ ತಿಮರೋಡಿ ಅವರನ್ನು ಸಮರ್ಥಿಸಿಕೊಂಡು ಅವಮಾನವಾಗುವಂತೆ ಮಾತನಾಡಿ ಹೆದರಿಸಿದ್ದರು.
ತಿಮರೋಡಿ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುವಂತೆ ಮತ್ತು ಅವರ ಪರ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ್ದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ ೩೫೧(೨) ಅಡಿ ಜೀವ ಬೆದರಿಕೆ ಹಾಕಿದ ಮತ್ತು ಸೆಕ್ಷನ್ ೨೩೨ ಅಡಿ ಬೆದರಿಕೆ ಹಾಕಿ ವ್ಯಕ್ತಿಯ ಘನತೆಗೆ ಹಾನಿ ಉಂಟು ಮಾಡಿದ ಮತ್ತು ಸುಳ್ಳು ಸಾಕ್ಷ್ಯ ನೀಡಲು ಒತ್ತಾಯಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.








