ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಪ್ರಾಪ್ತಿ ಎಂ ಗೌಡರವರಿಗೆ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸನ್ಮಾನ

0

ಬೆಳ್ತಂಗಡಿ :ಕರ್ನಾಟಕ ಪ್ರೌಢ, ಶಿಕ್ಷಣ ಮಂಡಳಿ ನಡೆಸಿದ S.S.L.C ವಾರ್ಷಿಕ ಪರೀಕ್ಷೆಯಲ್ಲಿ 625/625 ಅಂಕ ಗಳಿಸಿ ಶಾಲೆ, ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಪ್ರಾಪ್ತಿ ಎಂ ಗೌಡ ರವರಿಗೆ ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿದ ಪ್ರೌಢಾ ಶಾಲಾ ಮುಖ್ಯಶಿಕ್ಷಕ ಲಕ್ಷ್ಮೀನಾರಾಯಣ ಕೆ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ ಅವಳ ಪರಿಶ್ರಮ, ಶಿಸ್ತು ಹಾಗೂ ನಿರಂತರ ಪ್ರಯತ್ನವೇ ಈ ಯಶಸ್ಸಿನ ಮೂಲ ಎಂದು ಅಭಿಪ್ರಾಯಪಟ್ಟರು ಮತ್ತು ವಿದ್ಯಾರ್ಥಿನಿಯನ್ನು ಪ್ರಶಂಸಿದರು.

ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಪೋಷಕರಾದ ಮೀನಾಕ್ಷಿಯವರು ವಿದ್ಯಾರ್ಥಿನಿಯ ಕಲಿಕೆಗೆ ಮತ್ತು ಇಂತಹ ಫಲಿತಾಂಶಕ್ಕೆ ಪ್ರೇರೆಪಿಸಿದ ಶಾಲೆಯ ಶಿಕ್ಷಕರನ್ನು ಪ್ರಶಂಸಿದರು.

ತರಗತಿ ಶಿಕ್ಷಕಿ ರೇಷ್ಮಾ ಮಾತನಾಡಿ, ವಿದ್ಯಾರ್ಥಿಯ ಸಾಧನೆಯು ಶಿಕ್ಷಕರಿಗೆ, ಶಾಲೆಗೆ ಕೀರ್ತಿ ತಂದಿರುತ್ತದೆ ಎಂದು ಶುಭ ಹಾರೈಸಿದರು. ಪ್ರಾಪ್ತಿ ಎಂ ಗೌಡಳ ಸಾಧನೆಯು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂಬುದಾಗಿ ವಿದ್ಯಾರ್ಥಿಗಳಾದ ಮಾ. ಪ್ರಸನ್ನ ಕುಮಾರ್, ಕು. ಮಯೂರಿ, ಮಾ. ಸೃಜನ್ ಪೈ, ಮಾ. ಅಂಕಿತ್ ಶೆಟ್ಟಿ ಹಾಗೂ ಕು. ನಿಶಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಧಕಿ ಕು. ಪ್ರಾಪ್ತಿ ಎಂ ಗೌಡ ಮಾತನಾಡಿ, ಕನಸು ಕಾಣುವುದರೊಂದಿಗೆ ತಮ್ಮ ಗುರಿಯೆಡೆಗೆ ಪ್ರತಿನಿತ್ಯ ಹೆಜ್ಜೆ ಇಟ್ಟಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಮತ್ತು ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನ ಈ ಯಶಸ್ಸಿಗೆ ಬಹಳ ಮುಖ್ಯ ಎಂಬುದಾಗಿ ತಿಳಿಸಿ ಪೋಷಕರಿಗೂ ಮತ್ತು ಶಿಕ್ಷಕರಿಗೂ ಧನ್ಯವಾದ ತಿಳಿಸಿದರು.

ವಾಣಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಪೋಷಕ ಮಹಾಬಲ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶಿಕ್ಷಕಿ ಶಾಂತಿ ಪಾಯಾಸ್ ಎಲ್ಲರನ್ನೂ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸುಹಾಸಿನಿ ಎ ವಂದನಾರ್ಪಣೆ ಮಾಡಿದರು. ಹಾಗೂ ಸಹ ಶಿಕ್ಷಕಿ ಮೋಹನಾಂಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here