ಕಣಿಯೂರಿನಲ್ಲಿ ಪ್ರವೀಣ್‌ಗೆ ಹಲ್ಲೆ ಪ್ರಕರಣ-ಪ್ರಜ್ವಲ್ ಕೆ.ವಿ., ರಾಧಾಕೃಷ್ಣರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

0

ಬೆಳ್ತಂಗಡಿ: ಕಣಿಯೂರು ನಿವಾಸಿ ಪ್ರವೀಣ್ ಎಂಬವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ಆರೋಪಿಗಳಾದ ಕಲ್ಮಂಜದ ಪ್ರಜ್ವಲ್ ಕೆ.ವಿ ಹಾಗೂ ಕಣಿಯೂರಿನ ರಾಧಾಕೃಷ್ಣರವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ಒಟ್ಟು ೨೦,೦೦೦ ದಂಡ ವಿಧಿಸಿ ಬೆಳ್ತಂಗಡಿಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರು ಜೂ. ೨ರಂದು ಆದೇಶಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಕಿರಣ್ ಕುಮಾರ್ ಶಿಶಿಲ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಯಲಿದೆ.

ಘಟನೆಯ ವಿವರ: ೨೮-೦೭-೨೦೨೪ರಂದು ಮಧ್ಯಾಹ್ನ ಕಣಿಯೂರು ನಿವಾಸಿ ಪ್ರವೀಣ ಎಂಬವರು ಕಣಿಯೂರಿನ ಅಂಗಡಿಯ ಹೊರಗೆ ಸಿಟ್‌ಔಟ್‌ನಲ್ಲಿ ಕುಳಿತಿದ್ದಾಗ ಅಲ್ಲಿಗೆ ಸ್ವಿಫ್ಟ್ ಕಾರಲ್ಲಿ(ಕೆ.ಎ.-೨೧:ಝಡ್ ೯೬೩೦) ಬಂದ ರಾಧಾಕೃಷ್ಣ, ಪ್ರಜ್ವಲ್ ಕೆ.ವಿ ಮತ್ತು ಕಿರಣ್ ಶಿಶಿಲ ಅವರು ಪ್ರವೀಣರವರ ಅಂಗಡಿಗೆ ಅಕ್ರಮ ಪ್ರವೇಶಗೈದು ಈ ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಭಾರೀ ಪಾತೆರುವನಾ, ನೀನು ಪಂಚಾಯತ್ ಮೆಂಬರ್ ಆದರೆ ನಿನಗಾಯಿತು, ನೀನು ಭಾರಿ ಹಾರಾಡ್ತೀಯಾ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು. ಕಿರಣ್ ಶಿಶಿಲ ಮತ್ತು ಪ್ರಜ್ವಲ್ ಕೆ.ವಿ. ತನ್ನನ್ನುzಶಿಸಿ ಇಂತಹ ಕೇಸ್‌ಗಳು ಈ ಮೊದಲು ನಾವು ತುಂಬಾ ನೋಡಿzವೆ ಎಂದು ಹೇಳಿ ಮುಂದಕ್ಕೆ ಬಾಲ ಬಿಚ್ಚಿದರೆ ತಲವಾರಿನಿಂದ ಕಡಿಯುತ್ತೇವೆಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಪ್ರವೀಣರವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಕಲಂ ೩೨೯ (೪), ೩೫೨, ೧೧೫(೨), ೧೧೮(೧), ೩೫೧ (೨), ಜೊತೆಗೆ ೩ (೫)ನಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಉಪ್ಪಿನಂಗಡಿ ಠಾಣೆಯ ಆಗಿನ ಸಹಾಯಕ ಉಪನಿರೀಕ್ಷಕ ಲಾರೆನ್ಸ್ ಪಿ.ಆರ್. ಬೆಳ್ತಂಗಡಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮನು ಬಿ.ಕೆ. ಅವರು ಆರೋಪಿತರಾದ ಪ್ರಜ್ವಲ್ ಕೆ.ವಿ ಮತ್ತು ರಾಧಾಕೃಷ್ಣರವರನ್ನು ದೋಷಿಯೆಂದು ನಿರ್ಣಯಿಸಿ ಶಿಕ್ಷೆ ವಿಧಿಸಿದ್ದಾರೆ. ಕಲಂ ೧೧೫(೨), ೨೯(೪) ಬಿಎನ್‌ಎಸ್‌ನಡಿಯ ಅಪರಾಧಕ್ಕಾಗಿ ಆರು ತಿಂಗಳು ಸಾದಾ ಕಾರಾಗೃಹ ವಾಸ ಮತ್ತು ಐದು ಸಾವಿರ ರೂ.ದಂಡ ಮತ್ತು ದಂಡ ತರಲು ತಪ್ಪಿದಲ್ಲಿ ಹೆಚ್ಚುವರಿ ಮೂರು ತಿಂಗಳು ಕಾರಾಗೃಹ ವಾಸ ಹಾಗೂ ಕಲಂ ೩೫೧(೨), ೩೫೨ ಬಿಎನ್‌ಎಸ್ ನಡೆಯ ಅಪರಾಧಕ್ಕಾಗಿ ಆರು ತಿಂಗಳು ಸಾದಾ ಕಾರಾಗೃಹ ವಾಸ ಮತ್ತು ಐದು ಸಾವಿರ ದಂಡ ಮತ್ತು ದಂಡ ತರಲು ತಪ್ಪಿದಲ್ಲಿ ಹೆಚ್ಚುವರಿ ಆರು ತಿಂಗಳು ಕಾರಾಗೃಹ ವಾಸ ವಿಧಿಸಲಾಗಿದ್ದು ದಂಡದ ಮೊತ್ತವನ್ನು ಸಂತ್ರಸ್ತರ ಪರಿಹಾರಾರ್ಥವಾಗಿ ಗಾಯಾಳು ಪ್ರವೀಣ್‌ರವರಿಗೆ ನೀಡಲು ಆದೇಶಿಸಲಾಗಿದೆ.

ಒಂದನೇ ಆರೋಪಿ ಕಿರಣ್ ಶಿಶಿಲ ಅವರು ಸಾಕ್ಷಿ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರತ್ಯೇಕ ವಿಚಾರಣೆ ನಡೆಯಬೇಕಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಶಿಕ್ಷೆ ವಿಧಿಸಿರುವ ಆದೇಶವನ್ನು ಪ್ರಶ್ನಿಸಿ ಆರೋಪಿಗಳಾದ ರಾಧಾಕೃಷ್ಣ ಮತ್ತು ಪ್ರಜ್ವಲ್ ಕೆ.ವಿ. ಅವರ ಪರ ವಕೀಲರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಮೇಲ್ಮನವಿ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಅಮಾನತಿನಲ್ಲಿರಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here