ಮನೆಕಳ್ಳತನ ಪ್ರಕರಣಗಳ ತಡೆಗೆ ಪೊಲೀಸ್ ಇಲಾಖೆಯ ವಿನೂತನ ಕ್ರಮ `ಲಾಕ್ಸ್ ಹೌಸ್ ಬೀಟ್ ಸಿಸ್ಟಮ್’ತಾತ್ಕಾಲಿಕವಾಗಿ ಮನೆ ಲಾಕ್ ಮಾಡಿ ತೆರಳುವವರಿಗೆ ವರದಾನ! ಪೊಲೀಸರಿಗೆ ಮಾಹಿತಿ ನೀಡಿ ನಿಶ್ಚಿಂತರಾಗಿರಿ

0

ಬೆಳ್ತಂಗಡಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೀಗ ಹಾಕಿದ, ಯಾರೂ ಇಲ್ಲದ ಮನೆಗಳಲ್ಲಿ ಕಳವು ನಡೆಯುವ ಸಾಧ್ಯತೆ ಹೆಚ್ಚು. ಪ್ರವಾಸ, ಹಬ್ಬ, ಮದುವೆ ಸಮಾರಂಭ ಹಾಗೂ ಬೇಸಿಗೆ ರಜಾ ದಿನಗಳಲ್ಲಿ ಮನೆಯವರೆಲ್ಲರೂ ಬೀಗ ಹಾಕಿಕೊಂಡು ಹೊರಗೆ ಹೋಗುತ್ತಾರೆ. ಈ ಸಂದರ್ಭವೇ ಕಳ್ಳರಿಗೆ ಅನುಕೂಲ ಮಾಡಿಕೊಡುತ್ತದೆ. ಹೀಗಾಗಿಯೇ ಬೀಗ ಹಾಕಿದ ಮನೆಗಳ ಕಳವು ಕೃತ್ಯಗಳನ್ನು ಸಮರ್ಥವಾಗಿ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೊಸ ಕಾರ್ಯಕ್ರಮವೊಂದನ್ನು ರೂಪಿಸಿದೆ. ಸಾರ್ವಜನಿಕರು ಕೆಲಸದ ನಿಮಿತ್ತ, ಶುಭಕಾರ್ಯ ಅಥವಾ ಪ್ರವಾಸಕ್ಕಾಗಿ ತಮ್ಮ ಮನೆಯನ್ನು ಲಾಕ್ ಮಾಡಿ ಹೊರಗೆ ಹೋದಾಗ ಅಂತಹ ಮನೆಗಳ ಮೇಲೆ ನಿಗಾ ಇಡಲು ಜಿಲ್ಲಾ ಪೊಲೀಸ್ ವತಿಯಿಂದ ಲಾಕ್ಸ್ ಹೌಸ್ ಬೀಟ್ ಸಿಸ್ಟಮ್ ಎನ್ನುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ.

ಏನಿದು ಲಾಕ್ ಹೌಸ್ ಬೀಟ್ ಸಿಸ್ಟಮ್?: ಇದು ಸಾರ್ವಜನಿಕರು ತಾತ್ಕಾಲಿಕವಾಗಿ ತಮ್ಮ ಮನೆಗಳಿಗೆ ಬೀಗ ಹಾಕಿ ಕೆಲ ದಿನಗಳ ಕಾಲ ತೆರಳುವ ಅಂದರೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭಗಳಲ್ಲಿ ಮನೆಯ ಸುರಕ್ಷತೆಯ ಬಗ್ಗೆ ನಿಗಾ ವಹಿಸುವ ಪೊಲೀಸ್ ಇಲಾಖೆಯ ಯೋಜನೆ. ಆನೇಕ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಇದ್ದರೂ ಸಹ ಕಳ್ಳರು ವಿಶೇಷವಾಗಿ ಬೀಗ ಹಾಕಿದ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಾರೆ. ಇದನ್ನು ತಡೆಯಲು ಸಾರ್ವಜನಿಕರು ತಾವು ಊರಿಗೆ ತೆರಳುವ ಮುನ್ನ ಇಲಾಖೆಗೆ ಮಾಹಿತಿ ನೀಡಿದರೆ ಅಂತಹ ಮನೆಗಳ ಮೇಲೆ ಬೀಟ್ ಸಿಬ್ಬಂದಿ ಮತ್ತು ಗಸ್ತು ಪೊಲೀಸರು ನಿರಂತರ ಕಣ್ಗಾವಲು ಇಡಲಿದ್ದಾರೆ. ಆ ಮನೆ ಇರುವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಠಾಣಾ ಬೀಟ್ ಸಿಬ್ಬಂದಿಯು ಭೇಟಿ ನೀಡಿ ರಾತ್ರಿ ಮತ್ತು ಹಗಲು ವೇಳೆ ಆ ಮನೆಯ ಸೂಕ್ತ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಲಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ?: ಸಾರ್ವಜನಿಕರು ತಮ್ಮ ಮನೆಗೆ ಬೀಗ ಹಾಕಿ ಹೊರಗಡೆ ತೆರಳುವ ಸಮಯದಲ್ಲಿ ಕಂಟ್ರೋಲ್ ರೂಂ ಸಂಖ್ಯೆಗೆ ಮಾಹಿತಿ ನೀಡಿ ಮನೆಯ ಸಂಪೂರ್ಣ ವಿಳಾಸ ಮತ್ತು ಲೊಕೇಶನ್, ಇತ್ತೀಚಿನ ಫೋಟೋ, ಮನೆಗೆ ಬೀಗ ಹಾಕಿ ತೆರಳುವ ಅವಧಿ ಇತ್ಯಾದಿ ಮಾಹಿತಿಯನ್ನು ಕಂಟ್ರೋಲ್ ರೂಂಗೆ ನೀಡಬೇಕು. ಅಲ್ಲಿಂದ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಈ ಮಾಹಿತಿ ರವಾನೆಯಾಗುತ್ತದೆ.
ಈ ಮಾಹಿತಿ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ನಿರ್ವಹಣೆ ಮಾಡುವ ಅಧಿಕಾರಿ, ಸಿಬ್ಬಂದಿಗಳು ಮನೆಗೆ ಭೇಟಿ ನೀಡಿ ಮನೆಯ ಸುರಕ್ಷತೆಯನ್ನು ಪರಿಶೀಲಿಸುವ ಕೆಲಸ ಮಾಡಲಿದ್ದಾರೆ. ಜೊತೆಗೆ ನೈಟ್ ರೌಂಡ್ ಅಧಿಕಾರಿ, ಮೇಲ್ವಿಚಾರಣೆಗೆ ಸಬ್ ಡಿವಿಜನಲ್ ಆಫೀಸರ್, ಜಿಲ್ಲಾ ಮಟ್ಟದಲ್ಲಿ ಬೀಟ್ ಮಾನಿಟರ್ ಮಾಡುವುದಕ್ಕೆ ಡಿಎಸ್‌ಪಿ ಹಂತದ ಅಧಿಕಾರಿ ಇರುತ್ತಾರೆ. ಡೇ ಬೀಟ್‌ಗೆ ಕೂಡ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅವರು ಕೂಡ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಪ್ರತೀ ಸಂದರ್ಭದಲ್ಲಿ ಕೇವಲ ಒಂದು ಬಾರಿ ಪೊಲೀಸರು ನಿಮ್ಮ ಪ್ರದೇಶಕ್ಕೆ ಬರಬಹುದು. ಆದರೆ ಬೀಗ ಹಾಕಿರುವ ಮನೆಗಳ ಬಗ್ಗೆ ಮಾಹಿತಿ ನೀಡಿದಲ್ಲಿ ರಾತ್ರಿ ಗಸ್ತಿನ ವೇಳೆ ಅಧಿಕಾರಿ ಸಿಬ್ಬಂದಿಗಳು ಎರಡು ಮೂರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸ ಮಾಡಲಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿದೆ.

೦೮೨೪-೨೪೪೦೨೮೪ಗೆ ಕರೆ ಮಾಡಿ : ಪೊಲೀಸ್ ಇಲಾಖೆಯಿಂದ ಲಾಕ್ ಹೌಸ್ ಬೀಟ್ ಸಿಸ್ಟಂ ಎನ್ನುವ ಉಪಕ್ರಮವನ್ನು ಜಾರಿಗೊಳಿಸಲಾಗಿದೆ. ನಾಗರಿಕರು ಬೇರೆ ಬೇರೆ ಕಾರಣಗಳಿಗಾಗಿ ತಮ್ಮ ಮನೆಗೆ ಬೀಗ ಹಾಕಿ ೨-೩ ದಿನಗಳ ಕಾಲ ಹೊರಗಡೆ ತೆರಳುವ ಸಂದರ್ಭದಲ್ಲಿ ಆ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಮ್‌ಗೆ ನೀಡಿ ಮನೆಯ ಭಾವಚಿತ್ರ, ಮನೆಯ ಲೊಕೇಶನ್ ಶೇರ್ ಮಾಡಿದಾಗ ಸರಹದ್ದಿನ ಪೊಲೀಸ್ ಠಾಣೆಯ ಬೀಟ್ ಕರ್ತವ್ಯದ ಪೊಲೀಸರು ಆ ಮನೆಗೆ ಭೇಟಿ ನೀಡಿ ಮನೆಯ ಸುರಕ್ಷತೆಯನ್ನು ಪರಿಶೀಲಿಸುತ್ತಾರೆ. ಪೊಲೀಸ್ ಇಲಾಖೆಯ ಈ ಸಾರ್ವಜನಿಕ ಸ್ನೇಹಿ ಉಪಕ್ರಮವನ್ನು ಎಲ್ಲಾ ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಸಾರ್ವಜನಿಕರು ೦೮೨೪-೨೪೪೦೨೮೪ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಲಾಕ್ಸ್ ಹೌಸ್ ಬೀಟ್ ಸಿಸ್ಟಮ್‌ನ ಸೇವೆಯನ್ನು ಪಡೆಯಬಹುದಾಗಿದೆ.

ಮಾಹಿತಿ ಹಂಚಿಕೊಳ್ಳಬೇಡಿ: ಸಾರ್ವಜನಿಕರು ತಮ್ಮ ಕೌಟುಂಬಿಕ ಕಾರ್ಯಕ್ರಮಗಳು ಪ್ರವಾಸ, ತೀರ್ಥಯಾತ್ರೆ ಇತ್ಯಾದಿ ಉzಶಗಳಿಗಾಗಿ ಕೆಲ ದಿನಗಳ ಕಾಲ ತಮ್ಮ ಮನೆಗೆ ಬೀಗ ಹಾಕಿ ತೆರಳುತ್ತಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್, ಪೋಸ್ಟ್‌ಗಳನ್ನು ಹಂಚಿಕೊಂಡಲ್ಲಿ ಅಪರಾಧ, ಕಳ್ಳತನ ಎಸಗುವವರಿಗೆ ಸುಲಭದಲ್ಲಿ ಮಾಹಿತಿ ನೀಡಿದಂತಾಗುತ್ತದೆ. ಇಂತಹ ಮಾಹಿತಿಯಿಂದ ಇವರ ಮನೆಯಲ್ಲಿ ಯಾರೂ ಇಲ್ಲ ಎನ್ನುವುದನ್ನು ಗಮನಿಸಿಕೊಂಡು ಕಳ್ಳತನಕ್ಕೆ ಮುಂದಾಗುವ ಸಾಧ್ಯತೆಗಳಿರುತ್ತವೆ. ಅಥವಾ ನಿಗದಿತವಾಗಿ ಹಾಲು, ದಿನಪತ್ರಿಕೆ ಇತ್ಯಾದಿಗಳನ್ನು ವಿತರಿಸುವವರಿಗೂ ಮನೆಯಲ್ಲಿ ಎಷ್ಟು ದಿನ ಇರುವುದಿಲ್ಲ ಎನ್ನುವ ಮಾಹಿತಿಗಳನ್ನು ನೀಡಿ ತೆರಳಬೇಕಾಗುತ್ತದೆ. ಮನೆಯ ಬಾಗಿಲ ಬಳಿ ದಿನಪತ್ರಿಕೆಗಳು ರಾಶಿ ಬಿದ್ದಿದ್ದರೆ ಅವುಗಳು ಕೂಡ ಮನೆಯಲ್ಲಿ ಯಾರೂ ಇಲ್ಲ ಎನ್ನುವ ಸೂಚನೆಯನ್ನು ನೀಡುತ್ತವೆ. ಹೀಗಾಗಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಬೇಕು. ಅಲ್ಲಿ ಅನಗತ್ಯವಾಗಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಜೊತೆಗೆ ಯಾವುದೇ ಅಧಿಕೃತವಲ್ಲದ ಅಥವಾ ಅಪರಿಚಿತ ಸಂಖ್ಯೆಗಳೊಂದಿಗೆ ಮನೆಯ ವಿವರ ಹಾಗೂ ಮಾಹಿತಿ ಹಂಚಿಕೊಳ್ಳಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

LEAVE A REPLY

Please enter your comment!
Please enter your name here