೧೪ ವರ್ಷಗಳ ಹಿಂದೆ ಚಿನ್ನ ಎಗರಿಸಲು ಪ್ರಯತ್ನಿಸಿದಾಗ ತಡೆದ ವೇಳೆ ನಡೆದ ಘಟನೆತಣ್ಣೀರುಪಂತದ ಖತೀಜಮ್ಮರ ಕೊಲೆ ಪ್ರಕರಣ: ಅಜ್ಜಾವರದ ಅಜೀಜ್ ಆಂಧ್ರಪ್ರದೇಶದಲ್ಲಿ ಬಂಧನ

0

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮದ ಅಳಕೆ ಎಂಬಲ್ಲಿ ಹದಿನಾಲ್ಕು ವರ್ಷಗಳ ಹಿಂದೆ ಚಿನ್ನ ಎಗರಿಸಲು ಯತ್ನಿಸಿದಾಗ ತಡೆದ ಸಂಬಂಧಿ ಮಹಿಳೆ ಖತೀಜಮ್ಮರವರನ್ನು ಕೊಲೆ ಮಾಡಿ ಕಡಬ ತಾಲೂಕಿನ ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ಮೃತದೇಹವನ್ನು ಮೋರಿಯಡಿಗೆ ಎಸೆದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದರೂ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಸುಳ್ಯ ತಾಲೂಕಿನ ಅಜ್ಜಾವರ ನಿವಾಸಿ ಅಬ್ದುಲ್ ಅಜೀಜ್ ಎಂಬಾತನನ್ನು ಪೊಲೀಸರು ಆಂಧ್ರ ಪ್ರದೇಶದಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟನೆಯ ವಿವರ: ೨೦೧೨ರ ಜನವರಿ ೩೧ರಂದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ರಸ್ತೆಯಲ್ಲಿರುವ ಮೋರಿಯೊಂದರ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿತ್ತು. ಕಡಬ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಮೃತದೇಹ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ಅಬ್ಬಾಸ್ ಎಂಬವರ ಪತ್ನಿ ಖತೀಜ ಎಂಬವರದ್ದು ಎಂದು ಪತ್ತೆ ಮಾಡಿದ್ದರು.

ನಂತರ ಈ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿದ್ದ ಪೊಲೀಸರು ತನಿಖೆ ನಡೆಸಿ ಅಜೀಜ್ ಮತ್ತು ಆತನ ತಂಗಿಯರು ಸೇರಿ ಖತೀಜಮ್ಮ ಅವರನ್ನು ಕೊಲೆಗೈದಿದ್ದರು ಎಂದು ಮಾಹಿತಿ ಕಲೆ ಹಾಕಿದ್ದರು. ಮೃತ ಖತೀಜಮ್ಮ ಅವರ ತಮ್ಮನಾದ ಪುತ್ತೂರು ಸಮೀಪದ ಮೊಟ್ಟೆತ್ತಡ್ಕದ ಇಸಾಕ್ ಎಂಬವರಿಗೆ ಅಜ್ಜಾವರದ ಅಬ್ದುಲ್ ಅಜೀಜ್ ಅವರ ತಂಗಿ ಜತೆಗೆ ಮದುವೆಯಾಗಿತ್ತು. ಈ ಮಧ್ಯೆ ಕಳ್ಳತನದ ಆರೋಪಕ್ಕೊಳಗಾಗಿ ವಿದೇಶಕ್ಕೆ ಪರಾರಿಯಾಗಿದ್ದ ಅಜೀಜ್ ಐದು ವರ್ಷದ ಬಳಿಕ ವಿದೇಶದಿಂದ ಹಿಂತಿರುಗಿದ್ದ. ಆತನಿಗೆ ಹಣದ ಅವಶ್ಯಕತೆ ಇದ್ದುದರಿಂದ ತನ್ನ ದೂರದ ಬಂಧುವಾದ ಖತೀಜಮ್ಮ ಅವರಲ್ಲಿ ಚಿನ್ನಾಭರಣವಿರುವ ವಿಚಾರವನ್ನು ತಂಗಿಯಂದಿರಿಂದ ತಿಳಿದುಕೊಂಡಿದ್ದ ಆತ ಚಿನ್ನವನ್ನು ಎಗರಿಸಲು ಸಂಚು ರೂಪಿಸಿದ್ದ.

೨೦೧೨ರ ಜನವರಿ ೯ರಂದು ತನ್ನ ತಂಗಿಯಂದಿರ ಜತೆ ಖತೀಜಮ್ಮ ಅವರ ಮನೆಗೆ ಹೋಗಿ ಖತೀಜಮ್ಮರ ಚಿನ್ನವನ್ನು ಎಗರಿಸಲು ಪ್ರಯತ್ನಿಸಿದ್ದ. ಆ ವೇಳೆ ಖತೀಜಮ್ಮ ಅವರು ಆಕ್ಷೇಪಿಸಿದಾಗ ಅಜೀಜ್ ಅವರ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಅಲ್ಲದೆ ತಂಗಿಯಂದಿರ ಜತೆ ಸೇರಿ ಮೃತದೇಹವನ್ನು ಮಾರುತಿ ಓಮ್ನಿ ಕಾರಿನಲ್ಲಿ ಹಾಕಿಕೊಂಡು ಒಂದು ಕಡಬ ತಾಲೂಕಿನ ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿಯ ನಿರ್ಜನ ಪ್ರದೇಶದಲ್ಲಿ ರಸ್ತೆಯ ಮೋರಿಯೊಂದರ ಅಡಿಗೆ ಎಸೆದಿದ್ದರು. ಬಳಿಕ ಆರೋಪಿಗಳೆಲ್ಲರ ಬಂಧನವಾಗಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಪುತ್ತೂರು ಉಪವಿಭಾಗದ ಆಗಿನ ಸಹಾಯಕ ಪೊಲೀಸ್ ಅಧೀಕ್ಷಕ ಎಂ.ಎನ್.ಅನುಚೇತ್ ಅವರು ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತ್ತು. ಈ ಆದೇಶದ ವಿರುದ್ಧ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ವಿಜಯ್ ಕುಮಾರ್ ಬಿ.ಪಾಟೀಲ್ ಅವರಿದ್ದ ದ್ವಿಸದಸ್ಯ ಪೀಠ ಆರೋಪಿ ಅಬ್ದುಲ್ ಅಜೀಜ್‌ಗೆ ೧೯ ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಮತ್ತು ರೂ.೨,೦೦,೦೦೦ ದಂಡವನ್ನು ಪಾವತಿಸುವಂತೆ ಆದೇಶ ನೀಡಿದ್ದರು.

ಸರ್ಕಾರಿ ಅಭಿಯೋಜಕರಾಗಿದ್ದ ಕೆ.ಪಿ. ಯಶೋದರವರು ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ವಾದ ಮಂಡನೆ ಮಾಡಿದ್ದರು. ಆದರೆ ಅಪರಾಧಿಗೆ ಶಿಕ್ಷೆ ಪ್ರಕಟವಾದ ಬಳಿಕ ಆತ ಪೊಲೀಸರಿಂದ ತಲೆ ಮರೆಸಿಕೊಂಡು ಆಂಧ್ರಪ್ರದೇಶ ಇನ್ನಿತರ ಕಡೆಗಳಲ್ಲಿ ಅಡಗಿಕೊಂಡಿದ್ದ. ಇದೀಗ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿಗಳು ಆತನನ್ನು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ ಬಂಧಿಸಿ ಏ.೨೫ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಚಿನ್ನ ಲಪಟಾಯಿಸಲು ಹೋದಾಗ ಅಡ್ಡ ಬಂದ ಅತ್ತಿಗೆಯನ್ನು ಕೊಲೆಗೈದು ಮೃತದೇಹವನ್ನು ಮೋರಿಯಡಿ ಬಿಸಾಡಿದ್ದ ಆರೋಪ ಅಬ್ದುಲ್ ಅಜೀಜ್ ಮೇಲಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಆತ ಬಳಿಕ ಜಾಮೀನಿನಲ್ಲಿ ಹೊರ ಬಂದಿದ್ದ. ನಂತರ ಕೇಸಿನ ವಿಚಾರಣೆ ನಡೆದು ಅಜೇಜ್‌ಗೆ ಶಿಕ್ಷೆ ಪ್ರಕಟವಾಗಿತ್ತು. ಆದರೆ ಆ ಸಮಯದಲ್ಲಿ ಅಜೀಜ್ ಪರಾರಿಯಾಗಿದ್ದ ಈಗ ಆತನನ್ನು ಹೈದರಾಬಾದ್‌ನಲ್ಲಿ ಬಂಧಿಸಿ ಕರೆತಂದು ಪುತ್ತೂರು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆತನನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here