







ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಹಚ್ಚಾಡಿ ನಡುಕೋಡಿ ಎಂಬಲ್ಲಿರುವ ಜಮೀನಿನ ವಿವಾದಕ್ಕೆ ಸಂಬಂಧಿಸಿ ಉಂಟಾದ ಸಂಘರ್ಷದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಅಕ್ರಮ ಪ್ರವೇಶಗೈದು ಸಿಸಿಟಿವಿ ಪುಡಿಗೈದು, ಸೊತ್ತುನಾಶ ಪಡಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಗೋಪಕುಮಾರ್ ವಿ. ಆರ್. ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಮನೋಹರ್ ಎಂಬವರು ನೀಡಿದ ದೂರಿನಂತೆ ಅಕ್ರಮ ಪ್ರವೇಶಗೈದು ಲೈಸೆನ್ಸ್ ಇಲ್ಲದ ಗನ್‌ನಿಂದ ಹಲ್ಲೆ ನಡೆಸಿದ ಆರೋಪದಡಿ ದೂರು ದಾಖಲಾಗಿದೆ.
ಗೋಪಕುಮಾರ್ ವಿ. ಆರ್. ಎಂಬವರು ನೀಡಿದ ದೂರಿನಂತೆ ಮೊದಲು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೊದಲು ದಾಖಲಾದ ಎಫ್‌ಐಆರ್‌ನಲ್ಲಿ ಮನೋಹರ್, ಶಾಂತಲಾ ರಾಜೇಶ್ ಪ್ರಭು ಹಾಗೂ ವಕೀಲೆ ಟಿಸ್ಮಿ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ. ಗೋಪಕುಮಾರ್ ಅವರು ಏ. ೨೪ರಂದು ಮಧ್ಯಾಹ್ನ ೧.೩೦ ಗಂಟೆಗೆ ಮನೆಯಲ್ಲಿದ್ದಾಗ ಶಾಂತಲಾ ರಾಜೇಶ್ ಪ್ರಭುರವರ ಪ್ರೇರಣೆ ಮೇರೆಗೆ ಮನೋಹರ್, ವಕೀಲರಾದ ಟಿಸ್ಮಿ ಹಾಗೂ ಇತರ ೨೫ ಜನರು ಗೋಪಕುಮಾರ್ ಅವರ ಸ್ವಾಧೀನದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗಕ್ಕೆ ಅಳವಡಿಸಿದ ಗೇಟು ಮುರಿದು ಅವರ ಜಾಗಕ್ಕೆ ಅಳವಡಿಸಿದ ಸಿ.ಸಿ. ಕ್ಯಾಮರಾ ಹಾಗೂ ಡಿ.ವಿ.ಆರ್. ನಾಶಪಡಿಸಿ ಮೆಮೋರಿ ಕಾರ್ಡ್ ಕದ್ದುಕೊಂಡು ಹೋಗಿದ್ದಾರೆ. ಗೋಪಕುಮಾರ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಣು ಹಾಗೂ ರಾಮು ಎಂಬವರಿಗೆ ಮನೋಹರ ಹಾಗೂ ಇತರರು ಕೈಯಿಂದ ಹಲ್ಲೆ ಮಾಡಿದ್ದಾರೆ.


ಬಳಿಕ ಗೋಪಕುಮಾರ್ ಅವರ ಮನೆಗೂ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿ ಮನೆಯೊಳಗೆ ಕೂಡಿ ಹಾಕಿ ನೀವು ಕೂಡಲೇ ಈ ಜಾಗವನ್ನು ಖಾಲಿ ಮಾಡಬೇಕು. ಇಲ್ಲವೆಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಜಾಗ ಶಾಂತಲ ಪ್ರಭು ರಾಜೇಶ್ ಅವರ ಹೆಸರಿನಲ್ಲಿದ್ದು ಪ್ರಸ್ತುತ ಗೋಪಕುಮಾರ್ ಅವರ ಸ್ವಾಧೀನದಲ್ಲಿ ಇರುವ ಬಗ್ಗೆ ಬೆಳ್ತಂಗಡಿ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಆದೇಶ ಮಾಡಿದೆ. ಈ ಆದೇಶ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಪುರಸ್ಕೃತಗೊಂಡಿದ್ದರೂ ಶಾಂತಲ ರಾಜೇಶ್ ಪ್ರಭು ಅವರು ಮನೋಹರ ಎಂಬವರಿಗೆ ಜಾಗವನ್ನು ಲೀಸ್‌ಗೆ ನೀಡಿದ್ದಾರೆ. ಶಾಂತಲ ರಾಜೇಶ್ ಪ್ರಭು ಅವರ ಪ್ರೇರಣೆಯಂತೆ ಮನೋಹರ, ಟಿಸ್ಮಿ ಹಾಗೂ ಇತರ ೨೫ ಜನರು ಗೋಪಕುಮಾರ್ ಅವರ ಮನೆಗೆ ಹಾಗೂ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸೊತ್ತುಗಳನ್ನು ನಾಶಪಡಿಸಿದ್ದಾರೆ. ಇದರಿಂದ ಸುಮಾರು ೮೦ ಸಾವಿರದಷ್ಟು ನಷ್ಟವನ್ನು ಉಂಟುಪಡಿಸಿದ್ದಾರೆ. ಹಾಗೂ ಗೋಪಕುಮಾರ್ ಅವರ ಕೆಲಸದವರಿಗೆ ಹಲ್ಲೆ ಮಾಡಿದ ಬಗ್ಗೆ ತುರ್ತು ಪೊಲೀಸ್ ಸಹಾಯವಾಣಿ ೧೧೨ಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾರೆ. ಈ ಬಗ್ಗೆ ಗೋಪುಕುಮಾರ್ ಅವರು ಠಾಣೆಗೆ ಬಂದು ಆಪಾದಿತರ ವಿರುದ್ಧ ದೂರು ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಇದೇ ಘಟನೆಗೆ ಸಂಬಂಧಿಸಿ ಮನೋಹರ್ ಪಿ. ಆರ್. ಎಂಬವರು ನೀಡಿದ ದೂರಿಗೆ ಸಂಬಂಧಿಸಿ ಗರ್ಡಾಡಿ ಗ್ರಾಮದ ಹಚ್ಚಾಡಿ ನಡುಕೋಡಿಯಲ್ಲಿರುವ ಪಟ್ಟಾ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಕೈಯಿಂದ ಮತ್ತು ಲೈಸೆನ್ಸ್ ಇಲ್ಲದ ಗನ್‌ನಿಂದ ಹಲ್ಲೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ೮ ಮಂದಿಯ ವಿರುದ್ಧ ಆರ್ಮ್ಸ್ ಆಕ್ಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಏ.೨೪ರಂದು ಮಧ್ಯಾಹ್ನ ೧೨:೩೦ಕ್ಕೆ ಮನೋಹರ ಹಾಗೂ ಅವರ ವಕೀಲೆ ಟಿಸ್ಮಿ ಮತ್ತು ಶಾಂತಲಾ ರಾಜೇಶ್ ಪ್ರಭು ಹಾಗೂ ಅವರ ಕೆಲಸದವರ ಜೊತೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿರುವ ಅವರ ಪಟ್ಟಾ ಜಾಗಕ್ಕೆ ಭೇಟಿ ನೀಡಿದಾಗ ಗೋಪ ಕುಮಾರ್, ಶ್ರೀಜಾ ಗೋಪ ಕುಮಾರ್, ಸುಮೇಶ್ ಕುಮಾರ್, ಅಂಜಿ ಸುಮೇಶ್ ಕುಮಾರ್, ರಾಮು ಯಾನೆ ಬಾಬು, ಧೂಮ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಶಶಿರಾಜ್ ಶೆಟ್ಟಿ ಎಂಬವರು ಆಕ್ರಮವಾಗಿ ಪ್ರವೇಶಿಸಿ ಕೈಯಿಂದ ಹಾಗೂ ಲೈಸನ್ಸ್ ಇಲ್ಲದ ಗನ್‌ನಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಫ್.ಐ.ಆರ್.ನಲ್ಲಿ ಉಲ್ಲೇಖಿಸಲಾಗಿದೆ. ಎರಡೂ ಎಫ್‌ಐಆರ್ ದಾಖಲಾಗಿರುವ ಕುರಿತು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ತನಿಖೆ ನಡೆಸುತ್ತಿದ್ದಾರೆ.








