ಧರ್ಮಸ್ಥಳ ಮಂಜುನಾಥ ದೇವಾಲಯ ಸ್ಫೋಟಿಸಲು ಸಂಚು ರೂಪಿಸಿದ್ದು ಸತ್ಯ’ಮಂಗಳೂರು ಕುಕ್ಕರ್ ಬಾಂಬ್‌ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ತಪ್ಪೊಪ್ಪಿಗೆ

0

ಬೆಳ್ತಂಗಡಿ: ನಾಲ್ಕು ವರ್ಷಗಳ ಹಿಂದೆ ಕದ್ರಿ ಮತ್ತು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯ ಸಹಿತದ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿರುವುದು ಸತ್ಯ ಎಂದು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ವಿರುದ್ಧ ರಾಷ್ಟ್ರೀಯ ತನಿಖಾ ದಳ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿರುವ ಆರೋಪವನ್ನು ತಾನು ಒಪ್ಪಿಕೊಳ್ಳುವುದಾಗಿ ಕೋರ್ಟ್ ಮುಂದೆ ಶಾರೀಕ್ ಹೇಳಿಕೆ ನೀಡಿದ್ದಾನೆ.

ಮೊಹಮ್ಮದ್ ಶಾರೀಕ್ ತನ್ನನ್ನು ಪ್ರೇಮ್‌ರಾಜ್ ಹುಟಗಿ ಅಲಿಯಾಸ್ ಪ್ರೇಮರಾಜ್ ಮತ್ತು ಗೌಲಿ ಅರುಣ್ ಕುಮಾರ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಧರ್ಮಸ್ಥಳ ಮತ್ತು ಕದ್ರಿಯ ಮಂಜುನಾಥ ದೇವಾಲಯ, ತಮಿಳುನಾಡು ವೇಲೂರಿನ ದೇವಾಲಯ, ಕನ್ಯಾಕುಮಾರಿ ಸಹಿತ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಪೋಟಗೊಳಿಸುವ ಸಂಚು ರೂಪಿಸಿದ್ದ. ಈ ಸ್ಥಳಗಳಿಗೆ ಭೇಟಿ ಕೂಡ ನೀಡಿದ್ದ. ಅದರ ಭಾಗವಾಗಿ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ಸ್ಪೋಟಗೊಳಿಸಲು ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ ಟೈಮರ್ ಫಿಕ್ಸ್ ಮಾಡಲಾಗಿತ್ತು. ೯೦ ನಿಮಿಷಗಳಿಗೆ ಫಿಕ್ಸ್ ಮಾಡುವ ಬದಲು ೯ ನಿಮಿಷಕ್ಕೆ ತಪ್ಪಾಗಿ ನಿಗದಿಪಡಿಸಿದ್ದರಿಂದ ಆಟೋದಲ್ಲಿ ತೆರಳುವಾಗ ಮಾರ್ಗ ಮಧ್ಯೆ ಮಂಗಳೂರು ನಾಗುರಿ ಬಳಿ ಬಾಂಬ್ ಕುಕ್ಕರ್ ಒಳಗೇ ಸ್ಫೋಟಗೊಂಡಿತ್ತು ಎಂದು ಎನ್‌ಐಎ ಕೋರ್ಟ್‌ಗೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು. ಈ ಆರೋಪಗಳನ್ನು ಶಾರೀಕ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ಈಗಾಗಲೇ ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಕ್ತಾಯಗೊಳಿಸಲಾಗಿದೆ.

ಎ.೧೦ರಂದು ತೀರ್ಪು ಪ್ರಕಟ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರೀಕ್ ೨೦೨೫ರ ಡಿಸೆಂಬರ್‌ನಲ್ಲೇ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಬಿಎನ್‌ಎನ್‌ಎಸ್ ೨೨೯ರ ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಅದನ್ನು ಈಗ ಪುರಸ್ಕರಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಎ.೧೦ರಂದು ಪ್ರಕಟಗೊಳಿಸಲಿದೆ. ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ೧೭೦ ಮಂದಿ ಸಾಕ್ಷಿಗಳ ಹೇಳಿಕೆ ಉಲ್ಲೇಖಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಈಗಾಗಲೇ ೪೬ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಯನ್ನು ವಿಚಾರಣೆ ನಡೆಸಲಾಗಿದೆ. ಈ ಮಧ್ಯೆ ಎನ್‌ಐಎ ಅಧಿಕಾರಿಗಳು ತನ್ನ ವಿರುದ್ಧ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪವನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದು ಕಳೆದ ಡಿಸೆಂಬರ್‌ನಲ್ಲಿಯೇ ಶಾರೀಕ್ ಅರ್ಜಿ ಸಲ್ಲಿಸಿದ್ದ. ಆದರೆ ಪ್ರಕರಣದ ವಿಚಾರಣೆ ವೇಳೆ ಅಂದರೆ ೨೦೨೪ರಲ್ಲಿ ನೀನು ತಪ್ಪೊಪ್ಪಿಕೊಂಡಿರಲಿಲ್ಲ.
ಈಗ ಏಕಾಏಕಿ ಒಪ್ಪಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದ್ದ ನ್ಯಾಯಾಲಯ ತಪ್ಪೊಪ್ಪಿಗೆ ಹೇಳಿಕೆಯನ್ನು ಮರು ಪರಿಶೀಲಿಸಿಕೊಳ್ಳುವ ಸಲುವಾಗಿ ಸುದೀರ್ಘ ವಿಚಾರಣೆ ಮಾಡಿತ್ತು. ಅಂತಿಮವಾಗಿ ತಾನು ತಪ್ಪು ಮಾಡಿದ್ದೇನೆ ಎಂದು ಆರೋಪಿ ಪುನರುಚ್ಚರಿಸಿರುವುದರಿಂದ ಕೋರ್ಟ್ ಆರೋಪಿಯ ಅರ್ಜಿಯನ್ನು ಪುರಸ್ಕರಿಸಿದೆ ಎನ್‌ಐಎ ಪರ ಹಿರಿಯ ಸರಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಮತ್ತು ಸಿ. ಸಚಿನ್ ವಾದ ಮಂಡಿಸಿದ್ದರು.

ಸ್ಫೋಟಕ ವಿಷಯ: ಆರೋಪಿಯ ವಿಚಾರಣೆಯಲ್ಲಿ ಕೆಲವು ಸ್ಫೋಟಕ ವಿಷಯಗಳು ಬೆಳಕಿಗೆ ಬಂದಿದ್ದವು. ೨೦೨೦ರಲ್ಲಿ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮೊಹಮ್ಮದ್ ಶಾರೀಕ್‌ನನ್ನು ಬಂಧಿಸಲಾಗಿತ್ತು. ೧೦ ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಬಳಿಕ ಬಿಡುಗಡೆಯಾಗಿ ಬಂದ ಈತ ಸುಮಾರು ೧೨ ಮಂದಿಯ ತಂಡವನ್ನು ಕಟ್ಟಿಕೊಂಡು ೨೦೨೨ರ ಸೆಪ್ಟೆಂಬರ್‌ನಲ್ಲಿ ತುಂಗಾ ನದಿ ತೀರದಲ್ಲಿ ಐಇಡಿ ಪ್ರಾಯೋಗಿಕ ಸ್ಫೋಟ ಮಾಡಿದ್ದ. ಆಗ ತಪ್ಪಿಸಿಕೊಂಡಿದ್ದ ಆರೋಪಿ ಬಳಿಕ ಜೈಲಿನಿಂದ ಹೊರ ಬಂದು ಮಂಗಳೂರು ಕುಕ್ಕರ್ ಸ್ಫೋಟದಲ್ಲಿ ಸಿಕ್ಕಿ ಬಿದ್ದಿದ್ದ. ಈತನ ವಿರುದ್ಧ ಭಯೋತ್ಪಾದನೆ, ಕ್ರಿಮಿನಲ್ ಪಿತೂರಿ, ಕೊಲೆಯತ್ನ, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಗಳು ಇದೆ. ೨೦೨೦ರಿಂದ ೨೦೨೨ರ ಅವಧಿಯಲ್ಲಿ ಕ್ರಿಪ್ಪೋ ಕರೆನ್ಸಿ ವ್ಯವಹಾರ ನಡೆಸಿದ್ದ ಆರೋಪವೂ ಈತನ ಮೇಲಿದೆ. ಈತ ಐಸಿಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ ಮತ್ತು ಶಿವಮೊಗ್ಗ ಐಸಿಸ್ ಮಾಡ್ಯುಲ್ ಸದಸ್ಯನಾಗಿದ್ದ. ಈತನ ಸಹಚರರು ೨೦೨೪ರ ಮಾ.೧ರಂದು ನಡೆದ ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟದ ರೂವಾರಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here