






ಉಜಿರೆ: ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲೇ ತಪ್ಪಿಲ್ಲದೆ ಸ್ಪಷ್ಟ ಕನ್ನಡ ಹಾಗು ಇಂಗ್ಲೀಷ್ ಬರವಣಿಗೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅಕ್ಷರ ಜ್ಞಾನ ಅತಿ ಪ್ರಾಮುಖ್ಯವಾದುದು. ಮಕ್ಕಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದ ಜತೆಗೆ ಜೀವನ ಶಿಕ್ಷಣ ಹಾಗು ಸ್ಪಷ್ಟ ಕನ್ನಡ ಮತ್ತು ಬರವಣಿಗೆಯನ್ನು ರೂಢಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ತಹಸೀಲ್ದಾರ್ ಪ್ರಥ್ವಿ ಸಾನಿಕಮ್ ನುಡಿದರು. ಅವರು ಏ. 2 ರಂದು ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ನಿಲಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 6 ದಿನಗಳ “ಅಕ್ಷರ ಜ್ಞಾನ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಎಸ್. ಡಿ. ಎಂ ಪ.ಪೂ.ಕಾಲೇಜು ಪ್ರಾಂಶುಪಾಲ ಪ್ರೊ !ಪ್ರಮೋದ್ ಕುಮಾರ್ ಮಾತನಾಡಿ ನಮ್ಮ ಭಾಷೆ,ಸಂಸ್ಕೃತಿ,ಸಹಬಾಳ್ವೆ ನಮ್ಮ ಮುಂದಿನ ಜೀವನಕ್ಕೆ ದಾರಿ ರೂಪಿಸುತ್ತದೆ. ಹಿಂದಿನ ಕೂಡು ಕುಟುಂಬ ಇಂದು ಮರೆಯಾಗಿದೆ. ಇಂದಿನ ಯಾಂತ್ರಿಕ ಜೀವನದಿಂದ ನಮ್ಮ ಜ್ಞಾನ ಸೀಮಿತಗೊಂಡಿದೆ. ಶಿಬಿರದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷಾ ಜ್ಞಾನ ತರಬೇತಿ ವಿಶಿಷ್ಟ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳು ಅದರ ಪೂರ್ಣ ಪ್ರಯೋಜನ ಪಡೆಯಬೇಕು ಎಂದರು.


ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಮಾತನಾಡಿ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಎಲ್ಲ 16 ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಬೇಸಿಗೆ ಶಿಬಿರ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಎಲ್ಲ ಕಲೆ, ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡುವುದರಿಂದ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದು ನುಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕ ಮಂಜು ಆರ್ .,ಸಾಹಿತಿ ಅರುಣಾ ಶ್ರೀನಿವಾಸ್ ಮತ್ತು ಅನುಗ್ರಹ ಕಾಲೇಜು ಹಿಂದಿ ಶಿಕ್ಷಕಿ ಗೀತಾ ಜೋಶಿ ಭಾಗವಹಿಸಿ ಕನ್ನಡ ಭಾಷಾ ಬೆಳವಣಿಗೆ, ಇಂಗ್ಲಿಷ್ ಬರವಣಿಗೆ,ಹಿಂದಿ ಬರವಣಿಗೆ, ಕಥೆಗಳ ರಚನೆ, ಭಾಷಣ ಕಲೆ, ಕನ್ನಡ ಭಾಷಾ ಉಚ್ಚಾರಣಾ ದೋಷಗಳು, ಭಜನಾ ತರಬೇತಿ, ಇಂಗ್ಲಿಷ್ ಭಾಷಾ ವ್ಯಾಕರಣ , ಹಿಂದಿ ಪದ ರಚನೆ ಮೊದಲಾದ ವಿಚಾರಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ನಿಲಯ ಪಾಲಕ ಯತೀಶ್ ಕುಮಾರ್, ಶಿಕ್ಷಕರಾದ ರವಿಚಂದ್ರ, ಉದಯರಾಜ್ ಉಪಸ್ಥಿತರಿದ್ದರು. ಅತುಲ್ ಸ್ವಾಗತಿಸಿ, ಸಮ್ಯಕ್ ಜೈನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಕೇಶ್ ಡಿ. ಆರ್. ವಂದಿಸಿದರು.









