ಉಜಿರೆ: ಸ್ವರಲಹರಿಯಲ್ಲಿ ಮೂಡಿಬಂದ “ನಮ್ಮೂರ ದೇವರು” ಭಕ್ತಿಗೀತೆ – ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ ಕೃಷ್ಣ ಪಡ್ವೆಟ್ನಾಯರಿಂದ ಲೋಕಾರ್ಪಣೆ

0

ಉಜಿರೆ: ಉಜಿರೆಯ ಆರಾಧ್ಯ ದೈವ, ಕ್ಷೇತ್ರಪಾಲ ಶ್ರೀ ಜನಾರ್ದನ ಸ್ವಾಮಿ ದೇವರ ಬ್ರಹ್ಮಕಲಶೋತ್ಸವದ ಭಕ್ತಿ ಪರಾಕಾಷ್ಠೆ ಎಲ್ಲೆಡೆ ಮನೆಮಾಡಿದೆ. ಆರಾಧ್ಯ ದೈವ, ಭಕ್ತರ ಕಷ್ಟಗಳಿಗೆ ಮರುಗುವ ಶ್ರೀ ಜನಾರ್ದನ ಸ್ವಾಮಿಯ ಮಹಿಮೆಯನ್ನು ಸಾರುವ ಹೊಚ್ಚ ಹೊಸ ಭಕ್ತಿಗೀತೆ “ನಮ್ಮೂರ ದೇವರು” ಅದ್ದೂರಿಯಾಗಿ ಲೋಕಾರ್ಪಣೆಗೊಂಡಿದೆ.

ದಿನೇಶ್ ಕೋಟ್ಯಾನ್ ಅವರು ತಮ್ಮ ಭಕ್ತಿಯ ಪರಾಕಾಷ್ಠೆಯ ಮೂಲಕ ಮೂಡಿಬಂದಿರುವ “ನಮ್ಮೂರ ದೇವರು” ಎಂಬ ಈ ಅದ್ಭುತ ಭಕ್ತಿಗೀತೆಯನ್ನು ಫೆ.23 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ ಕೃಷ್ಣ ಪಡ್ವೆಟ್ನಾಯ ಅವರು ಗೀತೆಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿ, ಶುಭ ಹಾರೈಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರತಾಪ್‌ ಸಿಂಹ ನಾಯಕ್‌, ಗೋಪುರ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಕೆ. ಮೋಹನ್‌ ಕುಮಾರ್‌, ಭಕ್ತಿಗೀತೆ ರಚಿಸಿರುವ ದಿನೇಶ್‌ ಕೋಟ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಹಾಡು ಉಜಿರೆಯ ಶ್ರೀ ಜನಾರ್ದನ ಸ್ವಾಮಿಯ ಮಹಿಮೆಯನ್ನು ಕೊಂಡಾಡುವ ಜೊತೆಗೆ, ಭಕ್ತರ ಮನದಲ್ಲಿ ದೈವಿಕ ಭಾವವನ್ನು ಜಾಗೃತಗೊಳಿಸುವಂತಿದೆ.ಕ್ಷೇತ್ರದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡುವ ಈ ಬ್ರಹ್ಮಕಲಶೋತ್ಸವದ ಸಮಯದಲ್ಲಿ, ಇಂತಹ ಭಕ್ತಿಪೂರ್ವಕ ಕಲಾ ಸೇವೆಗಳು ಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ. ದೈವಿಕ ಅನುಭೂತಿ ನೀಡುವ ಈ ಗೀತೆಯು ಬ್ರಹ್ಮಕಲಶದ ಸಂಭ್ರಮಕ್ಕೆ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here