ಜಿಲ್ಲೆಯಾದ್ಯಂತ ಹಲವು ಗ್ರಾಮಗಳಿಗೆ ಬಾರದ ಬೆಳೆವಿಮೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ – ಕುಶಾಲಪ್ಪ ಗೌಡ ಪೂವಾಜೆ

0

ಬೆಳ್ತಂಗಡಿ :ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ ಅವರು ಜಿಲ್ಲೆಯಲ್ಲಿ ಕೆಲವು ಗ್ರಾಮಗಳಿಗೆ ಬಾರದ ಬೆಳೆವಿಮೆ ಕುರಿತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಕೆಲ ತಾಲೂಕಿನ ಹಲವು ಗ್ರಾಮಗಳಿಗೆ 2024-25ನೇ ಸಾಲಿನ ಬೆಳೆವಿಮೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌ನ ಎಲ್ಲಾ ನಿರ್ದೇಶಕರು, ಜಿಲ್ಲಾಮಟ್ಟದ ಅಧಿಕಾರಿಗಳು, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ವಿಮಾ ಕಂಪನಿಯ ಪ್ರತಿನಿಧಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಚರ್ಚೆಯ ವೇಳೆ ಮಳೆ ಮಾಪನದ ತಾಂತ್ರಿಕ ದೋಷದಿಂದಾಗಿ ಕೆಲವು ಪ್ರದೇಶಗಳಲ್ಲಿ ವರದಿ ಸರಿಯಾಗಿ ದಾಖಲಾಗದೇ ವಿಳಂಬ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಬಂಧಿತ ದೋಷಗಳನ್ನು ತಕ್ಷಣ ಸರಿಪಡಿಸಿ ಎಲ್ಲಾ ಅರ್ಹ ರೈತರಿಗೆ ಬೆಳೆವಿಮೆ ತಲುಪಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿ ಮತ್ತೊಮ್ಮೆ ವಿಚಾರಿಸಿದಾಗ, ಪರಿಶೀಲನಾ ಕಾರ್ಯ ನಡೆಯುತ್ತಿದ್ದು 15 ದಿನಗಳೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದ್ದಾರೆ.ಒಂದು ವೇಳೆ ನಿಗದಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ತಾವು ಸೇರಿ ಮಾರ್ಚ್ 4ರ ನಂತರ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ಕುಶಾಲಪ್ಪ ಗೌಡ ಪೂವಾಜೆ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here